ಪಾಕ್ ಸೋಲಿಗೆ ಕಳಪೆ ಅಂಪೈರಿಂಗ್ ಕಾರಣ ಎಂದ ಹರ್ಭಜನ್ ಸಿಂಗ್
ಹೊಸದಿಲ್ಲಿ: ಶುಕ್ರವಾರ ದಕ್ಷಿಣ ಆಫ್ರಿಕಾ ತಂಡದೆದುರು ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಒಂದು ವಿಕೆಟ್ ನ ಆಘಾತಕಾರಿ ಸೋಲನುಭವಿಸಿದೆ. ಆದರೆ, ಐಡೆನ್ ಮಾರ್ಕ್ರಮ್ ಅವರ 91 ರನ್ ಹಾಗೂ ಕೇಶವ್ ಮಹಾರಾಜ್ ಹೊಡೆದ ಬೌಂಡರಿ ಗೆಲುವು ಸಾಧಿಸಲು ಹರಿಣಗಳಿಗೆ ನೆರವು ನೀಡಿದವು. ಈ ರೋಮಾಂಚಕ ಹಣಾಹಣಿಯೊಂದಿಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಎಂಟು ರನ್ ಗಳ ಅಗತ್ಯವಿದ್ದಾಗ ತಬ್ರೈಝ್ ಶಂಸಿ ವಿರುದ್ಧ ಬೌಲರ್ ಹಾರಿಸ್ ರೌಫ್ ಮಾಡಿದ ಎಲ್‍ಬಿಡಬ್ಲ್ಯೂ ಮನವಿಯನ್ನು ಅಂಪೈರ್ ನಿರಾಕರಿಸಿದ್ದು ಹೆಚ್ಚು ಗಮನ ಸೆಳೆಯಿತು. ಈ ಘಟನೆಯು 46ನೇ ಓವರ್ ನ ಕೊನೆಯ ಬಾಲ್ ನಲ್ಲಿ ನಡೆಯಿತು.
ಇದರ ಬೆನ್ನಿಗೇ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಪಂದ್ಯದ ಅಂಪೈರಿಂಗ್ ಅನ್ನು ಟೀಕಿಸಿದ್ದು, ಕಳಪೆ ಅಂಪೈರಿಂಗ್ ನಿಂದಾಗಿ ಪಾಕಿಸ್ತಾನ ಪರಾಭವಗೊಂಡಿತು ಎಂದು ಹೇಳಿದ್ದಾರೆ.
“ಕೆಟ್ಟ ಅಂಪೈರಿಂಗ್ ಹಾಗೂ ಕೆಟ್ಟ ನಿಯಮಗಳು ಪಂದ್ಯವನ್ನು ಪಾಕಿಸ್ತಾನದಿಂದ ಕಿತ್ತುಕೊಂಡವು. @ICC ನಿಯಮಗಳನ್ನು ಬದಲಿಸಲೇಬೇಕು. ಬಾಲ್ ಸ್ಟಂಪ್ ಗೆ ಅಪ್ಪಳಿಸುತ್ತಿದ್ದರೆ ಅಂಪೈರ್ ಔಟ್ ಎಂದು ತೀರ್ಪು ನೀಡಲಿ ಅಥವಾ ನೀಡದಿರಲಿ ಅದು ಔಟೇ ಆಗಿರುತ್ತದೆ. ಇಲ್ಲವಾದರೆ, ತಂತ್ರಜ್ಞಾನ ಬಳಕೆಯಿಂದ ಏನು ಪ್ರಯೋಜನ?” ಎಂದು ಅವರು ಹೇಳಿದ್ದಾರೆ.
ಆದರೆ, ಹರ್ಭಜನ್ ಪೋಸ್ಟ್ ಗೆ ತಿರುಗೇಟು ನೀಡಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್, ದಕ್ಷಿಣ ಆಫ್ರಿಕಾ ತಂಡದ ರಾಸಿ ವ್ಯಾನ್ ಡರ್ ಡುಸೆನ್ ಎಲ್‍ಬಿಡಬ್ಲ್ಯೂ ಆಗಿ ಔಟಾದ ನಿದರ್ಶನವನ್ನು ನೀಡಿದ್ದಾರೆ.
“ಭಜ್ಜಿ, @harbhajan_singh, ನೀವು ಅಂಪೈರ್ ಗಳ ಕುರಿತು ಏನು ಹೇಳಿದ್ದೀರೊ ಅದೇ ನನಗೂ ಅನಿಸುತ್ತಿದೆ. ಆದರೆ, @Rassie72 ಹಾಗೂ ದಕ್ಷಿಣ ಆಫ್ರಿಕಾ ತಂಡ ಕೂಡಾ ಇದೇ ಭಾವನೆಯನ್ನು ಹೊಂದಬಹುದೆ?” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
19ನೇ ಓವರ್ ಸಂದರ್ಭದಲ್ಲಿ ಉಸಾಮ ಮಿರ್ ಎಸೆದ ಬಾಲ್, ರಾಸ್ಸಿ ವಾನ್ ಡರ್ ಡುಸ್ಸೆನ್ ಅವರ ಪ್ಯಾಡ್ ಗೆ ಅಪ್ಪಳಿಸಿದಾಗ ಅಂಪೈರ್ ಅವರು ಎಲ್‍ಬಿಡಬ್ಲ್ಯೂ ಆಗಿದ್ದಾರೆ ಎಂದು ತೀರ್ಪು ನೀಡಿದ್ದರು. ಹರಿಣಗಳು ಡಿಆರ್‍ಎಸ್ ನೆರವು ಪಡೆದರಾದರೂ ಆ ತೀರ್ಪೂ ಕೂಡಾ ಅಂಪೈರ್ ತೀರ್ಪಿನಂತೆಯೇ ಬಂದಿತ್ತು ಹಾಗೂ ರಾಸಿ ಕ್ರೀಸ್ ನಿಂದ ಪೆವಿಲಿಯನ್ ನತ್ತ ನಡೆದಿದ್ದರು.
ರಾಸಿ ವ್ಯಾನ್ ಡರ್ ಡುಸೆನ್ ಕೂಡಾ ಔಟಾಗಿರಲಿಲ್ಲ ಎಂದು ಹರ್ಭಜನ್ ಸಿಂಗ್ ಮತ್ತೊಂದು ಪೋಸ್ಟ್ ನಲ್ಲಿ ಪ್ರತಿಪಾದಿಸಿದ್ದಾರೆ. “ನನ್ನ ಪ್ರಕಾರ, ಅವರು ಔಟಾಗಿರಲಿಲ್ಲ. ಆದರೆ, ಅಲ್ಲಿದ್ದ ತಂತ್ರಜ್ಞಾನವು ಅಂಪೈರ್ ತೀರ್ಪು ನೀಡಿದ್ದಾರೆ ಎಂದು ತಾನೂ ಔಟ್ ಎಂದು ತೀರ್ಪು ನೀಡಿತು. ಆ ತಂತ್ರಜ್ಞಾನವು ಅಂಪೈರ್ ಅನ್ನು ರಕ್ಷಿಸಿತೇ ಹೊರತು ಆಟಗಾರನನ್ನಲ್ಲ. ಇಲ್ಲವಾಗಿದ್ದರೆ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭವಾಗಿ ಪಂದ್ಯವನ್ನು ಗೆದ್ದು ಕೊಡುತ್ತಿದ್ದರು” ಎಂದೂ ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ದಕ್ಷಿಣ ಆಫ್ರಿಕಾ, ಈವರೆಗಿನ ಆರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ 10 ಅಂಕಗಳನ್ನು ಸಂಪಾದಿಸಿದೆ.