ಚಾಂಪಿಯನ್ಸ್ ಟ್ರೋಫಿ | ನಾಳೆ ದಕ್ಷಿಣ ಆಫ್ರಿಕಾ-ಅಫ್ಘಾನಿಸ್ತಾನ ಮುಖಾಮುಖಿ

ದಕ್ಷಿಣ ಆಫ್ರಿಕಾ-ಅಫ್ಘಾನಿಸ್ತಾನ ತಂಡ | ಸಾಂದರ್ಭಿಕ ಚಿತ್ರ
ಕರಾಚಿ: ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ಶುಕ್ರವಾರ ತಮ್ಮ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಆರಂಭಿಸಲಿವೆ. ಇದೇ ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುತ್ತಿರುವ ಅಫ್ಘಾನಿಸ್ತಾನ ತಂಡವು ಸೀಮಿತ ಓವರ್ ಕ್ರಿಕೆಟ್ ಪಂದ್ಯದಲ್ಲಿ ತನ್ನ ಉತ್ತಮ ಪ್ರದರ್ಶನ ಮುಂದುವರಿಸುವತ್ತ ಚಿತ್ತ ಹರಿಸಿದರೆ, ದಕ್ಷಿಣ ಆಫ್ರಿಕಾ ತನ್ನ ‘ಚೋಕರ್ಸ್’ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಮತ್ತೊಮ್ಮೆ ಪ್ರಯತ್ನಿಸಲಿದೆ.
ದಕ್ಷಿಣ ಆಫ್ರಿಕಾ ತಂಡ ಪ್ರಮುಖವಾಗಿ ಸೀಮಿತ ಓವರ್ ಮಾದರಿ ಕ್ರಿಕೆಟ್‌ನಲ್ಲಿ ವಿಶ್ವದಲ್ಲಿ ಕೆಲವು ಶ್ರೇಷ್ಠ ಕ್ರಿಕೆಟಿಗರನ್ನು ಸೃಷ್ಟಿಸಿದ್ದರೂ, 1998ರಲ್ಲಿ ಮಾತ್ರ ಚಾಂಪಿಯನ್ಸ್ ಟ್ರೋಫಿ(ಆಗ ಅದನ್ನು ನಾಕೌಟ್ ಟ್ರೋಫಿ ಎಂದು ಕರೆಯಲಾಗುತ್ತಿತ್ತು)ಜಯಿಸಿತ್ತು.
ಹರಿಣ ಪಡೆ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿದೆ. ಅಗ್ರ ಕ್ರಮಾಂಕದಲ್ಲಿ ನಾಯಕ ಟೆಂಬಾ ಬವುಮಾ, ಟೋನಿ ಡಿ ರೊರ್ಝಿ, ರಾಸಿ ವ್ಯಾನ್‌ಡರ್ ಡಸ್ಸೆನ್ ಹಾಗೂ ಮರ್ಕ್ರಮ್ ಅವರಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಹಾಗೂ ಟ್ರಿಸ್ಟಾನ್ ಸ್ಟರ್ಬ್ಸ್ ತಂಡಕ್ಕೆ ಬಲ ತುಂಬಬಲ್ಲರು.
ಪ್ರಮುಖ ವೇಗದ ಬೌಲರ್‌ಗಳಾದ ಅನ್ರಿಚ್ ನೋರ್ಟ್ಜೆ, ನಾಂಡ್ರೆ ಬರ್ಗೆರ್ ಹಾಗೂ ಜೆರಾಲ್ಡ್ ಕೊಯೆಟ್ಝಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಪಂದ್ಯಾವಳಿಯಲ್ಲಿ ಬೌಲಿಂಗ್ ವಿಭಾಗ ದಲ್ಲಿ ಕಠಿಣ ಅಡೆತಡೆ ಎದುರಿಸುತ್ತಿದೆ.
ಡೆತ್ ಓವರ್‌ಗಳು ಹಾಗೂ ಪವರ್ ಪ್ಲೇನಲ್ಲಿ ಕಾಗಿಸೊ ರಬಾಡ ದಕ್ಷಿಣ ಆಫ್ರಿಕಾದ ಪ್ರಮುಖ ಅಸ್ತ್ರವಾಗಿದ್ದಾರೆ. ಮಾರ್ಕೊ ಜಾನ್ಸನ್ ಗಮನಾರ್ಹ ಕೊಡುಗೆ ನೀಡಬಲ್ಲರು. ಇತ್ತೀಚೆಗೆ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಲುಂಗಿ ಗಿಡಿ ತನ್ನ ಆತ್ಮವಿಶ್ವಾಸ ಹಾಗೂ ಲಯ ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ.
