ಬಾಕ್ಸಿಂಗ್ ಡೇ ಟೆಸ್ಟ್: ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯ 187/3
ಮೆಲ್ಬರ್ನ್ : ಪಾಕಿಸ್ತಾನದ ವಿರುದ್ಧ ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ ಆಸ್ಟ್ರೇಲಿಯ ತಂಡ 66 ಓವರ್ಗಳಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ 187 ರನ್ ಗಳಿಸಿದೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟಕ್ಕೆ ಮಳೆ ಅಡ್ಡಿಯಾಯಿತು. ಇದರಿಂದಾಗಿ ನಿಗದಿತ ಓವರ್ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ದಿನದಂತ್ಯಕ್ಕೆ ಮಾರ್ನಸ್ ಲಾಬುಶೇನ್(44 ರನ್, 120 ಎಸೆತ)ಹಾಗೂ ಟ್ರಾವಿಸ್ ಹೆಡ್(ಔಟಾಗದೆ 9,19 ಎಸೆತ)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದ ಪಾಕ್ ನಾಯಕ ಶಾನ್ ಮಸೂದ್ ವೇಗಿಗಳಿಗೆ ಒಪ್ಪುವ ಪಿಚ್ ನಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆಸ್ಟ್ರೇಲಿಯದ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್(38 ರನ್) ಹಾಗೂ ಉಸ್ಮಾನ್ ಖ್ವಾಜಾ(42 ರನ್)ಮೊದಲ ವಿಕೆಟ್ಗೆ 90 ರನ್ಗಳ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
ಸ್ಟೀವ್ ಸ್ಮಿತ್ 26 ರನ್ ಗಳಿಸಿ ಔಟಾದರು. ಮತ್ತೊಂದೆಡೆ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ಲಾಬುಶೇನ್ 44 ರನ್ ಗಳಿಸಿ ಔಟಾಗದೆ ಉಳಿದರು.
ಆರಂಭದಲ್ಲೇ ಡೇವಿಡ್ ವಾರ್ನರ್ ಅವರ ಕ್ಯಾಚ್ ಕೈಚೆಲ್ಲಿರುವುದು ಪಾಕ್ ಗೆ ಹಿನ್ನಡೆಯಾಗಿ ಪರಿಣಮಿಸಿತು. ಪರ್ತ್ನಲ್ಲಿ ಮೊದಲ ಇನಿಂಗ್ಸ್ನಲ್ಲಿ 164 ರನ್ ಗಳಿಸಿದ್ದ ವಾರ್ನರ್ ಎರಡು ರನ್ ಗಳಿಸಿದ್ದಾಗ ಅಬ್ದುಲ್ಲಾ ಶಫೀಕ್ ರಿಂದ ಜೀವದಾನ ಪಡೆದರು. ಭೋಜನ ವಿರಾಮಕ್ಕೆ ಮೊದಲು ವಾರ್ನರ್ ಸ್ಪಿನ್ನರ್ ಅಘಾ ಸಲ್ಮಾನ್ ಬೌಲಿಂಗ್ನಲ್ಲಿ ಸ್ಪಿಪ್ನಲ್ಲಿ ಫೀಲ್ಡಿಂಗ್ ನಿರತ ಬಾಬರ್ ಆಝಮ್ ಗೆ ಕ್ಯಾಚ್ ನೀಡಿದರು. ಪ್ರಸಕ್ತ ಸರಣಿಯು ವಾರ್ನರ್ ಗೆ ವಿದಾಯದ ಸರಣಿಯಾಗಿದೆ.
