ರಣಜಿ ಟ್ರೋಫಿಯನ್ನು ರದ್ದುಗೊಳಿಸಬೇಕು ಎಂದ ಕ್ರಿಕೆಟಿಗ ಮನೋಜ್ ತಿವಾರಿ!

Update: 2024-02-11 08:32 GMT

ಮನೋಜ್ ತಿವಾರಿ | Photo: NDTV 

ಹೊಸದಿಲ್ಲಿ: ರಣಜಿ ಟ್ರೋಫಿಯು ಭಾರತದ ಪ್ರಥಮ ದರ್ಜೆಯ ಕ್ರಿಕೆಟ್ ನ ಅತ್ಯುನ್ನತ ಕ್ರೀಡಾಕೂಟವಾಗಿಯೇ ಉಳಿದಿದ್ದು, ಅರಳುತ್ತಿರುವ ಪ್ರತಿಭೆಗಳಿಗೆ ಹಿರಿಯರ ರಾಷ್ಟ್ರೀಯ ತಂಡದ ಬಾಗಿಲು ಬಡಿಯಲು ಹಾಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ಟ್ರೋಫಿಯು ವೇದಿಕೆಯಾಗಿದೆ. ಆದರೆ, ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರಿಗೆ ರಣಜಿ ಟ್ರೋಫಿಯನ್ನು ಸಂಘಟಿಸುತ್ತಿರುವ ರೀತಿಯ ಬಗ್ಗೆ ತಕರಾರಿದ್ದು, ಈ ಹೆಜ್ಜೆಗುರುತಿನ ಕ್ರೀಡಾಕೂಟ ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಅವರು ಎತ್ತಿ ತೋರಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸ್ಫೋಟಕ ಪೋಸ್ಟ್ ಮಾಡಿರುವ ತಿವಾರಿ, ಮುಂದಿನ ಋತುವಿನಿಂದ ಈ ಕ್ರೀಡಾಕೂಟವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಬಂಗಾಳದ ಕ್ರಿಕೆಟ್ ತಾರೆಯಾದ ಮನೋಜ್ ತಿವಾರಿ ಇಂತಹ ಸ್ಫೋಟಕ ಸಲಹೆ ನೀಡಿದ್ದರೂ, ತಮ್ಮ ಸಲಹೆಯ ಹಿಂದಿರುವ ನಿರ್ದಿಷ್ಟ ಕಾರಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿಲ್ಲ ಎಂದು ndtv.com ವರದಿ ಮಾಡಿದೆ.

“ಮುಂದಿನ ಋತುವಿನಿಂದ ರಣಜಿ ಟ್ರೋಫಿಯನ್ನು ರದ್ದುಗೊಳಿಸಬೇಕು. ಈ ಕ್ರೀಡಾಕೂಟದಲ್ಲಿ ಹಲವಾರು ತಪ್ಪುಗಳು ಜರುಗುತ್ತಿವೆ. ವೈಭವಯುತ ಇತಿಹಾಸ ಹೊಂದಿರುವ ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ರಕ್ಷಿಸಲು ಹಲವಾರು ಸಂಗತಿಗಳ ಕುರಿತು ಕ್ರಮವಾಗಿ ನೋಡಬೇಕಿದೆ. ಈ ಕ್ರೀಡಾಕೂಟವು ತನ್ನ ಹೊಳಪು ಹಾಗೂ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಖಂಡಿತ ಹತಾಶನಾಗಿದ್ದೇನೆ” ಎಂದು ಮನೋಜ್ ತಿವಾರಿ ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಕಮದಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಮನೋಜ್ ಕೆಲವು ನಿರ್ದಿಷ್ಟ ಸಮಸ್ಯೆಗಳನ್ನು ಎತ್ತಿ ತೋರಿಸಿದರು. ಈ ಋತುವಿನ ಅಂತ್ಯಕ್ಕೆ ನಾನು ನನ್ನ ರಣಜಿ ಟ್ರೋಫಿಯ ವೃತ್ತಿ ಜೀವನವನ್ನು ಅಂತ್ಯಗೊಳಿಸಲಿದ್ದೇನೆ ಎಂದೂ ಹೇಳಿದರು.

