ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಗೆ ದಿನಗಣನೆ | ಆಸ್ಟ್ರೇಲಿಯದಲ್ಲಿ ಮೊದಲ ಬಾರಿ ಐದು ಪಂದ್ಯಗಳ ಸರಣಿ ಆಡಲಿರುವ ಭಾರತ
ಹೊಸದಿಲ್ಲಿ : ಬಹು ನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ(ಬಿಜಿಟಿ)ಗಾಗಿ ನಡೆಯಲಿರುವ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದೆ. 1996ರಲ್ಲಿ ಬಿಜಿಟಿ ಸರಣಿ ಆರಂಭವಾದ ನಂತರ ಇದೇ ಮೊದಲ ಬಾರಿ ಆಸ್ಟ್ರೇಲಿಯ ನೆಲದಲ್ಲಿ ಟೀಮ್ ಇಂಡಿಯಾವು 5 ಪಂದ್ಯಗಳ ಸರಣಿಯನ್ನು ಆಡಲು ಸಜ್ಜಾಗಿದೆ.
ಸಾಂಪ್ರದಾಯಿಕ ಮಾದರಿಯ ಪಂದ್ಯದಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ)ಪರಿಚಯಿಸಲ್ಪಟ್ಟ ನಂತರ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವತ್ತ ದಿಟ್ಟ ಹೆಜ್ಜೆ ಇಡಲು ಪ್ರತಿ ಟೆಸ್ಟ್ ಸರಣಿಗಳು ಅತ್ಯಂತ ಮುಖ್ಯವಾಗಿದೆ.
ಡಬ್ಲ್ಯುಟಿಸಿ ಇತಿಹಾಸದಲ್ಲಿ ಭಾರತ ತಂಡವು ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡಗಳ ಪೈಕಿ ಒಂದಾಗಿದೆ. ಹಿಂದಿನ ಎರಡು ಆವೃತ್ತಿಯಲ್ಲಿ ಎರಡು ಬಾರಿ ಫೈನಲ್‌ಗೆ ತಲುಪಿದೆ. ಡಬ್ಲ್ಯುಟಿಸಿ ಇತಿಹಾಸದಲ್ಲಿ ಈಗ 3ನೇ ಆವೃತ್ತಿ ನಡೆಯುತ್ತಿದ್ದು, ಭಾರತವು ಹ್ಯಾಟ್ರಿಕ್ ಫೈನಲ್ ತಲುಪುವ ನಿಟ್ಟಿನಲ್ಲಿ ತೀವ್ರ ಸ್ಪರ್ಧೆಯೊಡ್ಡುತ್ತಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯವು ಸದ್ಯದ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಭಾರತ 2ನೇ ಸ್ಥಾನದಲ್ಲಿದೆ. ಬಿಜಿಟಿ ಸರಣಿಯು ಎರಡು ಅಗ್ರ ತಂಡಗಳ ನಡುವಿನ ಹೋರಾಟವಾಗಿದ್ದು, ಮುಂದಿನ ವರ್ಷದ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು ಈ ಸರಣಿಯು ಪ್ರಮುಖವಾಗಿದೆ.
ಸ್ವದೇಶದಲ್ಲಿ ಅನಿರೀಕ್ಷಿತವಾಗಿ ನ್ಯೂಝಿಲ್ಯಾಂಡ್ ವಿರುದ್ಧ 0-3 ಅಂತರದಿಂದ ಕ್ಲೀನ್‌ಸ್ವೀಪ್‌ಗೆ ಒಳಗಾಗಿರುವ ಭಾರತವು ಈಗ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಿಸುತ್ತಿದೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಐದು ಪಂದ್ಯಗಳಲ್ಲಿ 4ರಲ್ಲಿ ಜಯ ಗಳಿಸುವ ಅಗತ್ಯವಿದೆ.
ಐತಿಹಾಸಿಕವಾಗಿ ಸ್ವದೇಶದಲ್ಲಿ ಆಸ್ಟ್ರೇಲಿಯ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. ಆಸ್ಟ್ರೇಲಿಯ ನೆಲದಲ್ಲಿ ನಡೆದಿರುವ 27 ಬಿಜಿಟಿ ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡವು 14ರಲ್ಲಿ ಜಯ ಸಾಧಿಸಿದೆ.
