ಮೊದಲ ಟ್ವೆಂಟಿ-20: ಪಾಕಿಸ್ತಾನದ ವಿರುದ್ಧ ನ್ಯೂಝಿಲ್ಯಾಂಡ್ ಗೆ ಭರ್ಜರಿ ಜಯ
ಹೊಸದಿಲ್ಲಿ : ನ್ಯೂಝಿಲ್ಯಾಂಡ್ ತಂಡ ಆಕ್ಲೆಂಡ್ ನಲ್ಲಿ ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಗರಿಷ್ಠ ಮೊತ್ತದ ಮೊದಲ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 46 ರನ್ನಿಂದ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನ್ಯೂಝಿಲ್ಯಾಂಡ್ ಡ್ಯಾರಿಲ್ ಮಿಚೆಲ್(61 ರನ್, 27 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಕೇನ್ ವಿಲಿಯಮ್ಸನ್ (57 ರನ್, 42 ಎಸೆತ, 9 ಬೌಂಡರಿ)ಅರ್ಧಶತಕದ ಕೊಡುಗೆಯ ಸಹಾಯದಿಂದ 8 ವಿಕೆಟ್ ಗಳ ನಷ್ಟಕ್ಕೆ 226 ರನ್ ಗಳಿಸಿತು. ಇದರೊಂದಿಗೆ ಪಾಕಿಸ್ತಾನ ವಿರುದ್ಧದ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಗರಿಷ್ಠ ರನ್ ದಾಖಲಿಸಿತು.
ಗೆಲ್ಲಲು ಕಠಿಣ ಗುರಿ ಪಡೆದಿದ್ದ ಪಾಕಿಸ್ತಾನ ತಂಡ ಬಾಬರ್ ಆಝಮ್ ಕ್ರೀಸ್ ನಲ್ಲಿರುವ ತನಕ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಮಾಜಿ ನಾಯಕ ಬಾಬರ್ 16ನೇ ಓವರ್ನಲ್ಲಿ 57 ರನ್(35 ಎಸೆತ, 6 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದರು. ಆಗ ರನ್ ಚೇಸ್ ಕಠಿಣವಾಯಿತು. ಅಂತಿಮವಾಗಿ ಪಾಕ್ ತಂಡ 18 ಓವರ್ಗಳಲ್ಲಿ 180 ರನ್ ಗಳಿಸಿ ಆಲೌಟಾಯಿತು. ಇದೇ ಮೊದಲ ಬಾರಿ ಉಭಯ ತಂಡಗಳ ನಡುವಿನ ಟಿ-20 ಪಂದ್ಯದಲ್ಲಿ ರನ್ ಹೊಳೆ(ಒಟ್ಟು 406 ರನ್)ಹರಿಯಿತು.
ಪಾಕಿಸ್ತಾನದ ಟ್ವೆಂಟಿ-20 ನಾಯಕನಾಗಿ ಮೊದಲ ಬಾರಿ ತಂಡವನ್ನು ಮುನ್ನಡೆಸಿದ ಬೌಲರ್ ಶಾಹೀನ್ ಅಫ್ರಿದಿ ತನ್ನ ನಾಯಕತ್ವದ ಮೊದಲ ಪಂದ್ಯದಲ್ಲೇ ಸೋಲನುಭವಿಸಿದರು. ಜೂನಿನಲ್ಲಿ ನಡೆಯುವ ಟ್ವೆಂಟಿ-20 ವಿಶ್ವಕಪ್ ಗೆ ತಂಡವನ್ನು ಸಜ್ಜುಗೊಳಿಸುತ್ತಿರುವ ಶಾಹೀನ್ ಮೂರು ವಿಕೆಟ್ ಗಳನ್ನು ಪಡೆದರು. ಬ್ಯಾಟಿಂಗ್ ಸರದಿಯಲ್ಲಿ 7ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದರೂ ಶೂನ್ಯಕ್ಕೆ ಔಟಾದರು.
ಶಾಹೀನ್ ನ್ಯೂಝಿಲ್ಯಾಂಡ್ ಇನಿಂಗ್ಸ್ ನ ಎರಡನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ(0) ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ತಾನೆಸೆದ ಎರಡನೇ ಓವರ್ನಲ್ಲಿ ಫಿನ್ ಅಲೆನ್ ಗೆ(34 ರನ್)24 ರನ್ ಬಿಟ್ಟುಕೊಟ್ಟರು. ಅಲೆನ್ ಮೂರು ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು.
