ಡೊಮಿನಿಕಾ ಎಂಬ ಸ್ವರ್ಗದ ತುಂಡು ಮತ್ತು ಥಿಯಾ ಲಾಫಂಡ್‌ಳ ಚಿನ್ನದ ಜಿಗಿತ
ಪಶ್ಚಿಮ ಕೆರಿಬಿಯಾದ ಸಣ್ಣ ದ್ವೀಪ ರಾಷ್ಟ್ರ ಡೊಮಿನಿಕಾ.
ಬಿಸಿನೀರ ಬುಗ್ಗೆಗಳು, ಸುಂದರ ಜಲಪಾತಗಳು, ಮುಗಿಲ ಚುಂಬಿಸುವ ಗಿರಿಗಳು, ಬೇರಲ್ಲೂ ಕಾಣಸಿಗದ ನೂರಾರು ಪಕ್ಷಿ, ಸಮುದ್ರ ಜೀವಿ ಪ್ರಭೇದಗಳ ತವರೂರು ಈ ಡೊಮಿನಿಕಾ
ಇದು ಪ್ರಪಂಚದ ಅತೀ ಚಿಕ್ಕ ರಾಷ್ಟ್ರಗಳಲ್ಲಿ ಒಂದು. ಈ ದೇಶದ ಜನಸಂಖ್ಯೆ ಬರೀ 74,000!
ಹೆಚ್ಚೂ ಕಮ್ಮಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗಿಂತಲೂ ಚಿಕ್ಕದು ಈ ದೇಶ.
ಬಾಳೆಹಣ್ಣು ಮಾರಾಟವೇ ಈ ದೇಶದ ಬಹುಮುಖ್ಯ ಆದಾಯದ ಮೂಲ. ಬಾಳೆಹಣ್ಣಿನ ಹೊರತಾಗಿ, ಯಾಮ್ ( ಸುವರ್ಣ ಗೆಡ್ಡೆ), ತೆಂಗಿನ ಉತ್ಪನ್ನಗಳ ರಫ್ತಿನಿಂದ ಈ ದೇಶ ಆದಾಯ ಗಳಿಸುತ್ತದೆ.
ಬಹುತೇಕ ಪ್ರಪಂಚಕ್ಕೆ ಗೊತ್ತೇ ಇರದ ಈ ದೇಶ ಡೊಮಿನಿಕಾದ ಹೆಸರನ್ನು ವಿಶ್ವದಾದ್ಯಂತ ಕ್ರೀಡಾಪ್ರೇಮಿಗಳು ರಾತ್ರೋರಾತ್ರಿ ಕೇಳುವಂತೆ ಮಾಡಿದ್ದು ಥಿಯಾ ಲಾಫಂಡ್ ಎಂಬ ಅತ್ಲೀಟ್ !
ಪ್ಯಾರಿಸ್ ಒಲಿಂಪಿಕ್ಸ್‌ನ ಟ್ರಿಪಲ್ ಜಂಪ್ ವಿಭಾಗದಲ್ಲಿ ಚಿನ್ನ ಗೆದ್ದು ಬಂಗಾರದಂತಹ ಸಾಧನೆ ಮಾಡಿದ ಥಿಯಾ ಲಾಫಂಡ್, ಟ್ರ್ಯಾಕೇ ಇಲ್ಲದ ದೇಶದಿಂದ ಬಂದು ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗ ಅಂತ ಕರೆಯಲ್ಪಡುವ ಅತ್ಲೆೆಟಿಕ್ ಸ್ಪರ್ಧೆಯ ಟ್ರಿಪಲ್ ಜಂಪ್ ನಲ್ಲಿ ಯಾರೂ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಚಿನ್ನ ಗೆದ್ದಿದ್ದಾರೆ.
ಕ್ವಾಲಿಫಿಕೇಷನ್ ಹಂತದಲ್ಲಿ 14.32 ಮೀಟರ್ ಜಿಗಿದು ಏಳನೆಯ ಸ್ಥಾನ ಪಡೆದು, ಕಷ್ಟದಲ್ಲೇ ಫೈನಲ್ ತಲುಪಿದ್ದ ಥಿಯಾ 15.02 ಮೀಟರ್ ಜಿಗಿದು ತನ್ನ ಸರ್ವಶ್ರೇಷ್ಠ ಪ್ರದರ್ಶನ ನೀಡಿ, ಕ್ರೀಡಾ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದರು.
ಈ ಹಿಂದೆ ರಿಯೊ ಒಲಿಂಪಿಕ್ಸ್, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರೂ, ಥಿಯಾ ಅವರ ಪ್ರದರ್ಶನ ಗಮನ ಸೆಳೆಯುವ ಮಟ್ಟಕ್ಕೆ ಇರಲಿಲ್ಲ.
