ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ?

Update: 2024-07-10 15:37 GMT

ಹಾರ್ದಿಕ್ ಪಾಂಡ್ಯ , ಕೆ.ಎಲ್.ರಾಹುಲ್ |  PC : PTI 

ಹೊಸದಿಲ್ಲಿ: ಐಸಿಟಿ ಟಿ20 ವಿಶ್ವಕಪ್ ಅಭಿಯಾನದಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ನಾಯಕತ್ವ ವಹಿಸಿದ ನಂತರ ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದು, ಭಾರತೀಯ ತಂಡದ ಚುಟುಕು ಮಾದರಿಯ ಕ್ರಿಕೆಟ್ ನಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವವಹಿಸಿಕೊಳ್ಳುವ ಸಾಧ್ಯತೆಯಿದೆ. ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಕೆ.ಎಲ್.ರಾಹುಲ್ ನಾಯಕತ್ವದ ಹೊಣೆಗಾರಿಕೆಯನ್ನು ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೋಹಿತ್ ಅವರ ನಾಯಕತ್ವದ ಅವಧಿಯು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ನಾಯಕತ್ವದ ಹೊಸ ಯುಗದತ್ತ ಹೊರಳುತ್ತಿರುವ ಭಾರತೀಯ ತಂಡದಲ್ಲಿ ಈ ರೀತಿಯ ನಿರ್ಧಾರ ಹೊರಬರುತ್ತಿದೆ. ಮುಂದಿನ ತಲೆಮಾರಿನ ಆಟಗಾರರಿಗೆ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಇಂತಹ ಹೆಜ್ಜೆ ನಿರೀಕ್ಷಿತವಾಗಿದೆ.

ರೋಹಿತ್ ಶರ್ಮಾ ತನ್ನ ನಿವೃತ್ತಿ ನಿರ್ಧಾರ ಪ್ರಕಟಿಸಿರುವ ಕಾರಣ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್ ನಲ್ಲಿ ಭಾರತೀಯ ತಂಡವನ್ನು ನಾಯಕನಾಗಿ ಮುನ್ನಡೆಸಲು ಸಂಪೂರ್ಣ ಸಜ್ಜಾಗಿದ್ದಾರೆ. ಮುಂಬರುವ ಶ್ರೀಲಂಕಾದ ವಿರುದ್ಧ ಸರಣಿಗೆ ಹಾರ್ದಿಕ್ ವಿಶ್ರಾಂತಿ ಪಡೆಯುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ಮೂಲಗಳು ಎಎನ್ಐಗೆ ತಿಳಿಸಿವೆ.

ಟಿ-20 ವಿಶ್ವಕಪ್ ನಲ್ಲಿ ತನ್ನ ಆಲ್ರೌಂಡ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ ಪಾಂಡ್ಯ 6 ಇನಿಂಗ್ಸ್ ಗಳಲ್ಲಿ 151.57ರ ಸ್ಟ್ರೈಕ್ರೇಟ್ ನಲ್ಲಿ 48ರ ಸರಾಸರಿಯಲ್ಲಿ ಒಟ್ಟು 144 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ 8 ಪಂದ್ಯಗಳಲ್ಲಿ ಒಟ್ಟು 11 ವಿಕೆಟ್ ಗಳನ್ನು ಕಬಳಿಸಿದ್ದು 20 ರನ್ ಗೆ 3 ವಿಕೆಟ್ ಶ್ರೇಷ್ಠ ಬೌಲಿಂಗ್ ಆಗಿದೆ. 

ಪಾಂಡ್ಯ 2024ರ ಐಪಿಎಲ್ ಋತುವಿನಲ್ಲಿ ಕಠಿಣ ಸವಾಲು ಎದುರಿಸಿದ್ದರು. ಲೆಜೆಂಡರಿ ರೋಹಿತ್ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡ ನಂತರ ಪಾಂಡ್ಯ ದೇಶಾದ್ಯಂತ ಕ್ರೀಡಾಂಗಣಗಳಲ್ಲಿ ಅಭಿಮಾನಿಗಳಿಂದ ಅಪಹಾಸ್ಯಕ್ಕೆ ಒಳಗಾಗಿದ್ದರು.

50 ಓವರ್ ವಿಶ್ವಕಪ್ ವೇಳೆ ಕಾಣಿಸಿಕೊಂಡ ಕಾಲುನೋವಿನಿಂದ ಚೇತರಿಸಿಕೊಂಡು ಐಪಿಎಲ್ನಲ್ಲಿ ಪುನರಾಗಮನ ಮಾಡಿದ್ದ ಪಾಂಡ್ಯ ಆನ್ಲೈನ್ನಲ್ಲಿ ಅಭಿಮಾನಿಗಳಿಂದ ಟ್ರೋಲ್ಗೆ ಒಳಗಾಗಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನ ಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಕೆ.ಎಲ್.ರಾಹುಲ್ರನ್ನು ಟಿ20 ವಿಶ್ವಕಪ್ನಲ್ಲಿ ಭಾರತೀಯ ತಂಡದಿಂದ ಹೊರಗಿಟ್ಟು ಎಲ್ಲರನ್ನು ಅಚ್ಚರಿಗೊಳಿಸಲಾಗಿತ್ತು. ರಾಹುಲ್ 9 ಇನಿಂಗ್ಸ್ಗಳಲ್ಲಿ 77.20ರ ಸರಾಸರಿಯಲ್ಲಿ ಒಟ್ಟು 386 ರನ್ ಗಳಿಸಿದ್ದರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರಾಹುಲ್ ಪಂದ್ಯಾವಳಿಯುದ್ದಕ್ಕೂ ನಿರಂತರವಾಗಿ ಭಾರತದ ಇನಿಂಗ್ಸ್ನ್ನು ಆಧರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News