ಮತ್ತೆ ಬೌಲಿಂಗ್ ದಾಳಿ ಮುಂದುವರಿಸಿದ ಶಾಹೀನ್ ಅಪಾಯಕಾರಿಯಂತೆ ಕಂಡುಬಂದ ಡ್ಯಾರಿಲ್ ಮಿಚೆಲ್ ವಿಕೆಟ್ ಪಡೆದರು. ಆ ನಂತರ ಆಡಮ್ ಮಿಲ್ನೆ (10 ರನ್) ವಿಕೆಟನ್ನೂ ಕಬಳಿಸಿದರು. ಮೂರು ವಿಕೆಟ್ ಪಡೆದರೂ ದುಬಾರಿ ಬೌಲರ್(3-46) ಎನಿಸಿಕೊಂಡರು.
ಚೊಚ್ಚಲ ಪಂದ್ಯವನ್ನಾಡಿದ ಅಬ್ಬಾಸ್ ಅಫ್ರಿದಿ 34 ರನ್ ಗೆ 3 ವಿಕೆಟ್ ಪಡೆದರು. ಹಾರಿಸ್ ರವೂಫ್ 34ಕ್ಕೆ 2 ವಿಕೆಟ್ ಉರುಳಿಸಿದರು.
ರನ್ ಚೇಸ್ ವೇಳೆ ಬಾಬರ್ ಆಝಮ್(57 ರನ್) ಪಾಕಿಸ್ತಾನದ ಇನಿಂಗ್ಸ್ ಆಧರಿಸಿದರು. ಆದರೆ ಟಿಮ್ ಸೌಥಿ (4-25)ನೇತೃತ್ವದ ನ್ಯೂಝಿಲ್ಯಾಂಡ್ನ ಶಿಸ್ತುಬದ್ಧ ಬೌಲಿಂಗ್ ಹಾಗೂ ಚುರುಕಿನ ಫೀಲ್ಡಿಂಗ್ಗೆ ತತ್ತರಿಸಿದ ಪ್ರವಾಸಿಗರು 18 ಓವರ್ಗಳಲ್ಲಿ 180 ರನ್ ಗಳಿಸಿ ಸೋಲೊಪ್ಪಿಕೊಂಡರು. ಸಯಿಮ್ ಅಯ್ಯೂಬ್(27 ರನ್), ಮುಹಮ್ಮದ್ ರಿಝ್ವಾನ್(25 ರನ್), ಇಫ್ತಿಕರ್ ಅಹ್ಮದ್(24 ರನ್) ಹಾಗೂ ಆಮಿರ್ ಜಮಾಲ್(ಔಟಾಗದೆ 14) ಎರಡಂಕೆಯ ಸ್ಕೋರ್ ಗಳಿಸಿದರು.
ಕಿವೀಸ್ ಬೌಲಿಂಗ್ ನಲ್ಲಿ ಸೌಥಿ ಯಶಸ್ವಿ ಪ್ರದರ್ಶನ ನೀಡಿದರೆ ಬೆನ್ ಸೀಯರ್ಸ್(2-42) ಹಾಗೂ ಆಡಮ್ ಮಿಲ್ನೆ(2-50) ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು.
ಸೌಥಿ ಟಿ-20 ಕ್ರಿಕೆಟ್ ನಲ್ಲಿ 150 ವಿಕೆಟ್ ಗಳನ್ನು ಕಬಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ನ್ಯೂಝಿಲ್ಯಾಂಡ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಆಕ್ಲೆಂಡ್ನ ಟೀಮ್ ಹೊಟೇಲ್ನಲ್ಲಿ ಪ್ರತ್ಯೇಕವಾಗಿದ್ದಾರೆ. ಹ್ಯಾಮಿಲ್ಟನ್ನಲ್ಲಿರುವ ಮನೆಗೆ ಒಂಟಿಯಾಗಿ ಪ್ರಯಾಣಿಸಲಿದ್ದಾರೆ ಎಂದು ತಂಡವು ತಿಳಿಸಿದೆ.
ಸರಣಿಯ ಎರಡನೇ ಪಂದ್ಯವು ಹ್ಯಾಮಿಲ್ಟನ್ನಲ್ಲಿ ರವಿವಾರ ನಡೆಯಲಿದೆ.