ಸಿಂಡಿ ವಿನ್ನರ್ ನಗಾಂಬ ಎಂಬ ಬೆಳಕಿನ ಕಿರಣ

Update: 2024-08-12 10:34 GMT

ಸದಾ ಮಿತಿಮೀರಿದ ಭ್ರಷ್ಟಾಚಾರ ಮತ್ತು ಆಂತರಿಕ ಕಚ್ಚಾಟದಿಂದ ಬಸವಳಿದಿದ್ದ ಮಧ್ಯ ಆಫ್ರಿಕಾದ ದೇಶ ಕ್ಯಾಮರೂನ್‌ನ ಅತೀ ದೊಡ್ಡ ನಗರ ದೌಆಲಾದಲ್ಲಿ ಬಡ ಆದರೆ ದೊಡ್ಡ ಕುಟುಂಬವೊಂದು ನೆಮ್ಮದಿ ಮತ್ತು ಉತ್ತಮ ಜೀವನ ಅರಸಿ ಬ್ರಿಟನ್ ದೇಶಕ್ಕೆ ತಲುಪುತ್ತದೆ. ಅಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಳ್ಳುತ್ತಿರುವಾಗ, ಆ ಕುಟುಂಬದ ಸದಸ್ಯರೊಬ್ಬರು ಯಾವುದೋ ಕಾರಣಕ್ಕೆ ಕ್ಯಾಮರೂನ್‌ಗೆ ಹೋಗಿ ತನ್ನ ಇಡೀ ಕುಟುಂಬದ ದಾಖಲೆ ಪತ್ರಗಳನ್ನು ಕಳೆದುಕೊಳ್ಳುತ್ತಾರೆ.

ಹೇಗೋ ಕಷ್ಟಪಟ್ಟು ಕಾಲೇಜು ಸೇರಿ ಶಿಕ್ಷಣ ಪಡೆಯುತ್ತಾ, ಪದವಿ ಮುಗಿಸುತ್ತಿದ್ದ ಆ ಕ್ಯಾಮರೂನ್ ಕುಟುಂಬದ ಹುಡುಗಿಯೊಬ್ಬಳು ಕ್ರೀಡಾಕೂಟವೊಂದರಲ್ಲಿ, ವಿದೇಶವೊಂದರಲ್ಲಿ ತನ್ನ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಬೇಕಾದ ಸಂದರ್ಭದಲ್ಲಿ ವಲಸೆ ಅಧಿಕಾರಿಗಳಿಂದ ಬಂಧಿಸಲ್ಪಡಬೇಕಾಗುತ್ತದೆ. ನಂತರ ನಿರಾಶ್ರಿತರ ಶಿಬಿರಕ್ಕೆ ಆಕೆಯ ಕಿರಿ ಸೋದರನೊಂದಿಗೆ ಕಳುಹಿಸಲಾಗುತ್ತದೆ.

ಏನೇನೂ ದಾಖಲೆ ಹೊಂದಿರದ ಆ ಹುಡುಗಿಯನ್ನು ಆಕೆಯ ಹುಟ್ಟೂರಿಗೆ ಕಳುಹಿಸಲು ಬ್ರಿಟನ್‌ನ ವಲಸೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿರುವಾಗಲೇ ಆಕೆ ಲೆಸ್ಬಿಯನ್ (ಸಲಿಂಗಕಾಮಿ) ಎಂದು ತಿಳಿದುಬರುತ್ತದೆ. ಆಕೆಯ ಹುಟ್ಟೂರು ಇರುವ ಕ್ಯಾಮರೂನ್ ದೇಶದಲ್ಲಿ ಸಲಿಂಗಕಾಮ ಶಿಕ್ಷಾರ್ಹ ಅಪರಾಧ!