ಭಾರತ ತಂಡವು ಆಸ್ಟ್ರೇಲಿಯದಲ್ಲಿ ಕೇವಲ 6 ಪಂದ್ಯಗಳನ್ನು ಜಯಿಸುಲು ಶಕ್ತವಾಗಿದೆ. ಅತ್ಯಂತ ಮುಖ್ಯ ಅಂಶವೆಂದರೆ ಈ ನಾಲ್ಕು ಗೆಲುವು ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಬಂದಿದೆ. ಈ ಎರಡು ಸಂದರ್ಭದಲ್ಲಿ ಭಾರತವು 2-1 ಅಂತರದಿಂದ ಸರಣಿಯಲ್ಲಿ ಜಯ ಸಾಧಿಸಿದೆ.
ಆಸ್ಟ್ರೇಲಿಯದ ಎಲ್ಲ ಐದು ಪ್ರಮುಖ ಕ್ರೀಡಾಂಗಣಗಳಲ್ಲಿ ಇದೇ ಮೊದಲ ಬಾರಿ ನಡೆಯುವ ಬಿಜಿಟಿ ಸರಣಿಗೆ ಭಾರತ ತಂಡ ಸಜ್ಜಾಗಿದೆ. ಪ್ರತಿಷ್ಠಿತ ಟೂರ್ನಿಯಲ್ಲಿ ಐದು ಕ್ರೀಡಾಂಗಣದಲ್ಲಿ ಭಾರತದ ಸಾಧನೆಯತ್ತ ಒಂದು ನೋಟ ಇಲ್ಲಿದೆ.
*ಅಡಿಲೇಡ್: 7 ಪಂದ್ಯ, ಭಾರತಕ್ಕೆ 2, ಆಸ್ಟ್ರೇಲಿಯಕ್ಕೆ 4ರಲ್ಲಿ ಜಯ, ಒಂದು ಪಂದ್ಯ ಡ್ರಾ
ಭಾರತವು 1999ರಲ್ಲಿ ಅಡಿಲೇಡ್ ಓವಲ್‌ನಲ್ಲಿ ಮೊದಲ ಬಾರಿ ತನ್ನ ಬಿಜಿಟಿ ಪಂದ್ಯ ಆಡಿತ್ತು. ಆಗ 285 ರನ್‌ನಿಂದ ಸೋತಿತ್ತು. ಆ ನಂತರ ಪ್ರತಿ ಸರಣಿಯಲ್ಲೂ ಅಡಿಲೇಡ್ ಬಿಜಿಟಿ ಪಂದ್ಯಗಳ ಆತಿಥ್ಯ ವಹಿಸಿದೆ. ಈ ಮೈದಾನದಲ್ಲಿ ಭಾರತವು ಎರಡು ಬಾರಿ ಜಯ ಸಾಧಿಸಿತ್ತು. 2003ರಲ್ಲಿ 4 ವಿಕೆಟ್ ಹಾಗೂ 2018ರಲ್ಲಿ 31 ರನ್ ಅಂತರದಿಂದ ಗೆದ್ದಿತ್ತು. ಈ ಎರಡು ಗೆಲುವು ಸರಣಿ ಫಲಿತಾಂಶದ ಮೇಲೆ ಗಮನಾರ್ಹ ಪರಿಣಾಮಬೀರಿತ್ತು. 2003ರಲ್ಲಿ ಮೊದಲ ಬಾರಿ ಬಿಜಿಟಿ ಪಂದ್ಯ ಜಯಿಸಿದ್ದ ಭಾರತವು 4 ಪಂದ್ಯಗಳ ಸರಣಿಯನ್ನು 1-1ರಿಂದ ಡ್ರಾಗೊಳಿಸಿತ್ತು.
2018ರಲ್ಲಿ ಅಡಿಲೇಡ್‌ನಲ್ಲಿ ಗೆದ್ದ ನಂತರ ಭಾರತವು 1-0 ಮುನ್ನಡೆ ಪಡೆದಿತ್ತು. ಇದು 4 ಪಂದ್ಯಗಳ ಸರಣಿಯ ಮೊದಲ ಪಂದ್ಯವಾಗಿತ್ತು. ಪ್ರವಾಸಿಗರು ಆ ನಂತರ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡರು.
