ಭವಿಷ್ಯದಲ್ಲಿ ಕೋಚ್ ಆಗುವ ಬಯಕೆ ವ್ಯಕ್ತಪಡಿಸಿದ ವಾರ್ನರ್

Update: 2024-01-07 18:02 GMT

ಡೇವಿಡ್ ವಾರ್ನರ್ | Photo : PTI

ಸಿಡ್ನಿ: ಭವಿಷ್ಯದಲ್ಲಿ ಕೋಚ್ ಆಗಿ ಸೇವೆ ಸಲ್ಲಿಸುವ ಇಂಗಿತವನ್ನು ಆಸ್ಟ್ರೇಲಿಯದ ಬ್ಯಾಟಿಂಗ್ ಮಾಂತ್ರಿಕ ಡೇವಿಡ್ ವಾರ್ನರ್ ವ್ಯಕ್ತಪಡಿಸಿದ್ದಾರೆ.

37 ವರ್ಷದ ವಾರ್ನರ್ ತನ್ನ ಕ್ರೀಡಾ ಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಆಡಿದರು. ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಲು ಅವರು ಆಸ್ಟ್ರೇಲಿಯ ತಂಡಕ್ಕೆ ನೆರವಾದರು.

ಅವರು ಈಗಾಗಲೇ ಅಂತರ್ರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಕೋರಿದ್ದಾರೆ. ಆದರೆ ಅಂತರ್ರಾಷ್ಟ್ರೀಯ ಟ್ವೆಂಟಿ20 ಪಂದ್ಯಗಳು ಮತ್ತು ಜಗತ್ತಿನಾದ್ಯಂತ ನಡೆಯವು ಟಿ20 ಲೀಗ್ ಗಳಿಗೆ ಲಭ್ಯರಿರುತ್ತಾರೆ.

“ಹೌದು, ಭವಿಷ್ಯದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುವ ಬಯಕೆಯನ್ನು ನಾನು ಹೊಂದಿದ್ದೇನೆ'' ಎಂದು 'ಫಾಕ್ಸ್ ಕ್ರಿಕೆಟ್'ಗೆ ನೀಡಿದ ಸಂದರ್ಶನವೊಂದರಲ್ಲಿ ವಾರ್ನರ್ ಹೇಳಿದರು.

“ಇನ್ನೂ ಕೆಲವು ದಿನಗಳ ಕಾಲ ನಾನು ಹೊರಗಿರಬಹುದೇ ಎಂದು ತಿಳಿಯಲು ಮೊದಲು ನನ್ನ ಹೆಂಡತಿಯೊಂದಿಗೆ ಮಾತನಾಡಬೇಕಾಗಿದೆ'' ಎಂದರು.

ಡೇವಿಡ್ ವಾರ್ನರ್ ಎಲ್ಲಾ ಮಾದರಿಗಳ ಕ್ರಿಕೆಟ್‌ ನಲ್ಲಿ ಆಸ್ಟ್ರೇಲಿಯದ ಎರಡನೇ ಗರಿಷ್ಠ ರನ್ ಗಳಿಕೆದಾರರಾಗಿದ್ದಾರೆ. ಅವರು 18,612 ರನ್‌ ಗಳನ್ನು ಗಳಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 27,368 ರನ್‌ ಗಳನ್ನು ಸಂಪಾದಿಸಿದ್ದಾರೆ.

ಇನ್ನೊಂದು ದಶಕದಲ್ಲಿ ಕ್ರಿಕೆಟ್ ನಿಂದ ಸ್ಲೆಜಿಂಗ್ ಮಾಯ

ಇನ್ನೊಂದು ದಶಕದಲ್ಲಿ ಎದುರಾಳಿ ಆಟಗಾರರ ನಿಂದನೆ (ಸ್ಲೆಜಿಂಗ್)ಯು ಕ್ರಿಕೆಟ್ ನಿಂದ ಹೊರಟುಹೋಗುತ್ತದೆ ಎಂದು ಡೇವಿಡ್ ವಾರ್ನರ್ ಭವಿಷ್ಯ ನುಡಿದಿದ್ದಾರೆ. ವಿವಿಧ ದೇಶಗಳ ಆಟಗಾರರು ಐಪಿಎಲ್ ನಂಥ ದೇಶಿ ಲೀಗ್ ಗಳಲ್ಲಿ ಜೊತೆಯಾಗಿ ಆಡುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ಅವರು ಎದುರಾಳಿ ಆಟಗಾರರ ವಿರುದ್ಧ ಆಕ್ರಮಣಕಾರಿ ವರ್ತನೆಗೆ ಖ್ಯಾತರಾಗಿದ್ದರು. ವಾರ್ನರ್ ಟೆಸ್ಟ್ ಬದುಕಿನ ಆರಂಭಿಕ ಹಂತದಲ್ಲಿ, ಎದುರಾಳಿ ಆಟಗಾರರನ್ನು ನಿಂದಿಸುವಂತೆ ಕೋಚಿಂಗ್ ಸಿಬ್ಬಂದಿ ಅವರಿಗೆ ನಿರ್ದೇಶನಗಳನ್ನು ನೀಡಿದ್ದರು ಎಂದು ಕಳೆದ ವಾರದ ಆಸ್ಟ್ರೇಲಿಯ ತಂಡದ ಆಟಗಾರ ಉಸ್ಮಾನ್ ಖ್ವಾಜಾ ಹೇಳಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂತಾದ ದೇಶಿ ಟಿ20 ಪಂದ್ಯಾವಳಿಗಳ ಕಾರಣದಿಂದಾಗಿ ನಿಂದನಾ ಕಲೆಯು ಇತಿಹಾಸ ಸೇರಲಿದೆ ಎಂದು ವಾರ್ನರ್ ಅಭಿಪ್ರಾಯಪಟ್ಟರು. ಇಂಥ ಪಂದ್ಯಾವಳಿಗಳಲ್ಲಿ ಕ್ರಿಕೆಟಿಗರು ತಮ್ಮ ಎದುರಾಳಿ ದೇಶಗಳ ಆಟಗಾರರೊಂದಿಗೆ ಒಂದೇ ಡ್ರೆಸಿಂಗ್ ಕೋಣೆಯಲ್ಲಿ ಸಮಯ ಕಳೆಯುತ್ತಾರೆ ಎಂದು 'ಫಾಕ್ಸ್ ಕ್ರಿಕೆಟ್'ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

“ಮುಂದೆ ಏನು ನಡೆಯಲಿದೆ ಎನ್ನುವುದಕ್ಕೆ ಇದು ಸೂಚನೆ. ಆ ಹಳೆ ಮಾದರಿಯ ಆಕ್ರಮಣಕಾರಿ ಧೋರಣೆಯನ್ನು ನೀವಿನ್ನು ಕಾಣುವುದಿಲ್ಲ'' ಎಂದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News