ಚೆಸ್ ವಿಶ್ವಕಪ್| ಸೆಮಿ ಫೈನಲ್‌ನಲ್ಲಿ ಅದ್ಬುತ ಪ್ರದರ್ಶನ; ಫೈನಲ್‌ಗೆ ಲಗ್ಗೆಯಿಟ್ಟ ಆರ್. ಪ್ರಜ್ಞಾನಂದ
ಹೊಸದಿಲ್ಲಿ: ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಫ್ಯಾಬಿಯಾನೊ ಕರೂನಾ ವಿರುದ್ಧ ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಅಚ್ಚರಿಯ ಜಯ ಸಾಧಿಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಫೈನಲ್ಸ್ ತಲುಪಿದ್ದಾರೆ.
ಮಂಗಳವಾರ ಅಝರ್ ಬೈಜಾನ್ ನ ಬಕು ಎಂಬಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್ಸ್ ನಲ್ಲಿ ಪ್ರಜ್ಞಾನಂದ ಮಂಗೂಸ್ ಕಾರ್ಲ್ ಸನ್ ಅವರನ್ನು ಎದುರಿಸಲಿದ್ದಾರೆ.
ಸೋಮವಾರದ ಜಯದೊಂದಿಗೆ ಪ್ರಜ್ಞಾನಂದ ಟೂರ್ನಿಯ ಫೈನಲ್ಸ್ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ವಿಶ್ವನಾಥನ್ ಆನಂದ್ ಮಾತ್ರ ಈ ಸಾಧನೆ ಮಾಡಿದ್ದರು. ಭಾರತದ ಹದಿಹರೆಯದ ಆಟಗಾರ ಪ್ರಜ್ಞಾನಂದ, ಕರೂನಾ ವಿರುದ್ಧ ಟೈಬ್ರೇಕರ್ನಲ್ಲಿ 3.5-2.5 ಅಂಕ ಅಂತರದ ಗೆಲುವು ಸಾಧಿಸಿದರು.
" ಪ್ರಜ್ಞಾನಂದ ಫೈನಲ್ ಪ್ರವೇಶಿಸಿದ್ದಾರೆ! ಫ್ಯಾಬಿಯಾನೊ ಕರುವಾನಾ ವಿರುದ್ಧ ಟೈಬ್ರೇಕರ್ ನಲ್ಲಿ ಜಯ ಸಾಧಿಸಿದ್ದು, ಮಂಗೂಸ್ ಕಾರ್ಲ್ಸನ್ ವಿರುದ್ಧ ಸೆಣೆಸಲಿದ್ದಾರೆ. ಎಂಥ ಅದ್ಭುತ ಪ್ರದರ್ಶನ" ಎಂದು ಚೆಸ್ ದಂತಕಥೆ ಎನಿಸಿದ ವಿಶ್ವನಾಥನ್ ಆನಂದ್ ಎಕ್ಸ್ ನಲ್ಲಿ ಬರೆದಿದ್ದಾರೆ.
ಇದಕ್ಕೂ ಮುನ್ನ ಪ್ರಜ್ಞಾನಂದ, ಭಾರತದ ಅರ್ಜುನ್ ಎರಿಗೈಸಿ ವಿರುದ್ಧ ಸಡನ್ ಡೆತ್ ಟೈಬ್ರೇಕರ್ ನಲ್ಲಿ 5-4 ಅಂತರದ ಗೆಲುವು ಸಾಧಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದರು. ಪ್ರಜ್ಞಾನಂದ ಮುಂದಿನ ವರ್ಷದ ಕ್ಯಾಂಡಿಡೇಟ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.