*ಮೆಲ್ಬರ್ನ್: 7 ಪಂದ್ಯಗಳು, ಭಾರತ 2, ಆಸ್ಟ್ರೇಲಿಯಕ್ಕೆ 4ರಲ್ಲಿ ಜಯ, 1 ಡ್ರಾ
ಅಡಿಲೇಡ್‌ನಂತೆಯೇ ಪ್ರತಿಷ್ಠಿತ ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ 1999ರಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತವು 180 ರನ್ ಅಂತರದಿಂದ ಸೋತಿತ್ತು. ಆ ನಂತರ ಭಾರತವು ಮೆಲ್ಬರ್ನ್‌ನಲ್ಲಿ ಮುಂದಿನ 6 ಪಂದ್ಯಗಳಲ್ಲಿ ಮೂರರಲ್ಲಿ ಸೋತಿತ್ತು. ಎರಡರಲ್ಲಿ ಜಯ ಸಾಧಿಸಿತ್ತು.
2014ರ ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಡ್ರಾಗೊಳಿಸುವ ಮೊದಲು ಭಾರತವು ಸತತ 4 ಪಂದ್ಯಗಳಲ್ಲಿ ಸೋತಿತ್ತು. ಆದರೆ ಭಾರತವು ಹಿಂದಿನ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಫಲಿತಾಂಶವು ಆಸ್ಟ್ರೇಲಿಯದಲ್ಲಿ ಭಾರತವು ಹಿಂದಿನ ಎರಡು ಸರಣಿಗಳನ್ನು ಗೆಲ್ಲಲು ಪ್ರಮುಖ ಪಾತ್ರವಹಿಸಿದೆ.
*ಸಿಡ್ನಿ: 7 ಪಂದ್ಯ, ಭಾರತ 0, ಆಸ್ಟ್ರೇಲಿಯಕ್ಕೆ 3ರಲ್ಲಿ ಜಯ, ನಾಲ್ಕು ಪಂದ್ಯ ಡ್ರಾ
ಆಸ್ಟ್ರೇಲಿಯದಲ್ಲಿರುವ ಸಿಡ್ನಿ ಕ್ರಿಕೆಟ್ ಮೈದಾನ(ಎಸ್‌ಸಿಜಿ)ದಲ್ಲಿ ಮಾತ್ರ ಭಾರತ ತಂಡವು ಬಿಜಿಟಿಯಲ್ಲಿ ಈ ತನಕ ಗೆಲುವಿನ ಖಾತೆ ತೆರೆದಿಲ್ಲ. ಪ್ರವಾಸಿಗರು ಎಸ್‌ಸಿಜಿಯಲ್ಲಿ 2000ರ ಜನವರಿಯಲ್ಲಿ ಇನಿಂಗ್ಸ್ ಹಾಗೂ 41 ರನ್ ಅಂತರದಿಂದ ಅತ್ಯಂತ ಹೀನಾಯ ಸೋಲು ಕಂಡಿದ್ದರು. ಪರಿಣಾಮವಾಗಿ ಭಾರತವು ಆಸ್ಟ್ರೇಲಿಯದಲ್ಲಿ 0-3 ಅಂತರದಿಂದ ಸರಣಿ ಸೋತಿತ್ತು.
ಭಾರತ ತಂಡವು ಸಿಡ್ನಿಯಲ್ಲಿ ಆಡಿರುವ 7 ಪಂದ್ಯಗಳ ಪೈಕಿ 3ರಲ್ಲಿ ಸೋತಿದೆ. 4 ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಸಿಡ್ನಿಯಲ್ಲಿ ಡ್ರಾ ಸಾಧಿಸಿರುವುದು ಸರಣಿಯಲ್ಲಿ ಭಾರತದ ಪರ ಫಲಿತಾಂಶ ಬರಲು ಕಾರಣವಾಗಿತ್ತು. 2004ರಲ್ಲಿ ಮೊದಲ ಬಾರಿ ಡ್ರಾ ಸಾಧಿಸಿದ ನಂತರ ಭಾರತವು ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು. ಕಳೆದ ಎರಡು ಸರಣಿಗಳಲ್ಲಿ ಡ್ರಾ ಸಾಧಿಸಿದ್ದರಿಂದ ಭಾರತವು ಯಶಸ್ವಿ ಅಭಿಯಾನ ನಡೆಸಿದೆ.
