ಚಾಂಪಿಯನ್ಸ್ ಟ್ರೋಫಿ | ವಿಲ್ ಯಂಗ್, ಟಾಮ್ ಲಾಥಮ್ ಅಮೋಘ ಶತಕ: ಪಾಕಿಸ್ತಾನಕ್ಕೆ 321 ರನ್ ಗುರಿ ನೀಡಿದ ನ್ಯೂಝಿಲೆಂಡ್

Update: 2025-02-19 19:12 IST
ಚಾಂಪಿಯನ್ಸ್ ಟ್ರೋಫಿ | ವಿಲ್ ಯಂಗ್, ಟಾಮ್ ಲಾಥಮ್ ಅಮೋಘ ಶತಕ: ಪಾಕಿಸ್ತಾನಕ್ಕೆ 321 ರನ್ ಗುರಿ ನೀಡಿದ ನ್ಯೂಝಿಲೆಂಡ್

PC : X 

  • whatsapp icon

ಕರಾಚಿ: ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಝಿಲೆಂಡ್ ತಂಡಗಳ ನಡುವಿನ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ವಿಲ್ ಯಂಗ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಟಾಮ್ ಲಾಥಮ್ ರ ಅಮೋಘ ಶತಕಗಳ ನೆರವಿನಿಂದ ನ್ಯೂಝಿಲೆಂಡ್ ತಂಡವು ಪಾಕಿಸ್ತಾನಕ್ಕೆ ಸವಾಲಿನ 321 ರನ್ ಗಳ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಝಿಲೆಂಡ್ ತಂಡ, ಒಂದು ಹಂತದಲ್ಲಿ ಕೇವಲ 73 ರನ್ ಗಳಿಗೆ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾದ ಆರಂಭಿಕ ಆಟಗಾರ ವಿಲ್ ಯಂಗ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಟಾಮ್ ಲಾಥಮ್ ನಡುವಿನ ಸೊಗಸಾದ 118 ರನ್ ಗಳ ಜೊತೆಯಾಟದಿಂದ ನ್ಯೂಝಿಲೆಂಡ್ ಚೇತರಿಸಿಕೊಂಡಿತು. ರಕ್ಷಣಾತ್ಮಕ ಮತ್ತು ಬಿರುಸಿನ ಆಟ ಪ್ರದರ್ಶಿಸಿದ ವಿಲ್ ಯಂಗ್, 12 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 113 ಎಸೆತಗಳಲ್ಲಿ 107 ರನ್ ಸಿಡಿಸಿದರು. ಕೊನೆಗೆ ನದೀಮ್ ಶಾ ಬೌಲಿಂಗ್ ನಲ್ಲಿ ಬದಲಿ ಆಟಗಾರನಿಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ನ್ಯೂಝಿಲೆಂಡ್ ತಂಡದ ಮೊತ್ತ ನಾಲ್ಕು ವಿಕೆಟ್ ನಷ್ಟಕ್ಕೆ 191 ರನ್ ಆಗಿತ್ತು.

ನಂತರ ಕ್ರೀಸಿಗೆ ಬಂದ ಗ್ಲೆನ್ ಫಿಲಿಪ್ಸ್ ಜೊತೆಗೂ ಶತಕದ ಜೊತೆಯಾಟವಾಡಿದ ಟಾಮ್ ಲಾಥಮ್, ಕೇವಲ 104 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ ಅಜೇಯ 118 ರನ್ ಗಳಿಸಿದರು. ಬಿರುಸಿನ ಆಟ ಪ್ರದರ್ಶಿಸಿದ ಗ್ಲೆನ್ ಫಿಲಿಪ್ಸ್, ಕೇವಲ 39 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿ, 61 ರನ್ ಗಳಿಸಿದರು. ಹಾರಿಸ್ ರೌಫ್ ಎಸೆದ 50ನೇ ಓವರ್ ನ ನಾಲ್ಕನೆ ಬಾಲನ್ನು ರಿವರ್ಸ್ ಶಾಟ್ ಹೊಡೆಯಲು ಪ್ರಯತ್ನಿಸಿದ ಗ್ಲೆನ್ ಫಿಲಿಪ್ಸ್, ಫಖರ್ ಝಮಾನ್ ಗೆ ಕ್ಯಾಚಿತ್ತು ನಿರ್ಗಮಿಸಿದರು.

ನ್ಯೂಝಿಲೆಂಡ್ ತಂಡದ ಭರವಸೆಯ ಬ್ಯಾಟರ್ ಗಳಾದ ಡ್ವೇನ್ ಕಾನ್ವೆ (10), ಕೇನ್ ವಿಲಿಯಮ್ಸ್ (1) ಹಾಗೂ ಡೇರಿಲ್ ಮಿಚೆಲ್ ಉದ್ಘಾಟನಾ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News