ಟ್ವೆಂಟಿ-20 ವಿಶ್ವಕಪ್ ಹೊರತಾಗಿಯೂ ಬಹುತೇಕ ವಿದೇಶಿ ಆಟಗಾರರು ಐಪಿಎಲ್-2024ಕ್ಕೆ ಲಭ್ಯ

Update: 2023-12-18 17:19 GMT

Photo: PTI 

ಮುಂಬೈ : ಪ್ರತಿಷ್ಠಿತ ಟಿ-20 ಲೀಗ್ ಐಪಿಎಲ್ ವೇಳಾಪಟ್ಟಿಯು ಮುಂದಿನ ವರ್ಷ ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯ ದಿನಾಂಕ ಪ್ರಕಟವಾದ ನಂತರವೇ ಸ್ಪಷ್ಟವಾಗಲಿದೆ. 2024ರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ಜೂನ್ 4ರಿಂದ 30ರ ತನಕ ಕೆರಿಬಿಯನ್ ಹಾಗೂ ಅಮೆರಿಕದಲ್ಲಿ ನಡೆಯಲಿದೆ. ಐಪಿಎಲ್-2024 ಮುಗಿದ ಬೆನ್ನಿಗೇ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಹೊರತಾಗಿಯೂ ಬಹುತೇಕ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಐಪಿಎಲ್‌ಗೆ ಕಳುಹಿಸಿಕೊಡಲು ಅನುಮತಿ ನೀಡಿವೆ ಎಂದು ವರದಿಯಾಗಿದೆ.

ದುಬೈನಲ್ಲಿ ಮಂಗಳವಾರ ನಡೆಯಲಿರುವ ಐಪಿಎಲ್ ಹರಾಜಿಗಿಂತ ಮೊದಲು ಆಟಗಾರರು ಟೂರ್ನಮೆಂಟ್‌ನ ಪೂರ್ಣಾವಧಿಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ನ್ಯೂಝಿಲ್ಯಾಂಡ್ ಹಾಗೂ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಗಳಿಗೆ ಬಿಸಿಸಿಐ ಮಾಹಿತಿ ನೀಡಿದೆ.

ಇಂಗ್ಲೆಂಡ್, ಐರ್‌ಲ್ಯಾಂಡ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಷರತ್ತುಬದ್ಧ ಅನುಮತಿ ನೀಡಿವೆ. ಈ ಅವಧಿಯಲ್ಲಿ ಈ ತಂಡಗಳು ಕೆಲವು ಸರಣಿಯನ್ನು ಆಡಲಿವೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಕ್ರಿಕೆಟ್ ಐರ್‌ಲ್ಯಾಂಡ್ ತಮ್ಮ ವೇಗದ ಬೌಲರ್‌ಗಳಾದ ಮುಸ್ತಫಿಝುರ್ರಹ್ಮಾನ್ ಹಾಗೂ ಜೋಶ್ ಲಿಟ್ಲ್‌ಗೆ ಲೀಗ್‌ನಲ್ಲಿ ಭಾಗವಹಿಸಲು ವಿಶೇಷ ಅನುಮತಿ ನೀಡಿದೆ.

ಆರ್‌ಸಿಬಿಯಿಂದ ಬಿಡುಗಡೆಯಾಗಿರುವ ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಐಪಿಎಲ್‌ನ ಮೊದಲ ವಾರ ಲಭ್ಯವಿದ್ದಾರೆ. ಗಾಯಗೊಳ್ಳದ ಹೊರತು ತನ್ನ ಎಲ್ಲ ಆಟಗಾರರು ಲಭ್ಯವಿರುತ್ತಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾವು ಬಿಸಿಸಿಐಗೆ ಭರವಸೆ ನೀಡಿದೆ.

ಇಂಗ್ಲೆಂಡ್ ತಂಡ ಮೇ 22ರಿಂದ ತವರು ನೆಲದಲ್ಲಿ ಪಾಕಿಸ್ತಾನದ ವಿರುದ್ಧ ಟಿ-20 ಸರಣಿಯನ್ನು ಆಡಲಿದೆ.

ತನ್ನ ಆಟಗಾರರು ಫಿಟ್ ಆಗಿದ್ದರೆ ಅಥವಾ ಅಂತರ್‌ರಾಷ್ಟ್ರೀಯ ಸರಣಿಯನ್ನು ಹೊಂದಿಲ್ಲದಿದ್ದರೆ ಲೀಗ್‌ನಲ್ಲಿ ಭಾಗವಹಿಸಬಹುದು ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಬಿಸಿಸಿಐಗೆ ತಿಳಿಸಿದೆ.

ಇಂಗ್ಲೆಂಡ್ ಲೆಗ್-ಸ್ಪಿನ್ನರ್ ರೆಹಾನ್ ಅಹ್ಮದ್ ಐಪಿಎಲ್ ಹರಾಜಿನಿಂದ ಹಿಂದೆ ಸರಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News