ಬ್ರಿಸ್ಬೇನ್: ಪಂದ್ಯ 3, ಭಾರತ 1, ಆಸ್ಟ್ರೇಲಿಯಕ್ಕೆ 1ರಲ್ಲಿ ಜಯ, ಡ್ರಾ 1
ಭಾರತವು ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಮಿಶ್ರ ಫಲಿತಾಂಶ ಪಡೆದಿದೆ. 2003-04ರಲ್ಲಿ ನಡೆದ ಮೊದಲ ಮುಖಾಮುಖಿಯು ಡ್ರಾನಲ್ಲಿ ಅಂತ್ಯಗೊಂಡಿದ್ದು, ಸರಣಿಯೂ ಡ್ರಾನಲ್ಲಿ ಕೊನೆಗೊಂಡಿತ್ತು.
ಬ್ರಿಸ್ಬೇನ್ ಮುಂದಿನ ಎರಡು ಸರಣಿಗಳ ಆತಿಥ್ಯದಿಂದ ವಂಚಿತವಾಗಿತ್ತು. 2014-15ರಲ್ಲಿ ಮತ್ತೆ ಸರಣಿ ಆಯೋಜಿಸಿತ್ತು. 2014ರಲ್ಲಿ ಭಾರತವು 4 ವಿಕೆಟ್‌ಗಳಿಂದ ಪಂದ್ಯ ಸೋತಿತ್ತು. ಪರಿಣಾಮವಾಗಿ ಭಾರತವು ಸರಣಿಯನ್ನು 0-2ರಿಂದ ಸೋತಿತ್ತು.
2021ರ ಜನವರಿಯಲ್ಲಿ ನಡೆದಿರುವ ಪಂದ್ಯದಲ್ಲಿ ಭಾರತವು 3 ವಿಕೆಟ್‌ಗಳ ಅಂತರದಿಂದ ಸ್ಮರಣೀಯ ಗೆಲುವು ದಾಖಲಿಸಿತ್ತು. ಆ ಪಂದ್ಯದಲ್ಲಿ ರಿಷಭ್ ಪಂತ್ 89 ರನ್ ಗಳಿಸಿದ್ದಲ್ಲದೆ, ಸುಂದರ್(22 ರನ್)ಜೊತೆಗೆ 6ನೇ ವಿಕೆಟ್‌ಗೆ 53 ರನ್ ಸೇರಿಸಿ ಭಾರತವು 328 ರನ್ ಗುರಿಯನ್ನು ಚೇಸ್ ಮಾಡಲು ನೆರವಾಗಿದ್ದರು. ಭಾರತವು ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು.
*ಪರ್ತ್: ಪಂದ್ಯ 3, ಭಾರತ 1, ಆಸ್ಟ್ರೇಲಿಯಕ್ಕೆ 2ರಲ್ಲಿ ಜಯ, ಡ್ರಾ 0
2007-08ರ ಸರಣಿಯಲ್ಲಿ ಪರ್ತ್ ಕ್ರೀಡಾಂಗಣವು ಬಿಜಿಟಿಯ ಭಾಗವಾಗಿತ್ತು. 2008ರ ಜನವರಿಯಲ್ಲಿ ಭಾರತವು ಪರ್ತ್‌ನಲ್ಲಿ ನಡೆದ ಬಿಜಿಟಿಯ ಮೊದಲ ಪಂದ್ಯವನ್ನು 72 ರನ್ ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಭಾರತ ತಂಡವು ಆ ನಂತರ ಮುಂದಿನ 2 ಪಂದ್ಯಗಳಲ್ಲಿ ಭಾರೀ ಅಂತರದಿಂದ ಸೋಲುಂಡಿತ್ತು.
ಭಾರತವು 2012ರಲ್ಲಿ ಇನಿಂಗ್ಸ್ ಹಾಗೂ 37 ರನ್‌ನಿಂದ , 2018ರಲ್ಲಿ 146 ರನ್ ಅಂತರದಿಂದ ಸೋತಿತ್ತು.