ವಿದಾಯದ ಟೆಸ್ಟ್ ಪಂದ್ಯಕ್ಕೂ ಮುನ್ನ ಏಕದಿನಕ್ಕೆ ಡೇವಿಡ್ ವಾರ್ನರ್ ದಿಢೀರ್ ಗುಡ್‌ಬೈ!
ಹೊಸದಿಲ್ಲಿ: ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ನಂತರ ನಿವೃತ್ತರಾಗುವುದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಆದರೆ, ಅಗತ್ಯ ಬಿದ್ದರೆ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರೀಡಾಕೂಟದಲ್ಲಿ ತಾನು ಭಾಗವಹಿಸುವ ಸಾಧ್ಯತೆಯನ್ನು ಅವರು ಅಲ್ಲಗಳೆದಿಲ್ಲ.
ಬುಧವಾರ ತಮ್ಮ ತವರಾದ ಸಿಡ್ನಿಯಲ್ಲಿ ನಡೆಯಲಿರುವ ತಮ್ಮ ಕೊನೆಯ 112ನೇ ಪಂದ್ಯದಲ್ಲಿ 37 ವರ್ಷದ ಡೇವಿಡ್ ವಾರ್ನರ್ ಕಣಕ್ಕಿಳಿಯಲಿದ್ದಾರೆ.
ತಮ್ಮ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಡೇವಿಡ್ ವಾರ್ನರ್, 44.58 ರನ್ ಸರಾಸರಿಯೊಂದಿಗೆ 8,695 ರನ್ ಗಳನ್ನು ಕಲೆ ಹಾಕಿದ್ದಾರೆ. ಈ ಪೈಕಿ 26 ಶತಕಗಳು ಹಾಗೂ 36 ಅರ್ಧ ಶತಕಗಳಿವೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡೇವಿಡ್ ವಾರ್ನರ್, ಏಕದಿನ ಕ್ರಿಕೆಟ್ ನಿಂದಲೂ ನಿವೃತ್ತರಾಗುತ್ತಿರುವುದನ್ನು ದೃಢಪಡಿಸಿದರು. 2009ರಲ್ಲಿ ಅವರು ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದಂದಿನಿಂದ ಇದುವರೆಗೂ ಅವರು ಆಸ್ಟ್ರೇಲಿಯಾ ತಂಡದ ಅವಿಭಾಜ್ಯ ಅಂಗವಾಗಿದ್ದರು. 2015 ಹಾಗೂ 2023ರಲ್ಲಿ ವಿಶ್ವಕಪ್ ಜಯಿಸಿದ ಆಸ್ಟ್ರೇಲಿಯಾ ತಂಡದ ಸದಸ್ಯರೂ ಆಗಿದ್ದರು.
ಇದುವರೆಗೆ 161 ಏಕದಿನ ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್, 161 ಪಂದ್ಯಗಳಿಂದ 45.30 ರನ್ ಸರಾಸರಿಯಲ್ಲಿ ಒಟ್ಟು 6,932 ರನ್ ಗಳಿಸಿದ್ದಾರೆ. ಈ ಪೈಕಿ 22 ಶತಕಗಳು ಸೇರಿವೆ. ಆಸ್ಟ್ರೇಲಿಯಾ ತಂಡದ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿರುವವರ ಪೈಕಿ ರಿಕಿ ಪಾಂಟಿಂಗ್ ನಂತರ ಡೇವಿಡ್ ವಾರ್ನರ್ ಎರಡನೆಯ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ ಒಟ್ಟು 30 ಶತಕಗಳನ್ನು ಗಳಿಸಿದ್ದಾರೆ.
ಆದರೆ, ಡೇವಿಡ್ ವಾರ್ನರ್ ಟಿ-20 ಮಾದರಿಯ ಕ್ರಿಕೆಟ್ ನಲ್ಲಿ ತಮ್ಮ ಆಟ ಮುಂದುವರಿಸಲಿದ್ದು, ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ನಡೆಯಲಿರುವ 2024ರ ಟಿ-20 ವಿಶ್ವಕಪ್ ನಲ್ಲಿ ಆಡುವ ಗುರಿ ಹೊಂದಿದ್ದಾರೆ.