ಆದರೆ ಒಂದೇ ಒಂದು ಅದ್ಭುತ ಜಿಗಿತ, ಬರೀ ಥಿಯಾ ಮಾತ್ರವಲ್ಲ ಡೊಮಿನಿಕಾ ದೇಶದ ಭವಿಷ್ಯವನ್ನೇ ಬದಲಿಸಿತು.
ವರ್ಷಕ್ಕೆ ಕೆಲವೇ ಸಾವಿರ ಪ್ರವಾಸಿಗಳನ್ನು ಆಕರ್ಷಿಸುತ್ತಿದ್ದ ಡೊಮಿನಿಕಾ ದೇಶದ ಪ್ರವಾಸಿ ಸ್ಥಳಗಳನ್ನು ನಿನ್ನೆಯಿಂದ ಜಗತ್ತಿನೆಲ್ಲೆಡೆ ಜನರು ಆನ್‌ಲೈನ್‌ನಲ್ಲಿ ಹುಡುಕಾಡ ತೊಡಗಿದ್ದಾರೆ. ನಾಳೆ (ಸೋಮವಾರ) ಸಂಭ್ರಮಾಚರಣೆಗಾಗಿ ಇಡೀ ಡೊಮಿನಿಕಾ ದೇಶಕ್ಕೆ ರಜೆ ಘೋಷಿಸಲಾಗಿದೆ.
ಗೆಲ್ಲುವ ಛಲ ಇದ್ದರೆ ಸಾಲು ಸಾಲು ಸೋಲುಗಳು ಸಾಧನೆಗೆಂದೂ ಅಡ್ಡಿ ಬಾರದು ಎಂದು ಸಾಧಿಸಿ ತೋರಿಸಿದ ಥಿಯಾ ಲಾಫಂಡ್‌ಗೆ ವಿಶೇಷ ಅಭಿನಂದನೆಗಳು.
ಬಾಲ್ಯದಲ್ಲಿ ಡ್ಯಾನ್ಸರ್ ಆಗಿದ್ದ ಥಿಯಾ ಜನರ ಕುಹಕ, ಟೀಕೆಗಳಿಗೆ ಗುರಿಯಾಗಿ ಡ್ಯಾನ್ಸ್ ತೊರೆಯಬೇಕಾಯಿತು. ನಂತರ ಕಾಲೇಜಿನ ಆಟೋಟಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡು, ಹಂತ ಹಂತವಾಗಿ ಮೇಲೇರುತ್ತಾ ಬಂದರು.
2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ಯಶಸ್ವಿಯಾದರೂ, ಮೊದಲ ಸುತ್ತಿಗಿಂತ ಮೇಲೇರಲು ಆಗಲಿಲ್ಲ. ಆನಂತರ 2018ರ ಕಾಮನ್‌ವೆಲ್ತ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಡೊಮಿನಿಕನ್ ಕ್ರೀಡಾಳುವಾಗಿ ಇತಿಹಾಸ ಬರೆದರು.
ಆನಂತರ 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ವಾಲಿಫಿಕೇಶನ್ ಹಂತದಲ್ಲೇ ಸೋತು ನಿರ್ಗಮಿಸಿದರು. ಆದರೂ ಪಟ್ಟುಬಿಡದೇ 2022ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡರು. ಇದೇ ಮಾರ್ಚ್ 2024ರ ಟ್ರಿಪಲ್ ಜಂಪ್ ವಿಶ್ವ ಚಾಂಪಿಯನ್‌ಶಿಪ್
ನಲ್ಲಿ ಚಿನ್ನ ಗೆದ್ದು ಈ ಸಾಧನೆ ಮಾಡಿದ ಮೊದಲ ಡೊಮಿನಿಕನ್ ಕ್ರೀಡಾಪಟುವಾದರು. ಈಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮತ್ತೆ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಎಂದೂ ಯಾರೂ ಕೇಳಿರದ ದೇಶದ ಹುಡುಗಿಯೊಬ್ಬಳು ಎಲ್ಲಾ ಪ್ರತಿಕೂಲ, ಸೋಲುಗಳನ್ನು ಮೆಟ್ಟಿ ನಿಂತು, ವಿಶ್ವದ ಅಗ್ರಮಾನ್ಯ ವೇದಿಕೆಯಲ್ಲಿ ತನ್ನ ದೇಶದ ಧ್ವಜ ಹಾರಾಡಿಸುತ್ತಾ, ವಿಶ್ವಕ್ಕೆ ತನ್ನ ರಾಷ್ಟ್ರಗೀತೆ ಕೇಳಿಸಿ, ಜೊತೆಗೆ ತನ್ನ ದೇಶಕ್ಕೂ ಒಳ್ಳೆಯ ಹೆಸರು ತರುವ ಮೂಲಕ ಇನ್ನಿತರ ದೇಶದ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ. ಕ್ರೀಡೆಯ ನಿಜವಾದ ಉದ್ದೇಶ ಈಡೇರುವುದು ಇಲ್ಲಿಯೇ ಅಲ್ಲವೇ ?