ಯಾವುದೇ ದಾಖಲೆಗಳು ಇಲ್ಲದ ಕಾರಣ ಆಕೆ ಬ್ರಿಟನ್ ಪ್ರಜೆ ಅಲ್ಲ, ಅಲ್ಲಿ ಇರುವಂತಿಲ್ಲ. ಲೆಸ್ಬಿಯನ್ ಆದ ಕಾರಣ ಆಕೆಯನ್ನು ಕ್ಯಾಮರೂನ್ ದೇಶಕ್ಕೂ ಕಳುಹಿಸಲಾಗುವುದಿಲ್ಲ. ಒಂದು ರೀತಿ ಅತ್ತ ದರಿ ಇತ್ತ ಪುಲಿ ಎಂಬ ಪರಿಸ್ಥಿತಿಯಲ್ಲಿ ಆ ಹುಡುಗಿ ಇದ್ದಾಗ ಬ್ರಿಟನ್ ದೇಶದ ಉಃ ಬಾಕ್ಸಿಂಗ್ ಸಂಸ್ಥೆ (Great Britain Boxing Association) ಆಕೆಯ ಸಾಮರ್ಥ್ಯ ಗಮನಿಸಿ ಆಕೆಯ ಬೆನ್ನಿಗೆ ನಿಲ್ಲುತ್ತದೆ, ಆಕೆಗೆ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಆಡಲು ಅನುವು ಮಾಡಿಕೊಡುತ್ತದೆ. ಬದುಕೇ ತೊಯ್ದಾಟದಲ್ಲಿ ಇರುವಾಗ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುವ ಹುಡುಗಿ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎಲ್ಲಾ ಎದುರಾಳಿಗಳನ್ನು ಕೆಚ್ಚಿನಿಂದ ಸೋಲಿಸಿ, ಚಿನ್ನದ ಪದಕ ಗೆಲ್ಲುತ್ತಾಳೆ. ಈ ಸಾಧನೆ ಮಾಡಿದ ಎರಡನೇ ಮಹಿಳೆಯಾಗುತ್ತಾಳೆ.

ಆದರೆ ದುರ್ವಿಧಿ ನೋಡಿ, ಆಕೆಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಇದ್ದರೂ, ಬ್ರಿಟನ್ ಪ್ರಜೆ ಅಲ್ಲದ ಕಾರಣ ಆಕೆಗೆ ಬ್ರಿಟನ್ ದೇಶವನ್ನು ಪ್ರತಿನಿಧಿಸಲು ಆಗುವುದಿಲ್ಲ. ಪಾಸ್‌ಪೋರ್ಟ್ ಹಾಗೂ ಇತರ ದಾಖಲೆಗಳನ್ನು ಕಳೆದುಕೊಂಡಿರುವ ಕಾರಣ ಕ್ಯಾಮರೂನ್ ದೇಶವನ್ನು ಪ್ರತಿನಿಧಿಸಲೂ ಆಗುವುದಿಲ್ಲ.

ಕಡೆಯದಾಗಿ ರೆಫ್ಯೂಜಿ ಒಲಿಂಪಿಕ್ ತಂಡವು ಆಕೆಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಕೊಡುತ್ತದೆ. ಈ ಅವಕಾಶ ಬಳಸಿಕೊಂಡ ಆಕೆ ರೆಫ್ಯೂಜಿ ಒಲಿಂಪಿಕ್ ತಂಡಕ್ಕೆ ಮೊದಲ, ಐತಿಹಾಸಿಕ ಪದಕ ಗೆದ್ದು ಕೊಡುತ್ತಾಳೆ.

ಕೇಳುವುದಕ್ಕೆ, ಓದುವುದಕ್ಕೆ ಇದು ಹಾಲಿವುಡ್ ಥ್ರಿಲ್ಲರ್ ಸಿನೆಮಾ ಕಥೆ ಅನ್ನಿಸಬಹುದು. ಆದರೆ ಇದು ನಿಜವಾದ ಕಥೆ. ಒಬ್ಬ ಹೋರಾಟಗಾರ್ತಿಯ ಕಥೆ. ಇದು ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಸಿಂಡಿ ವಿನ್ನರ್ ನಗಾಂಬ ಕಥೆ.