ವಾರ್ನರ್ ಅವರ ಆರಂಭಿಕ ಜೊತೆಗಾರ ಖ್ವಾಜಾ ಗಾಝಾದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಗಮನ ಸೆಳೆಯಲು ಹೋಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ವಾಗ್ದಂಡನೆಗೆ ಒಳಗಾಗಿದ್ದರು. ತನ್ನ ಬ್ಯಾಟ್ ನಲ್ಲಿ ಕಪ್ಪು ಪಾರಿವಾಳದ ಸ್ಟಿಕ್ಕರನ್ನು ಪ್ರದರ್ಶಿಸಲು ಐಸಿಸಿ ಅವಕಾಶ ನಿರಾಕರಿಸಿತ್ತು. ಹೀಗಾಗಿ ಅವರು ತಮ್ಮ ಬೂಟುಗಳ ಮೇಲೆ ತನ್ನ ಹೆಣ್ಣುಮಗುವಿನ ಹೆಸರನ್ನು ಬರೆದುಕೊಂಡು ಬಂದು ಆಡಿದರು.
37ರ ಹರೆಯದ ಖ್ವಾಜಾ 42 ರನ್ ಗಳಿಸಿ ಹಸನ್ ಅಲಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಆಗ ಆಸ್ಟ್ರೇಲಿಯವು 2 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು.
ಮೋಡ ಕವಿದ ವಾತಾವರಣದಲ್ಲಿ ಚೆಂಡನ್ನು ಸ್ವಿಂಗ್ ಮಾಡಿದ ಹಸನ್ ಅಲಿ, ಅಮೀರ್ ಜಮಾಲ್ ಹಾಗೂ ಅಘಾ ಸಲ್ಮಾನ್ ತಲಾ ಒಂದು ವಿಕೆಟ್ ಪಡೆದರು.
ಮಧ್ಯಾಹ್ನದ ವೇಳೆಗೆ ಕಪ್ಪು ಮೋಡಗಳು ಕವಿದಾಗ, ಲೈಟ್ ಗಳನ್ನು ಬೆಳಗಿಸಲಾಯಿತು. ಆಗ ಲಾಬುಶೇನ್ ಹಾಗೂ ಸ್ಮಿತ್ ತಂಡದ ಇನಿಂಗ್ಸ್ ಆಧರಿಸಿದರು. ಸ್ಮಿತ್ ಹಾಗೂ ಲಾಬುಶೇನ್ ರಕ್ಷಣಾತ್ಮಕವಾಗಿ ಆಡಿದ್ದು, ರನ್ ಗಳಿಸಲು ತಿಣುಕಾಡಿದರು. ಲಾಬುಶೇನ್ 75 ಎಸೆತಗಳನ್ನು ಎದುರಿಸಿದ ನಂತರ ಮೊದಲ ಬೌಂಡರಿ ಗಳಿಸಿದರು. ಸ್ಮಿತ್ ವಿಕೆಟನ್ನು ಉರುಳಿಸಿದ ಆಮಿರ್ ಜಮಾಲ್ ಮೂರನೇ ವಿಕೆಟ್ಗೆ 46 ರನ್ ಜೊತೆಯಾಟವನ್ನು ಮುರಿದರು.
ಎಂಸಿಜಿ ಮೈದಾನದಲ್ಲಿ ಮೊದಲ ದಿನ 62,167 ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿದರು.
ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯ ತಂಡವು ಪಾಕಿಸ್ತಾನದ ವಿರುದ್ಧ 360 ರನ್ ಅಂತರದ ಬೃಹತ್ ಗೆಲುವು ದಾಖಲಿಸಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 66 ಓವರ್ಗಳಲ್ಲಿ 187/3
(ಲಾಬುಶೇನ್ ಔಟಾಗದೆ 44, ಉಸ್ಮಾನ್ ಖ್ವಾಜಾ 42, ಡೇವಿಡ್ ವಾರ್ನರ್ 38, ಸ್ಟೀವನ್ ಸ್ಮಿತ್ 26, ಅಘಾ ಸಲ್ಮಾನ್ 1-5, ಹಸನ್ ಅಲಿ 1-28, ಆಮಿರ್ ಜಮಾಲ್ 1-47)