ದುಲೀಪ್ ಟ್ರೋಫಿ | 'ಇಂಡಿಯಾ ಎ' ತಂಡಕ್ಕೆ ಮಯಾಂಕ್ ಅಗರ್ವಾಲ್ ನಾಯಕ
ಅನಂತಪುರ : ಅನಂತಪುರದಲ್ಲಿ ಇಂಡಿಯಾ ಡಿ ವಿರುದ್ಧ ಸೆಪ್ಟಂಬರ್ 12ರಂದು ನಡೆಯಲಿರುವ ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಇಂಡಿಯಾ ಎ ತಂಡವನ್ನು ಶುಭಮನ್ ಗಿಲ್ ಬದಲಿಗೆ ಕರ್ನಾಟಕದ ಬ್ಯಾಟರ್ ಮಯಾಂಕ್ ಅಗರ್ವಾಲ್ ನಾಯಕನಾಗಿ ಮುನ್ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ ಇಂಡಿಯಾ ಬಿ ವಿರುದ್ಧ ಸೋತಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡಿಯಾ ಎ ತಂಡವನ್ನು ಗಿಲ್ ಮುನ್ನಡೆಸಿದ್ದರು.
ಸೆಪ್ಟಂಬರ್ 19ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಗಿಲ್ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಧ್ರುವ್ ಜುರೆಲ್, ಕೆ.ಎಲ್.ರಾಹುಲ್, ಕುಲದೀಪ್ ಯಾದವ್ ಹಾಗೂ ಆಕಾಶ್ ದೀಪ್ ಅವರು ಇಂಡಿಯಾ ಎ ತಂಡದಿಂದ ರಾಷ್ಟ್ರೀಯ ತಂಡವನ್ನು ಸೇರಲಿರುವ ಇತರ ಆಟಗಾರರಾಗಿದ್ದಾರೆ. ಇವರು ದೇಶೀಯ ಪಂದ್ಯಾವಳಿಯಲ್ಲಿ ಮತ್ತೆ ಭಾಗವಹಿಸುವುದಿಲ್ಲ. ಅಕ್ಷಯ್ ನಾರಂಗ್, ಶೇಕ್ ರಶೀದ್, ಶಮ್ಸ್ ಮುಲಾನಿ ಬದಲಿ ಆಟಗಾರರಾಗಿ ಇಂಡಿಯಾ ಎ ತಂಡವನ್ನು ಸೇರಿಲಿದ್ದಾರೆ.
ಮೊಣಕಾಲು ನೋವಿನಿಂದಾಗಿ ಮೊದಲ ಸುತ್ತಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಪ್ರಸಿದ್ಧ ಕೃಷ್ಣ ಅವರು ಇಂಡಿಯಾ ಎ ತಂಡಕ್ಕೆ ಸೇರಿದ್ದಾರೆ.
ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸರ್ಫರಾಝ್ ಖಾನ್ ಹಾಗೂ ಯಶ್ ದಯಾಳ್, ಇಂಡಿಯಾ ಬಿ ತಂಡದಿಂದ ಟೀಮ್ ಇಂಡಿಯಾಕ್ಕೆ ಕರೆ ಪಡೆದಿದ್ದು, ಇವರ ಬದಲಿಗೆ ರಿಂಕು ಸಿಂಗ್, ಸುಯಶ್ ಪ್ರಭುದೇಸಾಯಿ ಹಾಗೂ ಹಿಮಾಂಶು ಮಂತ್ರಿ ಆಯ್ಕೆಯಾಗಿದ್ದಾರೆ.
ಇಂಡಿಯಾ ಡಿ ತಂಡಕ್ಕೆ ಕ್ರಮವಾಗಿ ಅಕ್ಷರ್ ಪಟೇಲ್ ಹಾಗೂ ತುಷಾರ್ ದೇಶಪಾಂಡೆ ಸ್ಥಾನಕ್ಕೆ ನಿಶಾಂತ್ ಸಿಂಧು ಹಾಗೂ ವಿದ್ವತ್ ಕಾವೇರಪ್ಪ ಸೇರ್ಪಡೆಯಾಗಿದ್ದಾರೆ. ಇಂಡಿಯಾ ಸಿ ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇಂಡಿಯಾ ಡಿ ವಿರುದ್ಧ ತಾನಾಡಿದ ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಜಯ ಸಾಧಿಸಿರುವ ಇಂಡಿಯಾ ಸಿ ತಂಡವು ಅನಂತಪುರದ ಎಡಿಎ-ಎಡಿಸಿಎ ಕ್ರಿಕೆಟ್ ಮೈದಾನದಲ್ಲಿ ಇಂಡಿಯಾ ಬಿ ತಂಡವನ್ನು ಎದುರಿಸಲಿದೆ.