ಕೇಶವ ಮಹಾರಾಜ್ ಹಾಗೂ ತಬ್ರೈಝ್ ಶಮ್ಸಿ ಸ್ಪಿನ್ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸಲು ಸಜ್ಜಾಗಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವು 2023ರ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ನಂತರ 14 ಏಕದಿನ ಪಂದ್ಯಗಳನ್ನು ಆಡಿದೆ. ಈ ಪೈಕಿ ಕೇವಲ 4ರಲ್ಲಿ ಜಯ ಸಾಧಿಸಿದೆ. ಪಂದ್ಯಾವಳಿಗಳಿಗಿಂತ ಮೊದಲು ಆರು ಪಂದ್ಯಗಳನ್ನು ಸೋತಿದೆ. ಆದರೆ ಈ ಎಲ್ಲ ಪಂದ್ಯಗಳಲ್ಲಿ ಹರಿಣ ಪಡೆಗೆ ಸಂಪೂರ್ಣ ಶಕ್ತಿಶಾಲಿ ತಂಡವನ್ನು ಕಣಕ್ಕಿಳಿಸಲು ಸಾಧ್ಯವಾಗಿರಲಿಲ್ಲ.
ಯುವ ಆಟಗಾರರನ್ನು ಒಳಗೊಂಡಿರುವ ಅಫ್ಘಾನಿಸ್ತಾನ, ಗಾಯದ ಸಮಸ್ಯೆ ಎದುರಿಸುತ್ತಿರುವ ಆಸ್ಟ್ರೇಲಿಯ ಹಾಗೂ ಫಾರ್ಮ್‌ನಲ್ಲಿಲ್ಲದ ಇಂಗ್ಲೆಂಡ್ ಜೊತೆಗೆ ದಕ್ಷಿಣ ಆಫ್ರಿಕಾ ಕೂಡ ನಾಕೌಟ್ ಹಂತಕ್ಕೇರುವ ಹೆಚ್ಚಿನ ಅವಕಾಶವಿದೆ.
ಅಫ್ಘಾನಿಸ್ತಾನ ತಂಡ ಇದೀಗ ಸೆಮಿ ಫೈನಲ್‌ಗೆ ಲಗ್ಗೆ ಇಡಬಲ್ಲ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದೆ.
ಕಳೆದ ವರ್ಷ ಟಿ-20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಅಫ್ಘಾನಿಸ್ತಾನ ತಂಡ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾವನ್ನು ಸೋಲಿಸಿ ಶಾಕ್ ನೀಡಿತ್ತು. ಇತ್ತೀಚೆಗೆ ಎರಡು ಐಸಿಸಿ ಚಾಂಪಿಯನ್‌ಶಿಪ್‌ಗಳಲ್ಲಿ ತನ್ನ ಶಕ್ತಿಯನ್ನು ಅನಾವರಣಗೊಳಿಸಿತ್ತು. ತಾನು ದುರ್ಬಲ ತಂಡವಲ್ಲ, ಬಲಿಷ್ಠ ತಂಡವೆಂದು ಪದೇ ಪದೇ ಸಾಬೀತುಪಡಿಸಿದೆ.
ಅಫ್ಘಾನಿಸ್ತಾನ ತಂಡ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಆಡಿರುವ 5 ದ್ವಿಪಕ್ಷೀಯ ಸರಣಿಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿದೆ. ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಯುಎಇನಲ್ಲಿ ಗೆದ್ದಿರುವ ಸರಣಿಯೂ ಸೇರಿದೆ.
ಅಫ್ಘಾನ್ ತಂಡದ ಸ್ಪಿನ್ ವಿಭಾಗದಲ್ಲಿ ರಶೀದ್ ಖಾನ್, ಮುಹಮ್ಮದ್ ನಬಿ, ನೂರ್ ಅಹ್ಮದ್ ಅವರಿದ್ದಾರೆ.
ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನ ತಂಡ ಆಡಲಿರುವ ಎಲ್ಲ ಮೂರು ಪಂದ್ಯಗಳಲ್ಲಿ ಸ್ಪಿನ್ ಬೌಲಿಂಗ್ ವಿಭಾಗ ಪ್ರಮುಖವಾಗಿದೆ.
ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡವು ಯಶಸ್ಸು ಕಾಣಲು ವೇಗದ ಬೌಲರ್ ಅಝ್ಮತುಲ್ಲಾ ಉಮರ್ಝೈಕೊಡುಗೆ ಅಪಾರವಿದೆ. ಉಮರ್ಝೈಗೆ ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯವಿದ್ದು, ಪವರ್ ಪ್ಲೇ ನಲ್ಲಿ ತಂಡಕ್ಕೆ ನೆರವಾಗಬಲ್ಲರು.
ಫಝಲ್‌ಹಕ್ ಫಾರೂಕಿ ಕೂಡ ಆರಂಭದಲ್ಲಿ ತನ್ನ ತಂಡಕ್ಕೆ ಮೇಲುಗೈ ಒದಗಿಸಬಲ್ಲರು.
ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹೀಂ ಝದ್ರಾನ್ ಬ್ಯಾಟಿಂಗ್ ವಿಭಾಗದಲ್ಲಿ ತನ್ನ ತಂಡಕ್ಕೆ ಉತ್ತಮ ಆರಂಭ ಒದಗಿಸಬಲ್ಲರು. ಆದರೆ ಮಧ್ಯಮ ಸರದಿಯಲ್ಲಿ ಆಗಾಗ ಸಮಸ್ಯೆ ಕಂಡುಬರುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಸ್ಪರ್ಧಾವಳಿಯಲ್ಲಿ ಅಫ್ಘಾನ್ ಹೆಚ್ಚಿನ ಯಶಸ್ಸು ಕಾಣಬಹುದು.
►ತಂಡಗಳು
ಅಫ್ಘಾನಿಸ್ತಾನ(ಸಂಭಾವ್ಯ ಇಲೆವೆನ್): ಇಬ್ರಾಹೀಂ ಝದ್ರಾನ್, ರಹಮಾನುಲ್ಲಾ ಗುರ್ಬಾಝ್(ವಿಕೆಟ್‌ಕೀಪರ್),ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಝ್ಮತುಲ್ಲಾ ಉಮರ್ಝೈ, ಮುಹಮ್ಮದ್ ನಬಿ, ಗುಲ್ಬದ್ದೀನ್ ನೈಬ್, ರಶೀದ್ ಖಾನ್, ನೂರ್ ಅಹ್ಮದ್, ಫಝಲ್‌ಹಕ್ ಫಾರೂಕಿ, ಫರೀದ್ ಮಲಿಕ್.
ದಕ್ಷಿಣ ಆಫ್ರಿಕಾ(ಸಂಭಾವ್ಯ ಇಲೆವೆನ್): ಟೆಂಬಾ ಬವುಮಾ(ನಾಯಕ), ಟೋನಿ ಡಿ ಝಾರ್ಝಿ, ಮರ್ಕ್ರಮ್, ರಾಸ್ಸಿ ವಾನ್ ಡರ್ ಡುಸ್ಸೆೆನ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸನ್, ಕೇಶವ್ ಮಹಾರಾಜ್, ಲುಂಗಿ ಗಿಡಿ, ಕಾಗಿಸೊ ರಬಾಡ, ತಬ್ರೈಝ್ ಶಮ್ಸಿ.
*ಪಿಚ್ ರಿಪೋರ್ಟ್: ಕರಾಚಿಯ ನ್ಯಾಶನಲ್ ಕ್ರೀಡಾಂಗಣವು ಸರ್ವೆಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಈ ಕ್ರೀಡಾಂಗಣದ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ ಸುಮಾರು 240. ಆದರೆ ಇತ್ತೀಚೆಗಿನ ಪಂದ್ಯಗಳಲ್ಲಿ ಇದು ಅಧಿಕವಾಗಿದೆ. ಸುಮಾರು 270ರಿಂದ 300 ಹಾಗೂ ಅದಕ್ಕಿಂತ ಹೆಚ್ಚು ರನ್ ದಾಖಲಾಗುವ ನಿರೀಕ್ಷೆ ಇದೆ. ಇತ್ತೀಚೆಗೆ ಪಾಕಿಸ್ತಾನ ತಂಡವು ನ್ಯೂಝಿಲ್ಯಾಂಡ್ ವಿರುದ್ಧ 350ಕ್ಕೂ ಅಧಿಕ ರನ್ ಚೇಸ್ ಮಾಡಿತ್ತು.
*ಪಂದ್ಯ ಆರಂಭದ ಸಮಯ: ಮಧ್ಯಾಹ್ನ 2:30