ಕರ್ನಾಟಕ ರಣಜಿ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ ವಾಪಸ್

Update: 2024-02-06 16:08 GMT

ಮಯಾಂಕ್ ಅಗರ್ವಾಲ್  |  Photo: PTI

ಹೊಸದಿಲ್ಲಿ: ಇತ್ತೀಚೆಗೆ ಆರೋಗ್ಯದ ವಿಚಾರದಲ್ಲಿ ಆತಂಕಕ್ಕೆ ಒಳಗಾಗಿದ್ದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು, ತಮಿಳುನಾಡು ವಿರುದ್ಧ ಚೆನ್ನೈನಲ್ಲಿ ಶುಕ್ರವಾರ ಆರಂಭವಾಗಲಿರುವ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕತ್ವವನ್ನು ಮತ್ತೊಮ್ಮೆ ವಹಿಸಿಕೊಳ್ಳಲಿದ್ದಾರೆ.

ತ್ರಿಪುರಾ ವಿರುದ್ಧ ಪಂದ್ಯದ ನಂತರ ತಂಡದ ವಿಮಾನದಲ್ಲಿ ಅಗರ್ತಲದಿಂದ ಸೂರತ್ ಗೆ ಹೊರಟ್ಟಿದ್ದಾಗ ಭಾರತದ ಬ್ಯಾಟರ್ ಮಯಾಂಕ್ ತೀವ್ರ ಅಸ್ವಸ್ಥರಾಗಿದ್ದರು. 32ರ ಹರೆಯದ ಮಯಾಂಕ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದ ಭೀತಿಗೊಳಗಾದ ಕಾರಣ ಮಯಾಂಕ್ ರೈಲ್ವೇಸ್ ವಿರುದ್ಧ ಕರ್ನಾಟಕ ಆಡಿದ್ದ ಪಂದ್ಯದಿಂದ ಹೊರಗುಳಿದಿದ್ದರು.

ಸಂಪೂರ್ಣ ವೈದ್ಯಕೀಯ ಪರೀಕ್ಷೆಯ ನಂತರ ಸ್ವೀಕರಿಸಿದ ವರದಿಯಲ್ಲಿ ಯಾವುದೇ ಗಮನಾರ್ಹ ವೈದ್ಯಕೀಯ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಇದು ಅವರಿಗೆ ತಂಡಕ್ಕೆ ಮರಳಲು ಅನುವು ಮಾಡಿಕೊಟ್ಟಿತು.

ಮಯಾಂಕ್ ಅನುಪಸ್ಥಿತಿಯಲ್ಲಿ ಭರವಸೆಯ ಬ್ಯಾಟರ್ ನಿಕಿನ್ ಜೋಸ್ ರೈಲ್ವೇಸ್ ತಂಡದ ವಿರುದ್ಧ ಕರ್ನಾಟಕ ತಂಡವನ್ನು ನಾಯಕನಾಗಿ ಮುನ್ನಡೆಸಿದರು. ಸೂರತ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಕರ್ನಾಟಕ ತಂಡವು ಹಿರಿಯ ಬ್ಯಾಟರ್ ಮನೀಶ್ ಪಾಂಡೆ ಸಿಡಿಸಿದ ಅಜೇಯ ಅರ್ಧಶತಕದ ನೆರವಿನಿಂದ ರೈಲ್ವೇಸ್ ವಿರುದ್ಧ 1 ವಿಕೆಟ್ನಿಂದ ರೋಚಕ ಜಯ ಸಾಧಿಸಿತ್ತು.

ಪ್ರಸಕ್ತ ತಮಿಳುನಾಡು 21 ಅಂಕ ಗಳಿಸಿ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕರ್ನಾಟಕ ಕೂಡ 12 ಅಂಕ ಗಳಿಸಿದೆ. ಉತ್ತಮ ರನ್ರೇಟ್(2.06)ಹೊಂದಿರುವ ತಮಿಳುನಾಡು ಮೊದಲ ಸ್ಥಾನದಲ್ಲಿದೆ.

