ಚಾಂಪಿಯನ್ಸ್ ಟ್ರೋಫಿ: ನಾಳೆ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ-ನ್ಯೂಝಿಲ್ಯಾಂಡ್ ಸೆಣಸಾಟ

PC : championstrophy2025.com
ಕರಾಚಿ: ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಪಾಕಿಸ್ತಾನ ತಂಡವು ಬುಧವಾರ 2025ರ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಮೂಲಕ 8 ವರ್ಷಗಳ ಬಳಿಕ ನಡೆಯಲಿರುವ ‘ಮಿನಿ ವಿಶ್ವಕಪ್’ ಟೂರ್ನಿಗೆ ಚಾಲನೆ ಸಿಗಲಿದೆ.
ಪಂದ್ಯ ಆರಂಭವಾಗುವ ಮೊದಲೇ ನ್ಯೂಝಿಲ್ಯಾಂಡ್ ತಂಡವು ಬೌಲಿಂಗ್ ವಿಭಾಗದಲ್ಲಿ ಗಾಯದ ಸಮಸ್ಯೆ ಎದುರಿಸುವಂತಾಗಿದೆ. ಲಾಕಿ ಫರ್ಗ್ಯುಸನ್ ಕಾಲಿನ ಗಾಯದ ಸಮಸ್ಯೆಯಿಂದಾಗಿ ಇಡೀ ಪಂದ್ಯಾವಳಿಯಿಂದ ವಂಚಿತರಾಗಿದ್ದಾರೆ. ರವಿವಾರ ಅಫ್ಘಾನಿಸ್ತಾನ ವಿರುದ್ಧ ಅಭ್ಯಾಸ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ಒಳಗಾಗಿದ್ದರು. ತಕ್ಷಣವೇ ಸ್ವದೇಶಕ್ಕೆ ವಾಪಸಾದ ಫರ್ಗ್ಯುಸನ್ ಸ್ಥಾನಕ್ಕೆ ಕೈಲ್ ಜಮೀಸನ್ ಆಯ್ಕೆಯಾಗಿದ್ದಾರೆ. ಜಮೀಸನ್ 2023ರ ಸೆಪ್ಟಂಬರ್‌ನಲ್ಲಿ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ಆಡಿದ್ದರು.
ಅನುಭವಿ ಬೌಲರ್ ಮ್ಯಾಟ್ ಹೆನ್ರಿ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಜಮೀಸನ್ ಹಾಗೂ ಜೇಕಬ್ ಡಫಿ ಕಿವೀಸ್ ಗೆ ನೆರವಾಗುವ ಅವಕಾಶ ಪಡೆದಿದ್ದಾರೆ.
ಮತ್ತೊಂದೆಡೆ, ಪಾಕಿಸ್ತಾನ ತಂಡದಲ್ಲಿ ವೇಗದ ಬೌಲರ್ ಹ್ಯಾರಿಸ್ ರವೂಫ್ ಆಡಲು ಫಿಟ್ ಆಗಿದ್ದಾರೆ. ರವೂಫ್ ಗಾಯದ ಸಮಸ್ಯೆಯಿಂದಾಗಿ ನ್ಯೂಝಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ಒಳಗೊಂಡಿರುವ ಸ್ವದೇಶದಲ್ಲಿ ನಡೆದಿದ್ದ ತ್ರಿಕೋನ ಸರಣಿಯಿಂದ ಹೊರಗುಳಿದಿದ್ದರು.
ಪಾಕಿಸ್ತಾನ ತಂಡವನ್ನು ಮುಹಮ್ಮದ್ ರಿಝ್ವಾನ್ ನಾಯಕನಾಗಿ ಮುನ್ನಡೆಸಲಿದ್ದು, ಎಲ್ಲ ವಿಭಾಗಗಳಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. 2017ರಲ್ಲಿ ಪಾಕಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ನಾಯಕತ್ವ ನೀಡಿದ್ದ ಪಾಕಿಸ್ತಾನದ ನಾಯಕ ಸರ್ಫರಾಝ್ ಖಾನ್, ರಿಝ್ವಾನ್ ತಂಡಕ್ಕೆ ಸಲಹೆ ನೀಡಲಿದ್ದಾರೆ.