ಕೇರಳ ವಿರುದ್ಧದ ಎಲೈಟ್ ಬಿ ಗುಂಪಿನ ಪಂದ್ಯದ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ತಂಡಕ್ಕೆ ತಿರುವನಂತಪುರಂನ ತುಂಬಾದಲ್ಲಿನ ಸೇಂಟ್ ಕ್ಸೇವಿಯರ್ ಕಾಲೇಜಿನ ಮೈದಾನದಲ್ಲಿ ಕಳಪೆ ಡ್ರೆಸ್ಸಿಂಗ್ ಕೊಠಡಿ ಸೌಲಭ್ಯ ಒದಗಿಸಿರುವ ಕುರಿತು ಬಂಗಾಳದ ಈ ಕ್ರಿಕೆಟಿಗ ಮೊದಲಿಗೆ ವಾಗ್ದಾಳಿ ನಡೆಸಿದರು.

“ವರ್ಷಗಳ ಹಿಂದೆಯೇ ಕ್ರೀಡಾಂಗಣ ನಿರ್ಮಾಣವಾಗಿದ್ದರೂ, ನಾವು ಮೈದಾನದಲ್ಲಿ ಕೇರಳ ತಂಡದ ವಿರುದ್ಧ ಆಡುತ್ತಿದ್ದೇವೆ. ನಮಗೆ ರಾಜ್ಯದ ಹೊರವಲಯದಲ್ಲಿರುವ ಮೈದಾನದಲ್ಲಿ ಆಡುವಂತೆ ಸೂಚಿಸಲಾಗಿದೆ. ನಮ್ಮ ತಂಡ ಹಾಗೂ ಎದುರಾಳಿ ತಂಡದ ಡ್ರೆಸ್ಸಿಂಗ್ ಕೊಠಡಿಗಳು ಅಕ್ಕಪಕ್ಕವೇ ಇರುವುದರಿಂದ ಸರಿಯಾಗಿ ವ್ಯೂಹತಂತ್ರವನ್ನೂ ರೂಪಿಸಲು ಸಾಧ್ಯವಿಲ್ಲ. ಒಬ್ಬರು ಮಾತನಾಡಿದ್ದು ಮತ್ತೊಬ್ಬರಿಗೆ ಕೇಳಿಸುವಷ್ಟು ತೀರಾ ಸನಿಹದಲ್ಲಿವೆ. ಅಲ್ಲಿ ಖಾಸಗಿತನವಿಲ್ಲ. ಈ ಸಮಸ್ಯೆಯ ಕುರಿತು ಭವಿಷ್ಯದಲ್ಲಿ ಗಮನ ಹರಿಸಲಾಗುತ್ತದೆ ಎಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ.

ಆದರೆ, ರಣಜಿ ಟ್ರೋಫಿಯನ್ನು ಯಾಕೆ ರದ್ದುಗೊಳಿಸಬೇಕು ಎಂಬ ಕುರಿತ ಕಾರಣವನ್ನು ಅವರು ಇದುವರೆಗೂ ಬಹಿರಂಗಪಡಿಸಿಲ್ಲ. ತನ್ನ ವೃತ್ತಿ ಜೀವನವನ್ನು ಅಂತ್ಯಗೊಳಿಸಿದ ನಂತರ ತಾನು ಕಾರಣವನ್ನು ಬಹಿರಂಗಪಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

“ನಾನು ರಾಜ್ಯದ ತಂಡವೊಂದರ ನಾಯಕನಾಗಿರುವುದರಿಂದ ಎಲ್ಲವನ್ನೂ ವಿಸ್ತರಿಸಲು ಸಾಧ್ಯವಿಲ್ಲ ಹಾಗೂ ನಾನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೀತಿ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ. ಪಂದ್ಯದ ವೇಳೆ ನಾನು ಏನನ್ನೂ ಸಾರ್ವಜನಿಕವಾಗಿ ಹೇಳಲಾರೆ” ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News