ನಾಳೆ ಇಂಗ್ಲೆಂಡ್, ಪಾಕಿಸ್ತಾನಕ್ಕೆ ನಿರ್ಣಾಯಕ ಪಂದ್ಯ

Update: 2023-11-10 14:55 GMT

Photo: cricketworldcup.com

ಕೋಲ್ಕತಾ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆಯಲಿರುವ 44ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನದೊಂದಿಗೆ ಸೆಣಸಾಡಲಿದೆ. ಎರಡೂ ತಂಡಗಳು ವಿಭಿನ್ನ ಕಾರಣಗಳಿಗಾಗಿ ಈ ಪಂದ್ಯವನ್ನು ಗೆಲ್ಲಲೇಬೇಕಾದ ಗುರಿ ಇಟ್ಟುಕೊಂಡಿವೆ. ಹೀಗಾಗಿ ಈ ಎರಡು ತಂಡಗಳ ನಡುವಿನ ಈ ಪಂದ್ಯವು ಕುತೂಹಲ ಕೆರಳಿಸಿದೆ.

ವಿಶ್ವಕಪ್‌ನ ಸೆಮಿ ಫೈನಲ್ ಹಂತ ತಲುಪಬೇಕಾದರೆ ಪಾಕಿಸ್ತಾನ ತಂಡದ ಹಾದಿ ಕಠಿಣವಾಗಿದೆ. ಸದ್ಯ ಕಳಪೆ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ತಂಡವನ್ನು ಭಾರೀ ಅಂತರದಿಂದ ಮಣಿಸಿ ಪವಾಡ ಮಾಡಿದರೆ ಪಾಕ್ ಸೆಮಿ ಫೈನಲ್‌ಗೆ ತಲುಪಬಹುದು.

ಶ್ರೀಲಂಕಾದ ವಿರುದ್ಧ ನ್ಯೂಝಿಲ್ಯಾಂಡ್ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ ನಂತರ ಪಾಕಿಸ್ತಾನದ ಸೆಮಿ ಫೈನಲ್ ಕನಸು ಬಹುತೇಕ ಕಮರಿಹೋಗಿದೆ.

ಇದೀಗ ಪಾಕಿಸ್ತಾನಕ್ಕೆ (+0.036)ಹೋಲಿಸಿದರೆ ನ್ಯೂಝಿಲ್ಯಾಂಡ್(+743)ರನ್‌ರೇಟ್ ಶ್ರೇಷ್ಠಮಟ್ಟದಲ್ಲಿದೆ. ಬಾಬರ್ ಆಝಮ್ ಬಳಗ ನಾಲ್ಕನೇ ತಂಡವಾಗಿ ನಾಕೌಟ್ ಹಂತಕ್ಕೇರಬೇಕಾದರೆ ಮೊದಲು ಬ್ಯಾಟಿಂಗ್ ಮಾಡಿದರೆ 287 ರನ್ ಅಂತರದಿಂದ ಜಯ ಸಾಧಿಸಬೇಕು. ಒಂದು ವೇಳೆ ರನ್ ಚೇಸಿಂಗ್ ಮಾಡಿದರೆ 284 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಬೇಕು. ಪ್ರಾಯೋಗಿಕವಾಗಿ ಇದು ಕಷ್ಟದ ಕೆಲಸ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿಶ್ವಕಪ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಕನಸು ಈಗಾಗಲೇ ಭಗ್ನವಾಗಿದೆ. ಆದರೆ, ಅಗ್ರ-8ರಲ್ಲಿ ಸ್ಥಾನ ಪಡೆದು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅರ್ಹತೆ ಪಡೆಯುವತ್ತ ಚಿತ್ತಹರಿಸಿದೆ. ಹಿಂದಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ 160 ರನ್ ಅಂತರದಿಂದ ಜಯ ಸಾಧಿಸಿರುವ ಇಂಗ್ಲೆಂಡ್ ಐದು ಸೋಲಿನಿಂದ ಹೊರಬಂದು ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ. ಚಾಂಪಿಯನ್ಸ್ ಟ್ರೋಫಿ ಅರ್ಹತೆ ಪಡೆಯುವ ರೇಸ್‌ನಲ್ಲಿ ಗೆಲ್ಲುವ ಫೇವರಿಟ್ ತಂಡವಾಗಿದೆ.

ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆಯಬಹುದು. ಇಂಗ್ಲೆಂಡ್‌ಗೆ ಹೋಲಿಸಿದರೆ ಬಾಂಗ್ಲಾದೇಶ ಹಾಗೂ ನೆದರ್‌ಲ್ಯಾಂಡ್ಸ್ ಕಳಪೆ ನೆಟ್‌ರನ್‌ರೇಟ್ ಹೊಂದಿದೆ. ಬಾಂಗ್ಲಾ ಹಾಗೂ ನೆದರ್‌ಲ್ಯಾಂಡ್ಸ್ ಕೊನೆಯ ಲೀಗ್ ಪಂದ್ಯದಲ್ಲಿ ಕ್ರಮವಾಗಿ ಆಸ್ಟ್ರೇಲಿಯ ಹಾಗೂ ಭಾರತ ತಂಡಗಳನ್ನು ಎದುರಿಸಲಿದೆ.

ಪಾಕಿಸ್ತಾನ ತಂಡದ ವಿಶ್ವಕಪ್ ಅಭಿಯಾನವು ನಿರಾಶಾದಾಯಕವಾಗಿದ್ದರೂ ಕಳೆದ ಎರಡು ಪಂದ್ಯಗಳನ್ನು ಜಯಿಸಿ ಗೆಲುವಿನ ಲಯಕ್ಕೆ ಮರಳಿದೆ. ಫಖರ್ ಝಮಾನ್ ನ್ಯೂಝಿಲ್ಯಾಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ನಾಯಕ ಬಾಬರ್ ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 194 ರನ್ ಸೇರಿಸಿದ್ದರು.

ಮತ್ತೊಂದೆಡೆ ಸತತ ಸೋಲಿನಿಂದ ಕಂಗಾಲಾದ ನಂತರ ಇಂಗ್ಲೆಂಡ್ ಟೂರ್ನಿಯ ಅಂತ್ಯದಲ್ಲಿ ಸ್ವಲ್ಪ ಫಾರ್ಮ್ ಕಂಡುಕೊಂಡಿದೆ. ಕಳೆದ ಎರಡು ಪಂದ್ಯಗಳಲ್ಲಿ ಬೆನ್ ಸ್ಟೋಕ್ಸ್ ಹಾಗೂ ಡೇವಿಡ್ ಮಲನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂಗ್ಲೆಂಡ್‌ನ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಇಂಗ್ಲೆಂಡ್ ತನ್ನ ವೇಗಿಗಳನ್ನೇ ಹೆಚ್ಚು ಅವಲಂಬಿಸಿದ್ದು ಕ್ರಿಸ್ ವೋಕ್ಸ್ ಹಾಗೂ ಡೇವಿಡ್ ವಿಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳಾದ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್ ಹಿಡಿತ ಸಾಧಿಸುತ್ತಿದ್ದಾರೆ.

ಸ್ಪಿನ್ ಸ್ನೇಹಿ ಈಡನ್‌ಗಾರ್ಡನ್ಸ್‌ನಲ್ಲಿ ಪಾಕಿಸ್ತಾನದ ಫಾರ್ಮ್‌ನಲ್ಲಿರುವ ಬ್ಯಾಟರ್‌ಗಳು ಹಾಗೂ ಇಂಗ್ಲೆಂಡ್ ವೇಗದ ಬೌಲಿಂಗ್ ದಾಳಿಯ ನಡುವೆ ಪೈಪೋಟಿ ಕಂಡುಬರುವ ಸಾಧ್ಯತೆಯಿದೆ.

► ಏಕದಿನದಲ್ಲಿ ಹೆಡ್-ಟು-ಹೆಡ್

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಏಕದಿನ ಮಾದರಿ ಪಂದ್ಯದಲ್ಲಿ 92ನೇ ಬಾರಿ ಸೆಣಸಾಡಲು ಸಜ್ಜಾಗಿವೆ. ಈ ಹಿಂದಿನ 91 ಪಂದ್ಯಗಳಲ್ಲಿ ಇಂಗ್ಲೆಂಡ್ 56 ಬಾರಿ ಜಯ ಸಾಧಿಸಿದ್ದರೆ, ಪಾಕಿಸ್ತಾನ 32 ಬಾರಿ ಗೆಲುವು ಕಂಡಿದೆ. ಕೇವಲ 3 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯವಾಗಿದೆ.

► ವಿಶ್ವಕಪ್‌ನಲ್ಲಿ ಮುಖಾಮುಖಿ

ಉಭಯ ತಂಡಗಳು ಏಕದಿನ ವಿಶ್ವಕಪ್ ಇತಿಹಾಸದಲ್ಲಿ 10 ಬಾರಿ ಮುಖಾಮುಖಿಯಾಗಿವೆ. ಪಾಕಿಸ್ತಾನ 5 ಬಾರಿ ಜಯ ಸಾಧಿಸಿ ಅಲ್ಪ ಮೇಲುಗೈ ಪಡೆದಿದೆ. ಇಂಗ್ಲೆಂಡ್ 4ರಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಹಿಂದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ ತಂಡವನ್ನು 14 ರನ್ನಿಂದ ಸೋಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News