ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಹಾರ್ದಿಕ್ ಪಾಂಡ್ಯ

Update: 2024-03-25 16:41 GMT

Image Source: Twitter

ಬೆಂಗಳೂರು: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅವರ ಕೆಲವು ನಿರ್ಧಾರಗಳು ಟೀಕೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ನಾಯಕನಾಗಿ ಪಾಂಡ್ಯರನ್ನು ಒಪ್ಪಲು ಸಿದ್ಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ರವಿವಾರ ರಾತ್ರಿ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೇರಿದ್ದ ಸುಮಾರು 1 ಲಕ್ಷ ಪ್ರೇಕ್ಷಕರ ಗ್ಯಾಲರಿಗಳಿಂದ ಹಾರ್ದಿಕ್ ರನ್ನು ಅಭಿಮಾನಿಗಳು ಗೇಲಿ ಮಾಡಿದರು. ಭಾರತದ ಆಟಗಾರನೊಬ್ಬ ಇಷ್ಟೊಂದು ಗೇಲಿಗೆ ಒಳಗಾಗಿದ್ದನ್ನು ತಾನು ಇದೇ ಮೊದಲ ಬಾರಿ ನೋಡಿದ್ದಾಗಿ ಇಂಗ್ಲೆಂಡ್ ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಮೊದಲಿಗೆ ಬೌಲಿಂಗ್ ಮಾಡುವ ಪಾಂಡ್ಯ ನಿರ್ಧಾರದ ಕುರಿತು ಪೀಟರ್ಸನ್ ಶಂಕೆ ವ್ಯಕ್ತಪಡಿಸಿದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿ ಆರಂಭಿಸದೇ ಇರುವುದನ್ನು ಪ್ರಶ್ನಿಸಿದರು.

ಟಾಸ್ ವೇಳೆ ನಿರೂಪಕ ರವಿ ಶಾಸ್ತ್ರಿ ಅವರಿಗೆ ತಂಡದ ಆಡುವ 11ರ ಬಳಗದ ಕೇಳಿದ ಪ್ರಶ್ನೆಗೆ ಆಟಗಾರರ ಹೆಸರನ್ನು ಹೇಳದೆ ನಾಲ್ವರು ವೇಗಿಗಳು, ಮೂವರು ಸ್ಪಿನ್ನರ್ಗಳು ಹಾಗೂ ಎಲ್ಲ ವಿಭಾಗಗಳನ್ನು ನಿಭಾಯಿಸುವ 7 ಬ್ಯಾಟರ್ಗಳಿದ್ದಾರೆ ಎಂದು ಪಾಂಡ್ಯ ಹೇಳಿದ್ದರು.

ಹಾರ್ದಿಕ್ ನಮಗೆ ಹೆಸರನ್ನು ಹೇಳಬೇಕೆಂದು ನಿರೀಕ್ಷಿಸುವುದಿಲ್ಲ. ನಾಲ್ವರು ವೇಗಿಗಳು, ಮೂವರು ಸ್ಪಿನ್ನರ್ಗಳು, ಐದು ಬ್ಯಾಟರ್ಗಳು, 11 ಫೀಲ್ಡರ್ಗಳು ಇವೆಲ್ಲವೂ ನಮಗೆ ಗೊತ್ತಿದೆ. ಅವರೆಲ್ಲ ಯಾರು ಎಂದು ಭಾರತದ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಪ್ರಶ್ನಿಸಿದರು.

