ಹಲವು ಮೈಲಿಗಲ್ಲು ತಲುಪಿದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್

Update: 2023-10-20 18:18 GMT

Photo- PTI

ಬೆಂಗಳೂರು : ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಡೈನಾಮಿಕ್ ಜೋಡಿ ಡೇವಿಡ್ ವಾರ್ನರ್(163 ರನ್, 124 ಎಸೆತ)ಹಾಗೂ ಮಿಚೆಲ್ ಮಾರ್ಷ್(121 ರನ್, 108 ಎಸೆತ)ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಹಲವು ದಾಖಲೆಗಳನ್ನು ನಿರ್ಮಿಸಿದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಸ್ಥಾನ ಪಡೆದರು.

► ಅತ್ಯಮೋಘ ಜೊತೆಯಾಟದ ವೇಳೆ ವಾರ್ನರ್ ಹಾಗೂ ಮಾರ್ಷ್ ನಿರ್ಮಿಸಿರುವ ದಾಖಲೆಗಳು

► ಶತಕ ಸಿಡಿಸಿದ ಆರಂಭಿಕ ಜೋಡಿ

ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಶತಕ ಗಳಿಸಿದ ನಾಲ್ಕನೇ ಆರಂಭಿಕ ಜೋಡಿಯಾಗಿದ್ದಾರೆ. ಆಸ್ಟ್ರೇಲಿಯದ ಜೋಡಿ ಈ ಸಾಧನೆಯನ್ನು ಈ ತನಕ ಮಾಡಿಲ್ಲ.

► ದಾಖಲೆ ಜೊತೆಯಾಟ

ವಾರ್ನರ್ ಹಾಗೂ ಮಾರ್ಷ್ ವಿಶ್ವಕಪ್ ಇತಿಹಾಸದಲ್ಲಿ ಮೊದಲ ವಿಕೆಟ್‌ನಲ್ಲಿ 2ನೇ ಗರಿಷ್ಠ ರನ್(259) ಜೊತೆಯಾಟ ನಡೆಸಿದರು. ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಹಾಗೂ ಉಪುಲ್ ತರಂಗ 2011ರಲ್ಲಿ ಪಲ್ಲೆಕಲೆಯಲ್ಲಿ ಝಿಂಬಾಬ್ವೆ ವಿರುದ್ಧ 282 ರನ್ ಗಳಿಸಿದ್ದರು. ಇದು ಮೊದಲ ವಿಕೆಟ್‌ಗೆ ದಾಖಲಾಗಿರುವ ಗರಿಷ್ಠ ರನ್ ಜೊತೆಯಾಟವಾಗಿತ್ತು. ವಾರ್ನರ್ ಹಾಗೂ ಮಾರ್ಷ್ ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್ ಜೊತೆಯಾಟ ನಡೆಸಿದ ಆಸ್ಟ್ರೇಲಿಯದ ಮೊದಲ ಆರಂಭಿಕ ಆಟಗಾರರೆನಿಸಿಕೊಂಡಿದ್ದಾರೆ. ಇದರೊಂದಿಗೆ ಬ್ರಾಡ್ ಹ್ಯಾಡಿನ್ ಹಾಗೂ ಶೇನ್ ವಾಟ್ಸನ್ ದಾಖಲೆಯನ್ನು ಮುರಿದಿದ್ದಾರೆ. ಹ್ಯಾಡಿನ್ ಹಾಗೂ ವಾಟ್ಸನ್ 2011ರಲ್ಲಿ ಬೆಂಗಳೂರಿನಲ್ಲಿ ಕೆನಡಾದ ವಿರುದ್ಧ ಮೊದಲ ವಿಕೆಟಿಗೆ 183 ರನ್ ಜೊತೆಯಾಟ ನಡೆಸಿದ್ದರು.

► ವಾರ್ನರ್ ಸತತ ಏಕದಿನ ಶತಕ

ಡೇವಿಡ್ ವಾರ್ನರ್ ಪಾಕಿಸ್ತಾನ ವಿರುದ್ಧ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಸತತ 4ನೇ ಶತಕವನ್ನು ಪೂರೈಸಿದರು. ಈ ಮೂಲಕ ವಿರಾಟ್ ಕೊಹ್ಲಿ ಅವರ ಸಾಧನೆ ಸರಿಗಟ್ಟಿದರು. ಕೊಹ್ಲಿ ಕೂಡ ಪಾಕ್ ವಿರುದ್ಧವೇ ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಸತತ 4 ಶತಕ ಗಳಿಸಿದ್ದಾರೆ.

► ವಾರ್ನರ್‌ರಿಂದ ವಿಶ್ವಕಪ್ ಮೈಲಿಗಲ್ಲು

ವಾರ್ನರ್ ವಿಶ್ವಕಪ್‌ನಲ್ಲಿ ಐದನೇ ಶತಕವನ್ನು ಸಿಡಿಸಿದರು. ಇದರೊಂದಿಗೆ ವಿಶ್ವಕಪ್‌ನಲ್ಲಿ ಗರಿಷ್ಠ ಶತಕಗಳನ್ನು ಗಳಿಸಿರುವ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದರು.

► ಹುಟ್ಟುಹಬ್ಬದಂದು ಶತಕದ ಸಂಭ್ರಮ

ಮಿಚೆಲ್ ಮಾರ್ಷ್ ಶತಕವನ್ನು ಸಿಡಿಸಿ ತನ್ನ 32ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹುಟ್ಟುಹಬ್ಬದಂದೇ ಶತಕವನ್ನು ಸಿಡಿಸಿದ ಆರನೇ ಆಟಗಾರ ಎನಿಸಿಕೊಂಡರು. ಮಾರ್ಷ್ ಈ ಸಾಧನೆ ಮಾಡಿರುವ ಆಸ್ಟ್ರೇಲಿಯದ ಮೊದಲ ಆಟಗಾರನಾಗಿದ್ದಾರೆ. ತನ್ನ ಹುಟ್ಟುಹಬ್ಬದಂದೇ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ 2ನೇ ಆಟಗಾರನಾಗಿದ್ದಾರೆ. ಈ ಮೂಲಕ ನ್ಯೂಝಿಲ್ಯಾಂಡ್‌ನ ರಾಸ್ ಟೇಲರ್ ಹೆಜ್ಜೆಯನ್ನು ಅನುಸರಿಸಿದ್ದಾರೆ.

► ಆಸ್ಟ್ರೇಲಿಯದ 200 ಪ್ಲಸ್ ಜೊತೆಯಾಟ

ವಾರ್ನರ್ ಹಾಗೂ ಮಾರ್ಷ್ ವಿಶ್ವಕಪ್ ಇತಿಹಾಸದಲ್ಲಿ 200ಕ್ಕೂ ಅಧಿಕ ರನ್ ಜೊತೆಯಾಟ ನಡೆಸಿದ ಆಸ್ಟ್ರೇಲಿಯದ ಐದನೇ ಜೋಡಿಯಾಗಿದ್ದಾರೆ. ಟೂರ್ನಮೆಂಟ್‌ನಲ್ಲಿ ಹೆಚ್ಚು ಬಾರಿ ಜೊತೆಯಾಟ ನಡೆಸಿರುವ ಭಾರತದ ದಾಖಲೆಯನ್ನು ಸರಿಗಟ್ಟಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News