ಸೆಮೀಸ್ ತಲುಪಲು ಸ್ಪಷ್ಟ ಯೋಜನೆಯಿದೆ: ಬಾಬರ್‌ ಅಝಮ್

Update: 2023-11-10 16:12 GMT

Photo : cricketworldcup.com

ಕೋಲ್ಕತಾ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಶನಿವಾರ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯ ಇಂಗ್ಲೆಂಡ್‌ ವಿರುದ್ಧದ ಪಂದ್ಯಲ್ಲಿ ನಾವು ಅರ್ಹತೆ ಪಡೆಯಲು ಕಾರಣವಾಗುವ ಅಸಂಭವ ಸನ್ನಿವೇಶಗಳ ಬಗ್ಗೆ ತಂಡಕ್ಕೆ ತಿಳಿದಿದೆ. ಈಗಾಗಲೇ ಪಂದ್ಯದ ಪರಿಸ್ಥಿತಿಗಳಿಗೆ ಅನುಗುಣವಾಗಿ ಯೋಜನೆಯನ್ನು ರೂಪಿಸಿದ್ದೇವೆ ಎಂದು ಹೇಳಿದ್ದಾರೆ ಎಂದು ndtv ವರದಿ ಮಾಡಿದೆ.

ಗುರುವಾರ ಶ್ರೀಲಂಕಾ ವಿರುದ್ಧ ನ್ಯೂಝಿಲ್ಯಾಂಡ್‌ನ ಬೃಹತ್ ಗೆಲುವಿನ ನಂತರ, ಪಾಕಿಸ್ತಾನವು ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದರೆ 287 ರನ್‌ಗಳಿಗಿಂತ ಹೆಚ್ಚು ಅಂತರದಿಂದ ಗೆಲ್ಲಬೇಕಾಗುತ್ತದೆ. ರನ್ ಚೇಸಿಂಗ್ ಸಂದರ್ಭ 284 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಬೇಕು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಾಬರ್ ಕ್ರಿಕೆಟ್ ಆಟದಲ್ಲಿ 'ಏನಾದರೂ ಆಗಬಹುದು' ಎಂದು ಹೇಳಿಕೆ ನೀಡಿದ್ದಾರೆ. “ಕ್ರಿಕೆಟ್‌ ನಲ್ಲಿ ಏನು ಬೇಕಾದರೂ ಆಗಬಹುದು. ನಾವು ಪಂದ್ಯಾವಳಿಯನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಪ್ರಯತ್ನಿಸುತ್ತೇವೆ” ಎಂದು ಅಝಮ್ ಶುಕ್ರವಾರ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ನಾವು ನೆಟ್ ರನ್ ರೇಟ್‌ ಸುಧಾರಿಸಲು ಯೋಜನೆ ಹೊಂದಿದ್ದೇವೆ. ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ. ನಾವು ಮೊದಲ 10 ಓವರ್‌ಗಳನ್ನು ಹೇಗೆ ಆಡಬೇಕು, ನಂತರ ಏನು ಮಾಡಬೇಕು ಎಂಬುದರ ಕುರಿತು ಯೋಜಿಸಿದ್ದೇವೆ. ಫಖರ್ ಝಮಾನ್ 20-30 ಓವರ್‌ಗಳವರೆಗೆ ಆಡಿದರೆ, ನಾವು ಬೇಕಾದುದನ್ನು ಸಾಧಿಸಬಹುದು. ಪಂದ್ಯದ ವೇಳೆ ಇಫ್ತಿಕಾರ್ ಅಹ್ಮದ್ ಮತ್ತು ಮೊಹಮ್ಮದ್ ರಿಝ್ವಾನ್ ಅವರ ಪಾತ್ರವೂ ಪ್ರಮುಖವಾಗಿರುತ್ತದೆ. ಸದ್ಯ, ನನ್ನ ಗಮನ ಮುಂದಿನ ಪಂದ್ಯದ ಮೇಲಿದೆ. ನನ್ನ ನಾಯಕತ್ವದ ಭವಿಷ್ಯದ ಬಗ್ಗೆ ನಂತರ ಯೋಚಿಸುತ್ತೇನೆ” ಎಂದು ಈ ವೇಳೆ ಹೇಳಿದರು.

“ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ಕಳೆದ ಮೂರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದೇನೆ. ಟಿವಿಯಲ್ಲಿ ಕೂತು ವಿಷಯಗಳನ್ನು ಹೇಳುವುದು ಸುಲಭ. ನನಗೆ ಸಲಹೆ ನೀಡಲು ಬಯಸುವವರು ನನ್ನ ಫೋನ್ ನಂಬರ್ಗೆ ಸಂಪರ್ಕಿಸಬಹುದು” ಎಂದು ತಮ್ಮ ನಾಯಕತ್ವ ಹಾಗೂ ವಿಶ್ವಕಪ್‌ ನಲ್ಲಿ ತಂಡದ ಪ್ರದರ್ಶನದ ಬಗ್ಗೆ ಕಟುವಾಗಿ ಟೀಕಿಸಿದ್ದ ಮಾಜಿ ಕ್ರಿಕೆಟಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದರು.

ಇಂಗ್ಲೆಂಡ್‌ ವಿರುದ್ಧದ ಪಂದ್ಯದ ಬಗ್ಗೆಮಾತನಾಡಿದ ಬಾಬರ್‌,''ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುತ್ತೇನೆ. ಕೆಲವೊಮ್ಮೆ ಪರಿಸ್ಥಿತಿಗಳು ನಮಗೆ ಮುಕ್ತವಾಗಿ ಆಡಲು ಬಿಡುವುದಿಲ್ಲ. ಭಾರತದಲ್ಲಿ ಪ್ರತಿಯೊಂದು ಸ್ಥಳ ವಿಭಿನ್ನ ಪರಿಸ್ಥಿತಿಗಳನ್ನು ಹೊಂದಿದೆ. ಬಹಳ ವರ್ಷಗಳ ಬಳಿಕ ನಾವು ಮೊದಲ ಬಾರಿಗೆ ಭಾರತ ಪ್ರವಾಸ ಮಾಡುತ್ತಿದ್ದೇವೆ. ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನಮ್ಮಿಂದ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ' ಎಂದು ಅವರು ಮುಕ್ತವಾಗಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News