ಒಂದು ಪಂದ್ಯದಿಂದ ನಾಯಕತ್ವ ಕಳೆದುಕೊಳ್ಳುವುದಿಲ್ಲ: ಬಾಬರ್

Update: 2023-10-14 18:09 GMT

PHOTO : PTI

ಅಹ್ಮದಾಬಾದ್, ಅ. 14: ಒಂದು ಪಂದ್ಯದ ಕಾರಣದಿಂದಾಗಿ ನನಗೆ ತಂಡದ ನಾಯಕತ್ವ ಸಿಗಲಿಲ್ಲ, ಹಾಗೆಯೇ ಒಂದು ಪಂದ್ಯದಿಂದ ನಾನು ನಾಯಕತ್ವವನ್ನು ಕಳೆದುಕೊಳ್ಳುವುದೂ ಇಲ್ಲ ಎಂದು ಪಾಕಿಸ್ತಾನಿ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಮ್ ಹೇಳಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದ ಮುನ್ನಾ ದಿನ, ಪ್ರಸಕ್ತ ಉತ್ತಮ ಫಾರ್ಮ್ನಲ್ಲಿ ಇಲ್ಲದಿರುವ ಅವರು ಪ್ರಶ್ನೆಯೊಂದಕ್ಕೆ ಈ ರೀತಿಯಾಗಿ ಉತ್ತರಿಸಿದರು. ಭಾರತದ ವಿರುದ್ಧದ ಈ ಮಹತ್ವದ ಪಂದ್ಯವನ್ನು ಪಾಕಿಸ್ತಾನ ಸೋತರೆ, ನಾಯಕತ್ವ ಕಳೆದುಕೊಳ್ಳುವ ಭೀತಿಯನ್ನು ನೀವು ಹೊಂದಿದ್ದೀರಾ ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲಾಗಿತ್ತು.

ಏಳು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ, ಪಾಕಿಸ್ತಾನವು ಮೊದಲ ಬಾರಿಗೆ ಭಾರತದ ವಿರುದ್ಧ ಭಾರತದಲ್ಲಿ ಆಡಿದೆ.

ಶನಿವಾರದ ಪಂದ್ಯಕ್ಕಿಂತಲೂ ಮೊದಲು, ಏಕದಿನ ವಿಶ್ವಕಪ್ನ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಏಳು ಬಾರಿ ಮುಖಾಮುಖಿಯಾಗಿದ್ದು, ಆ ಎಲ್ಲಾ ಪಂದ್ಯಗಳಲ್ಲಿ ಭಾರತ ಜಯ ಗಳಿಸಿದೆ. ಈ ಹಿನ್ನೆಲೆಯಲ್ಲಿ, ನೀವು ಅಭಿಮಾನಿಗಳ ಒತ್ತಡವನ್ನು ಎದುರಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, ‘‘ನಾನು ಇತಿಹಾಸದ ಮೇಲೆ ಗಮನ ಹರಿಸುತ್ತಿಲ್ಲ. ಭವಿಷ್ಯದ ಮೇಲೆ ಗಮನ ಹರಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಇಂಥ ದಾಖಲೆಗಳು ಇರುವುದು ಮುರಿಯುವುದಕ್ಕಾಗಿಯೇ. ಅದನ್ನು ಮುರಿಯಲು ನಾನು ಪ್ರಯತ್ನಿಸುತ್ತೇನೆ. ಮೊದಲ ಎರಡು ಪಂದ್ಯಗಳಲ್ಲಿ ನನ್ನ ತಂಡ ಉತ್ತಮ ಪ್ರದರ್ಶನ ನೀಡಿದೆ ಎಂದು ನಾನು ಭಾವಿಸುತ್ತೇನೆ ಹಾಗೂ ಮುಂದಿನ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಲಿದೆ’’ ಎಂದು ಬಾಬರ್ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News