ಅಗರ್ವಾಲ್ ಮರಳಿಕೆಯಿಂದಾಗಿ ಕರ್ನಾಟಕದ ಬ್ಯಾಟಿಂಗ್ಗೆ ಶಕ್ತಿ ಬಂದಿದೆ. ಮಯಾಂಕ್ ಈ ತನಕ ಆಡಿರುವ 4 ಪಂದ್ಯಗಳಲ್ಲಿ 44ರ ಸರಾಸರಿಯಲ್ಲಿ 2 ಶತಕ ಹಾಗೂ ಒಂದು ಅರ್ಧಶತಕ ಸಹಿತ ಒಟ್ಟು 310 ರನ್ ಗಳಿಸಿದ್ದಾರೆ.

ಫಾರ್ಮ್ನಲ್ಲಿರುವ ದೇವದತ್ತ ಪಡಿಕ್ಕಲ್ ಕೂಡ ತಮಿಳುನಾಡು ಎದುರಿನ ಪಂದ್ಯಕ್ಕೆ ಲಭ್ಯವಿದ್ದಾರೆ. ಎಡಗೈ ಬ್ಯಾಟರ್ ಪಡಿಕ್ಕಲ್ 92ರ ಸರಾಸರಿಯಲ್ಲಿ 2 ಶತಕಗಳ ಸಹಿತ ಒಟ್ಟು 369 ರನ್ ಗಳಿಸಿದ್ದಾರೆ. ಅಹ್ಮದಾಬಾದ್ ನಲ್ಲಿ ಇಂಗ್ಲೆಂಡ್ ಲಯನ್ಸ್ ತಂಡವನ್ನು ಎದುರಿಸಿದ್ದ ಭಾರತ ಎ ತಂಡದಲ್ಲಿ ಆಡಿದ್ದ ಕಾರಣ 23ರ ಹರೆಯದ ಪಡಿಕ್ಕಲ್ ಹಿಂದಿನ ರಣಜಿ ಪಂದ್ಯದಿಂದ ವಂಚಿತರಾಗಿದ್ದರು.

ಅಗರ್ವಾಲ್ ಹಾಗೂ ಪಡಿಕ್ಕಲ್ ಪುನರಾಗಮನದ ಹಿನ್ನೆಲೆಯಲ್ಲಿ ಓಪನರ್ ದೇಗಾ ನಿಶ್ಚಲ್ ಹಾಗೂ ಅಭಿಷೇಕ್ ಶೆಟ್ಟಿ ಸ್ಥಾನ ತೆರವುಗೊಳಿಸಿದ್ದಾರೆ.

ತಮಿಳುನಾಡು ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್(ನಾಯಕ), ನಿಕಿನ್ ಜೋಸ್(ಉಪ-ನಾಯಕ), ದೇವದತ್ತ ಪಡಿಕ್ಕಲ್, ಸಮರ್ಥ್ ಆರ್., ಮನೀಶ್ ಪಾಂಡೆ, ಶರತ್ ಶ್ರೀನಿವಾಸ್(ವಿಕೆಟ್ಕೀಪರ್), ಅನೀಶ್ ಕೆ.ವಿ. ವೈಶಾಕ್ ವಿಜಯಕುಮಾರ್, ವಾಸುಕಿ ಕೌಶಿಕ್, ಶಶಿಕುಮಾರ್ ಕೆ., ಸುಜಯ್ ಸತೇರಿ(ವಿಕೆಟ್ಕೀಪರ್), ವಿದ್ವತ್ ಕಾವೇರಪ್ಪ, ವೆಂಕಟೇಶ್ ಎಂ., ಕಿಶನ್ ಎಸ್. ಬೆದಾರೆ, ರೋಹಿತ್ ಕುಮಾರ್, ಹಾರ್ದಿಕ್ ರಾಜ್.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News