ನಾಲ್ಕನೇ ಟ್ವೆಂಟಿ-20 : ಇಂಗ್ಲೆಂಡ್ ವಿರುದ್ಧ 219 ರನ್ ಬೆನ್ನಟ್ಟಿ ಗೆದ್ದ ವಿಂಡೀಸ್

Update: 2024-11-17 16:49 GMT

PC : PTI 

ಸೈಂಟ್ ಲೂಸಿಯಾ: ಶೈ ಹೋಪ್(54 ರನ್, 24 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಎವಿನ್ ಲೆವಿಸ್(68 ರನ್, 31 ಎಸೆತ, 4 ಬೌಂಡರಿ, 7 ಸಿಕ್ಸರ್) ಅರ್ಧಶತಕಗಳೊಂದಿಗೆ ಮೊದಲ ವಿಕೆಟ್‌ ಗೆ 136 ರನ್ ಜೊತೆಯಾಟ ನಡೆಸುವ ಮೂಲಕ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ 4ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸುವಲ್ಲಿ ನೆರವಾದರು.

ಶನಿವಾರ ಕೇವಲ 9.1 ಓವರ್‌ಗಳಲ್ಲಿ ಶತಕದ ಜೊತೆಯಾಟದಲ್ಲಿ ಭಾಗಿಯಾದ ಹೋಪ್ ಹಾಗೂ ಲೆವಿಸ್ ಅವರು ವೆಸ್ಟ್‌ಇಂಡೀಸ್ ತಂಡ 219 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲು ನೆರವಾದರು.

ಲೆವಿಸ್, ಹೋಪ್ ಹಾಗೂ ನಿಕೊಲಸ್ ಪೂರನ್ 10ನೇ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದಾಗ ಉತ್ತಮ ಆರಂಭ ಪಡೆದು ಆತ್ಮವಿಶ್ವಾಸದಲ್ಲಿದ್ದ ವಿಂಡೀಸ್ ತಂಡವು ಆಘಾತಕ್ಕೆ ಒಳಗಾಯಿತು. ಆದರೆ ನಾಯಕ ರೊವ್‌ಮನ್ ಪೊವೆಲ್ 23 ಎಸೆತಗಳಲ್ಲಿ 38 ರನ್ ಗಳಿಸಿ ಇನಿಂಗ್ಸ್ ಅನ್ನು ಹಳಿಗೆ ತಂದರು. ಸತತ ಸಿಕ್ಸರ್‌ಗಳನ್ನು ಸಿಡಿಸಿದ ರುದರ್‌ಫೋರ್ಡ್(ಔಟಾಗದೆ 29, 17 ಎಸೆತ) ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ವಿಂಡೀಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಂದ್ಯದಲ್ಲಿ ಒಟ್ಟು 32 ಸಿಕ್ಸರ್‌ಗಳು ಸಿಡಿಯಲ್ಪಟ್ಟಿದ್ದು, ಪ್ರತಿ ತಂಡವು ತಲಾ 16 ಸಿಕ್ಸರ್ ಸಿಡಿಸಿದವು. ಮೊದಲ ಮೂರು ಪಂದ್ಯಗಳನ್ನು ಕ್ರಮವಾಗಿ 8 ವಿಕೆಟ್, 7 ವಿಕೆಟ್ ಹಾಗೂ ಮೂರು ವಿಕೆಟ್‌ಗಳಿಂದ ಗೆದ್ದುಕೊಂಡಿರುವ ಇಂಗ್ಲೆಂಡ್ ತಂಡವು ಈಗಾಗಲೇ ಐದು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡವು ವಿಂಡೀಸ್ ನಂಟು ಹೊಂದಿರುವ ಫಿಲ್ ಸಾಲ್ಟ್ ಹಾಗೂ ಜೇಕಬ್ ಬೆಥೆಲ್ ಅರ್ಧಶತಕಗಳ ಕೊಡುಗೆಯ ಸಹಾಯದಿಂದ ಡರೆನ್ ಸಮ್ಮಿ ಸ್ಟೇಡಿಯಮ್‌ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 218 ರನ್ ಗಳಿಸಿತು.

