ಸೌಹಾರ್ದ ಪಂದ್ಯ | ಭಾರತದ ಮಹಿಳೆಯರ ಫುಟ್ಬಾಲ್ ತಂಡಕ್ಕೆ ನಾಳೆ ಉಜ್ಬೇಕಿಸ್ತಾನ ಎದುರಾಳಿ

Update: 2024-05-30 16:27 GMT

ಹೊಸದಿಲ್ಲಿ: ಭಾರತೀಯ ಮಹಿಳೆಯರ ಫುಟ್ಬಾಲ್ ತಂಡ ಶುಕ್ರವಾರ ನಡೆಯಲಿರುವ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ತನಗಿಂತ ಗರಿಷ್ಠ ರ್ಯಾಂಕಿನ ಉಜ್ಬೇಕಿಸ್ತಾನದ ವಿರುದ್ಧ ಕಠಿಣ ಸವಾಲು ಎದುರಿಸಲಿದೆ.

ಫಿಫಾ ರ್ಯಾಂಕಿಂಗ್ನಲ್ಲಿ ಸದ್ಯ ಉಜ್ಬೇಕಿಸ್ತಾನ 48ನೇ ರ್ಯಾಂಕಿನಲ್ಲಿದ್ದರೆ, ಭಾರತವು 66ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಈ ಹಿಂದೆ 11 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಒಮ್ಮೆ ಮಾತ್ರ ಜಯಶಾಲಿಯಾಗಿದೆ. 2003ರ ಎಎಫ್ಸಿ ಏಶ್ಯ ಕಪ್ನಲ್ಲಿ ಭಾರತವು 6-0 ಅಂತರದಿಂದ ಜಯ ಸಾಧಿಸಿತ್ತು.

ಕಳೆದ ವರ್ಷದ ನವೆಂಬರ್ನಲ್ಲಿ ನಡೆದಿರುವ ಎಎಫ್ಸಿ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ಎರಡನೇ ಸುತ್ತಿನಲ್ಲಿ ಭಾರತ ತಂಡ 0-3 ಅಂತರದಿಂದ ಸೋತಿತ್ತು.

ಭಾರತದ ಮುಖ್ಯ ಕೋಚ್ ಲಾಂಗಮ್ ಚವೊಬಾ ದೇವಿ ತನ್ನ ತಂಡದ ಅವಕಾಶದ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ತನ್ನ ಆಟಗಾರ್ತಿಯರು ಪ್ರಬಲ ಹೋರಾಟ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮಗೆ ಹೋಲಿಸಿದರೆ ಉಜ್ಬೇಕಿಸ್ತಾನ ಗರಿಷ್ಠ ರ್ಯಾಂಕಿನ ತಂಡ ಎಂದು ನಮಗೆಲ್ಲರಿಗೂ ಗೊತ್ತಿದೆ. ತವರು ಮೈದಾನದಲ್ಲಿ ಅವರನ್ನು ಎದುರಿಸುವ ಸಾಮರ್ಥ್ಯ ನಮ್ಮ ಹುಡುಗಿಯರಿಗೆ ಇದೆ. ನಾವು ಈಗಾಗಲೇ ಒಲಿಂಪಿಕ್ಸ್ ಕ್ವಾಲಿಫೈಯಿಂಗ್ ಆಡಿದ್ದೇವೆ. ಆದರೆ ದುರದೃಷ್ಟವಶಾತ್ ಆ ಪಂದ್ಯವನ್ನು ಸೋತಿದ್ದೇವೆ. ಹೈದರಾಬಾದ್ನಲ್ಲಿ ಎರಡು ವಾರಗಳ ಶಿಬಿರದಲ್ಲಿ ನಮ್ಮ ಆಟಗಾರ್ತಿಯರು ಕಠಿಣ ಪರಿಶ್ರಮ ಹಾಗೂ ಪ್ರಯತ್ನಗಳನ್ನು ನೋಡಿದ ನಂತರ ನಾಳೆಯ ಪಂದ್ಯದಲ್ಲಿ ನಮ್ಮ ತಂಡ ಸುಲಭದಲ್ಲಿ ಶರಣಾಗದು ಎಂದು ಕೋಚ್ ಚವೊಬಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News