‘‘ಪಾಕಿಸ್ತಾನ ತಂಡವು ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಉತ್ತಮ ಅವಕಾಶ ಹೊಂದಿದೆ. ನನ್ನ ಪ್ರಕಾರ ಇದೊಂದು ಬಲಿಷ್ಠ ತಂಡ. 2017ರಲ್ಲಿ ಆಡಿರುವ ಕೆಲವು ಆಟಗಾರರು ಈಗಲೂ ಇದ್ದಾರೆ. ವಿಶೇಷವಾಗಿ ಬಾಬರ್ ಆಝಮ್ ಸಹಿತ ಕೆಲವು ಆಟಗಾರರ ಕುರಿತಾಗಿ ನಾವು ಮಾತನಾಡಬಹುದು’’ ಎಂದು ಐಸಿಸಿಗೆ ಬರೆದ ವಿಶೇಷ ಕಾಲಂನಲ್ಲಿ ಸರ್ಫರಾಝ್ ಅಭಿಪ್ರಾಯಪಟ್ಟರು.
ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಆಡಿದ್ದವು. ಮಿಚೆಲ್ ಸ್ಯಾಂಟ್ನರ್ ನೇತೃತ್ವದ ಕಿವೀಸ್ ಪಡೆ ಶ್ರೇಷ್ಠ ಪ್ರದರ್ಶನ ನೀಡಿ ಫೈನಲ್ ಸಹಿತ ಎಲ್ಲ ಪಂದ್ಯಗಳನ್ನು ಜಯಿಸಿ ಟ್ರೋಫಿ ಎತ್ತಿಹಿಡಿದಿದೆ.
ಪಾಕಿಸ್ತಾನ ತಂಡವು ತ್ರಿಕೋನ ಸರಣಿಯಲ್ಲಿ ಕಿವೀಸ್ ವಿರುದ್ಧ ಆಡಿರುವ ಎರಡೂ ಪಂದ್ಯಗಳನ್ನು ಸೋತಿದೆ. ಗ್ರೂಪ್ ಪಂದ್ಯವನ್ನು 5 ವಿಕೆಟ್ ಗಳಿಂದ ಸೋತಿದ್ದರೆ, ಫೈನಲ್ ಪಂದ್ಯವನ್ನು 78 ರನ್ ಗಳಿಂದ ಸೋತಿತ್ತು.
ತ್ರಿಕೋನ ಏಕದಿನ ಟ್ರೋಫಿ ಗೆಲುವು ನ್ಯೂಝಿಲ್ಯಾಂಡ್‌ಗೆ ಭಾರೀ ಆತ್ಮವಿಶ್ವಾಸವನ್ನು ತುಂಬಿದೆ. ಪಾಕ್ ತಂಡವು ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಪಂದ್ಯಕ್ಕಿಂತ ಮೊದಲು ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ.
►ಉಭಯ ತಂಡಗಳ ಪ್ರಮುಖ ಆಟಗಾರರು:
*ಸಲ್ಮಾನ್ ಅಲಿ ಅಘಾ(ಪಾಕಿಸ್ತಾನ): ಆಲ್‌ರೌಂಡರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ನ್ಯೂಝಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನದ ಪರ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಸಲ್ಮಾನ್ ಅಲಿ 3 ಇನಿಂಗ್ಸ್ ಗಳಲ್ಲಿ 73ರ ಸರಾಸರಿಯಲ್ಲಿ, 100ರ ಸ್ಟ್ರೈಕ್ ರೇಟ್‌ನಲ್ಲಿ 219 ರನ್ ಗಳಿಸಿದ್ದು, 134 ಗರಿಷ್ಠ ಸ್ಕೋರಾಗಿದೆ. ಮುಹಮ್ಮದ್ ರಿಝ್ವಾನ್ ಜೊತೆಗೆ ಸೇರಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧ 352 ರನ್ ಚೇಸ್ ಮಾಡಲು ತನ್ನ ತಂಡಕ್ಕೆ ನೆರವಾಗಿದ್ದರು.
