ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್: ಆಡುವ 11ರ ಬಳಗದಲ್ಲಿ ಇಬ್ಬರು ಹೊಸ ಮುಖಗಳಿಗೆ ಮಣೆ ಹಾಕಿದ ಪಾಕಿಸ್ತಾನ
ಪರ್ತ್: ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಆಡುವ 11ರ ಬಳಗವನ್ನು ಪ್ರಕಟಿಸಿದ್ದು ಇಬ್ಬರು ಹೊಸ ಆಟಗಾರರಿಗೆ ಆದ್ಯತೆ ನೀಡಿದೆ.
ಶಾನ್ ಮಸೂದ್ ಇದೇ ಮೊದಲ ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಪರ್ತ್ ಟೆಸ್ಟ್‌ಗೆ ತಂಡದಲ್ಲಿ ಗಮನಾರ್ಹ ಬದಲಾವಣೆ ಮಾಡಿದ್ದಾರೆ.
ಆಲ್‌ರೌಂಡರ್ ಆಮಿರ್ ಜಮಾಲ್ ಹಾಗೂ ಬಲಗೈ ವೇಗದ ಬೌಲರ್ ಖುರ‌್ರಮ್ ಶಹಝಾದ್ ಈ ಹಣಾಹಣಿಯಲ್ಲಿ ಚೊಚ್ಚಲ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಆಮಿರ್ ಜಮಾಲ್ 2022ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಪರ ಅಂತರ್‌ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದರು. 19ನೇ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಶಹಝಾದ್ ರಾಷ್ಟ್ರೀಯ ಟೆಸ್ಟ್ ತಂಡದ ಪರ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ.
ಹೊಸ ಆಟಗಾರರಲ್ಲದೆ ಇನ್ನೂ ಕೆಲವು ಆಟಗಾರರು ವರ್ಷದ ನಂತರ ಟೆಸ್ಟ್ ಕ್ರಿಕೆಟಿಗೆ ವಾಪಸಾಗಿದ್ದಾರೆ. ಫಹೀಮ್ ಅಶ್ರಫ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಅನುಭವಿ ವಿಕೆಟ್ ಕೀಪರ್ ಸರ್ಫರಾಝ್ ಅಹ್ಮದ್ ಪಾಕಿಸ್ತಾನದ ಮೊದಲ ಆಯ್ಕೆಯಾಗಿದ್ದು, ಮುಹಮ್ಮದ್ ರಿಝ್ವಾನ್ ಇನ್ನಷ್ಟು ಸಮಯ ಕಾಯಬೇಕಾಗಿದೆ.
ನಸೀಂ ಶಾ ಹಾಗೂ ಹಾರಿಸ್ ರವೂಫ್ ಅನುಪಸ್ಥಿತಿಯಲ್ಲಿ ಶಾಹೀನ್ ಅಫ್ರಿದಿ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಆಡುವ 11ರ ಬಳಗದಲ್ಲಿ ಅನುಭವಿ ಆಟಗಾರರು ಹಾಗೂ ಹೊಸ ಮುಖಗಳ ಮಿಶ್ರಣದೊಂದಿಗೆ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪರ್ಧಾತ್ಮಕ ಪ್ರದರ್ಶನ ನೀಡುವ ಗುರಿ ಇಟ್ಟುಕೊಂಡಿದ್ದಾರೆ.
ಪಾಕಿಸ್ತಾನದ ಆಡುವ 11ರ ಬಳಗ: ಇಮಾಮ್-ವುಲ್ ಹಕ್, ಅಬ್ಲುಲ್ಲಾ ಶಫೀಕ್, ಶಾನ್ ಮಸೂದ್(ನಾಯಕ), ಬಾಬರ್ ಆಝಮ್, ಸೌದ್ ಶಕೀಲ್, ಸರ್ಫರಾಝ್ ಅಹ್ಮದ್(ವಿಕೆಟ್‌ಕೀಪರ್), ಸಲ್ಮಾನ್ ಅಲಿ ಅಘಾ, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಆಮಿರ್ ಜಮಾಲ್ ಹಾಗೂ ಶಹಝಾದ್.