ಈ ಪಂದ್ಯವನ್ನು ಮುಂಬೈ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿತ್ತು. ಉಭಯ ತಂಡಗಳ ಅಭಿಮಾನಿಗಳಿಂದಲೂ ಹಾರ್ದಿಕ್ ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಆಕ್ರೋಶದ ಮಹಾಪೂರವೇ ಉಕ್ಕುತ್ತಿದೆ. ಸೋತಿದ್ದಕ್ಕೆ ಹಾರ್ದಿಕ್ ಹಾಗೂ ತಿಲಕ್ ವರ್ಮಾ ಅವರ ಆಟದ ವೈಖರಿಯೇ ಕಾರಣ ಎಂದು ಟೀಕಿಸಲಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರೊಂದಿಗಿನ ಹಾರ್ದಿಕ್ ಅವರ ನಡವಳಿಕೆ ಟೀಕೆಗೆ ಒಳಗಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕರೂ ಆಗಿರುವ ರೋಹಿತ್ ಅವರನ್ನು ಲಾಂಗ್ ಆನ್ನಲ್ಲಿ ಫೀಲ್ಡಿಂಗ್ಗೆ ಕಳುಹಿಸಿದ್ದು ಪದೇ ಪದೇ ಅವರ ಪೊಸಿಶನ್ ಬದಲಾವಣೆ ಮಾಡಿದ್ದು ಟೀಕೆಗೆ ಒಳಗಾಗಿದೆ. ರೋಹಿತ್ ಹೆಚ್ಚಾಗಿ 30 ಯಾರ್ಡ್ ವೃತ್ತದೊಳಗೆ ಫೀಲ್ಡಿಂಗ್ ಮಾಡುವುಡು ರೂಢಿ. ಅವರನ್ನು ದಿಢೀರ್ ಆಗಿ ಲಾಂಗ್ ಆನ್ ಗೆ ಹೋಗು ಎಂದು ಹಾರ್ದಿಕ್ ಹೇಳಿದ ರೀತಿಯಿಂದ ಸ್ವತಃ ರೋಹಿತ್ ಶರ್ಮಾ ಅಚ್ಚರಿಗೊಂಡಿದ್ದರು. ಆದರೆ ರೋಹಿತ್ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಫೀಲ್ಡಿಂಗ್ ಮಾಡಿದ್ದರು.

ಗುಜರಾತ್ ಬ್ಯಾಟರ್ ಶುಭಮನ್ ಗಿಲ್ ಅವರ ಕ್ಯಾಚ್ ಕೂಡ ಪಡೆದರು. ನಂತರ ಬ್ಯಾಟಿಂಗ್ನಲ್ಲಿಯೂ ಮಿಂಚಿದ ರೋಹಿತ್ ಅವರಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಅವರ ಪರವಾಗಿ ಘೋಷಣೆ ಕೂಗಿದರು.

ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಪರವಾಗಿ ದೊಡ್ಡ ಮಟ್ಟದ ಪ್ರಚಾರ ಶುರುವಾಗಿದೆ. ಹಾರ್ದಿಕ್ ಅವರ ನಡೆ ಅಹಂಕಾರದ್ದು ಎಂದು ಟೀಕಿಸಲಾಗುತ್ತಿದೆ.

ಹಾರ್ದಿಕ್ ಕಳೆದ ಎರಡು ವರ್ಷ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದರು. ಅವರ ಮುಂದಾಳತ್ವದಲ್ಲಿ ಗುಜರಾತ್ ಒಂದು ಬಾರಿ ಚಾಂಪಿಯನ್ ಹಾಗೂ ಮತ್ತೊಂದು ಬಾರಿ ರನ್ನರ್ಸ್ ಅಪ್ ಆಗಿತ್ತು. ಈ ವರ್ಷ ಅವರು ಮುಂಬೈಗೆ ಜಿಗಿದಿದ್ದರು. ಭವಿಷ್ಯದ ನಾಯಕತ್ವ ರೂಪಿಸುವ ಭಾಗವಾಗಿ ಹಾರ್ದಿಕ್ ಅವರನ್ನು ನಾಯಕರನ್ನಾಗಿ ಮಾಡಿ ರೋಹಿತ್ ಅವರನ್ನು ಆಟಗಾರನಾಗಿ ಮುಂದುವರಿಸಿತು. ಮೂಲತಃ ಗುಜರಾತ್ ನವರೇ ಆದ ಹಾರ್ದಿಕ್ ತವರಿನ ತಂಡ ತೊರೆದಿರುವುದು ಕೂಡ ಅಭಿಮಾನಿಗಳ ವಲಯದಲ್ಲಿ ಬೇಸರಕ್ಕೆ ಕಾರಣವಾಗಿತ್ತು.

ಹಾರ್ದಿಕ್ ಗುಜರಾತ್ ತಂಡಕ್ಕೆ ಹೋಗುವ ಮೊದಲು ರೋಹಿತ್ ನಾಯಕತ್ವದಲ್ಲಿ ಮುಂಬೈ ತಂಡದಲ್ಲಿ ಆಡಿದ್ದರು.



Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News