ಪಾರ್ಟ್‌ಟೈಮ್ ಸ್ಪಿನ್ ಬೌಲಿಂಗ್ ಮೂಲಕ ಸಲ್ಮಾನ್ ತಂಡಕ್ಕೆ ನೆರವಾಗುತ್ತಿದ್ದಾರೆ.
*ಕೇನ್ ವಿಲಿಯಮ್ಸನ್(ನ್ಯೂಝಿಲ್ಯಾಂಡ್): ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ಕೇನ್ ವಿಲಿಯಮ್ಸನ್ ತ್ರಿಕೋನ ಸರಣಿಯಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಟೂರ್ನಿಯ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
ವಿಲಿಯಮ್ಸನ್ 3 ಇನಿಂಗ್ಸ್‌ಗಳಲ್ಲಿ 112.50ರ ಸರಾಸರಿಯಲ್ಲಿ 89.64ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 225 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಔಟಾಗದೆ 133 ರನ್ ಗಳಿಸಿದ್ದರು.
ಸರಣಿಯುದ್ದಕ್ಕೂ ನಿರ್ಣಾಯಕ ಪ್ರದರ್ಶನ ನೀಡಿರುವ ವಿಲಿಯಮ್ಸನ್ ನ್ಯೂಝಿಲ್ಯಾಂಡ್ ತಂಡ ಟ್ರೋಫಿ ಗೆಲ್ಲಲು ನೆರವಾಗಿದ್ದರು. ಚಾಂಪಿಯನ್ಸ್ ಟ್ರೋಫಿಗಿಂತ ಮೊದಲು ಕಿವೀಸ್ ತಂಡ ಉತ್ತಮ ತಯಾರಿ ನಡೆಸಲು ಸಹಾಯವಾಗಿದ್ದಾರೆ.
►ಪಿಚ್ ರಿಪೋರ್ಟ್
ಕರಾಚಿಯ ನ್ಯಾಶನಲ್ ಸ್ಟೇಡಿಯಮ್ ಪಿಚ್ ಗರಿಷ್ಠ ಮೊತ್ತದ ಹಣಾಹಣಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ವೇಗದ ಬೌಲರ್‌ಗಳು ಆರಂಭದಲ್ಲಿ ಮೇಲುಗೈ ಪಡೆಯುವ ಸಾಧ್ಯತೆಯಿದೆ. ಆದರೆ ಪಂದ್ಯ ಮುಂದುವರಿದಂತೆ ಪಿಚ್ ಬ್ಯಾಟರ್‌ಗಳಿಗೆ ನೆರವಾಗಬಹುದು. ಪಿಚ್ ವಿರೂಪಗೊಂಡ ನಂತರ ಸ್ಪಿನ್ನರ್‌ಗಳು ಸ್ವಲ್ಪ ಹಿಡಿತ ಸಾಧಿಸಬಹುದು.
►ತಂಡಗಳು
ಪಾಕಿಸ್ತಾನ(ಸಂಭಾವ್ಯ 11): ಫಖರ್ ಝಮಾನ್, ಬಾಬರ್ ಆಝಮ್, ಸೌದ್ ಶಕೀಲ್, ಮುಹಮ್ಮದ್ ರಿಝ್ವಾನ್(ನಾಯಕ, ವಿಕೆಟ್‌ಕೀಪರ್), ಸಲ್ಮಾನ್ ಅಲಿ ಅಘಾ, ತಯ್ಯಬ್ ತಾಹಿರ್ , ಖುಷ್‌ದಿಲ್ ಶಾ, ಶಾಹೀನ್ ಶಾ ಅಫ್ರಿದಿ, ನಸೀಂ ಶಾ, ಅಬ್ರಾರ್ ಅಹ್ಮದ್, ಹಾರಿಸ್ ರವೂಫ್.
ನ್ಯೂಝಿಲ್ಯಾಂಡ್(ಸಂಭಾವ್ಯ 11): ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್(ವಿಕೆಟ್‌ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ಕೈಲ್ ಜಮೀಸನ್.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 2:30
ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್ ಹಾಗೂ ನೆಟ್‌ವರ್ಕ್18 ಚಾನೆಲ್