ಬಾರ್ಬಡೋಸ್‌ನಲ್ಲಿ ಹುಟ್ಟಿ ಬೆಳೆದಿರುವ ಬೆಥೆಲ್ ಅವರು 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಿತ ಔಟಾಗದೆ 62 ರನ್ ಗಳಿಸಿದರು. ವೇಲ್ಸ್‌ನಲ್ಲಿ ಜನಿಸಿದ್ದರೂ ಬಾರ್ಬಡೋಸ್‌ನಲ್ಲಿ ಬೆಳೆದು ದೊಡ್ಡವನಾಗಿರುವ ಸಾಲ್ಟ್ ಅವರು ಅಗ್ರ ಸರದಿಯಲ್ಲಿ 35 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳ ನೆರವಿನಿಂದ 55 ರನ್ ಗಳಿಸಿದ್ದಾರೆ.

ವಿಲ್ ಜಾಕ್ಸ್(25 ರನ್), ನಾಯಕ ಜೋಸ್ ಬಟ್ಲರ್(38 ರನ್)ಹಾಗೂ ಸ್ಯಾಮ್ ಕರನ್(24 ರನ್)ಇಂಗ್ಲೆಂಡ್ ತಂಡವು 5 ವಿಕೆಟ್‌ಗೆ 218 ರನ್ ಗಳಿಸಲು ತಮ್ಮದೇ ಕೊಡುಗೆ ನೀಡಿದರು.

ಗೆಲ್ಲಲು ಕಠಿಣ ಗುರಿ ಪಡೆದ ವೆಸ್ಟ್‌ಇಂಡೀಸ್ ತಂಡ ಬಿರುಸಿನ ಆರಂಭ ಪಡೆಯಿತು. ಹೋಪ್ 23 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಪವರ್ ಪ್ಲೇ ನಂತರ ವಿಂಡೀಸ್ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದ್ದು, ಕೇವಲ 7.3 ಓವರ್‌ಗಳಲ್ಲಿ ಶತಕ ತಲುಪಿತು.

ಲೆವಿಸ್ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು, 105 ಮೀಟರ್ ಎತ್ತರಕ್ಕೆ ಸಿಕ್ಸರ್ ಸಿಡಿಸಿದರು. ಹೋಪ್ ಹಾಗೂ ಲೆವಿಸ್ ಕೇವಲ 45 ಎಸೆತಗಳಲ್ಲಿ ಶತಕದ ಜೊತೆಯಾಟ ನಡೆಸಿದರು. ರೆಹಾನ್ ಅಹ್ಮದ್ ಅವರು ಲೆವಿಸ್ ವಿಕೆಟನ್ನು ಪಡೆದು ಈ ಜೋಡಿಯನ್ನು ಬೇರ್ಪಡಿಸಿದರು.

ಹೋಪ್ ಸತತ ಎರಡನೇ ಪಂದ್ಯದಲ್ಲಿ ರನೌಟಾದರು. ಪೂರನ್ ತಾನೆದುರಿಸಿದ ಮೊದಲ ಎಸೆತದಲ್ಲಿ ರೆಹಾನ್ ಅಹ್ಮದ್‌ಗೆ ಕ್ಲೀನ್‌ಬೌಲ್ಡಾದರು. ಆಗ ವೆಸ್ಟ್‌ಇಂಡೀಸ್ 136 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.

ಐದು ವಿಕೆಟ್ ಹೊಂದಿದ್ದ ವಿಂಡೀಸ್‌ಗೆ ಕೊನೆಯ 3 ಓವರ್‌ಗಳಲ್ಲಿ ಗೆಲ್ಲಲು 21 ರನ್ ಅಗತ್ಯವಿತ್ತು. ಆ ನಂತರ 2 ಓವರ್‌ಗಳಲ್ಲಿ 15 ರನ್ ಅಗತ್ಯವಿತ್ತು. ಆಗ ರುದರ್‌ಫೋರ್ಡ್ ಅವರು ಡಾನ್ ಮೌಸ್ಲೆ ಬೌಲಿಂಗ್‌ನಲ್ಲಿ ಸತತ ಸಿಕ್ಸರ್‌ಗಳನ್ನು ಸಿಡಿಸಿ ವಿಂಡೀಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News