ಸಿಂಡಿ ನಗಾಂಬ ಕಷ್ಟದಲ್ಲೇ ಬೆಳೆದು ಬಂದ ಹುಡುಗಿ. ಆಕೆಯ ಬಣ್ಣದ ಕಾರಣಕ್ಕೆ, ಬಡತನದ ಕಾರಣಕ್ಕೆ, ಲೈಂಗಿಕ ಆದ್ಯತೆಯ ಕಾರಣಕ್ಕೆ ಮೂದಲಿಕೆಗೆ, ದೂಷಣೆಗೆ ಒಳಗಾಗುತ್ತಿದ್ದ ಸಿಂಡಿಗೆ ಆಕೆಯ ತಂದೆ ತಾಯಿಗಳು ವಿನ್ನರ್ ಎಂಬ ಉಪನಾಮ ಇಟ್ಟರು. ತನ್ನ ಹೆಸರಿಗೆ ತಕ್ಕಳಾಗಿ ವಿನ್ನರ್ ಆಗಿಯೇ ರೂಪುಗೊಂಡ ಸಿಂಡಿ ವಿನ್ನರ್ ನಗಾಂಬ, ಇವತ್ತು ವಿಶ್ವದ ಸಮಸ್ತ ನಿರಾಶ್ರಿತರ ಹೆಮ್ಮೆಯ ಪ್ರತಿನಿಧಿಯಾಗಿದ್ದಾಳೆ.

ಸಿಂಡಿ ನಗಾಂಬಗೆ ಒಲಿಂಪಿಕ್ಸ್ ಪದಕ ಕೂಡಾ ಹೂವಿನ ಹಾದಿಯಾಗಿರಲಿಲ್ಲ.

ಮೊದಲ ಸುತ್ತಿನಲ್ಲಿಯೇ 2022ರ ವಿಶ್ವ ಚಾಂಪಿಯನ್, ಕೆನಡಾ ದೇಶದ ಬಾಕ್ಸರ್ ಥಮ್ಮರಾ ತಿಬೂಲ್ಟ್‌ಳನ್ನು ಎದುರಿಸಬೇಕಾಗಿ ಬಂದಿತ್ತು. ಅತ್ಯಂತ ರೋಚಕವಾಗಿ ಥಮ್ಮರಾ ತಿಬೂಲ್ಟ್‌ಳನ್ನು 3-2 ಅಂಕಗಳೊಂದಿಗೆ ಸಿಂಡಿ ನಗಾಂಬ ಸೋಲಿಸಿದಳು.

ಕ್ವಾರ್ಟರ್ ಫೈನಲ್ಸ್‌ನಲ್ಲಿ ತವರ ಪ್ರೇಕ್ಷಕರ ಅಭೂತಪೂರ್ವ ಬೆಂಬಲದೊಂದಿಗೆ ಕಣಕ್ಕೆ ಇಳಿದಿದ್ದ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ, ಫ್ರಾನ್ ದೇಶದ ದೆವಿನಾ ಮಿಚೆಲ್‌ಳನ್ನು ಸೋಲಿಸಿ ಪದಕದ ಸುತ್ತಿಗೆ ಪ್ರವೇಶಿಸಿದಳು.

ಸೆಮಿಫೈನಲ್ಸ್‌ನಲ್ಲಿ ಪನಮಾ ದೇಶದ ಚಾಂಪಿಯನ್ ಬಾಕ್ಸರ್ ಅಥೈನಾ ಬೈಲಾನ್ ಎದುರು ಸೋತರೂ, ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ನಿರಾಶ್ರಿತರ ತಂಡದ ಮೊದಲ ಸಾಧಕಿ ಎನ್ನಿಸಿಕೊಂಡಳು.

ದೇಶ, ಭಾಷೆ, ಬಣ್ಣ, ರಾಷ್ಟ್ರಗೀತೆ, ರಾಷ್ಟ್ರಧ್ವಜಗಳ ಹಣೆಪಟ್ಟಿ ಇಲ್ಲದೇ ಆಡುವ ನಿರಾಶ್ರಿತರ ತಂಡಕ್ಕೆ ಇದು ಬಹುದೊಡ್ಡ ಸ್ಫೂರ್ತಿಯ ವಿಷಯ! ಇದು ಒಲಿಂಪಿಕ್ ಪಂದ್ಯಾಟಕ್ಕೇ ಹೆಮ್ಮೆ ತರುವ ವಿಚಾರ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದರ್ಶನ್ ಜೈನ್

contributor

Similar News