ಏಕೈಕ ಟೆಸ್ಟ್: ಭಾರತ ವಿರುದ್ಧ ಅಲ್ಪ ಮುನ್ನಡೆಯಲ್ಲಿ ಆಸ್ಟ್ರೇಲಿಯ
ಮುಂಬೈ: ನಾಯಕಿ ಹರ್ಮನ್ಪ್ರೀತ್ ಕೌರ್ ಎರಡು ನಿರ್ಣಾಯಕ ವಿಕೆಟ್ಗಳನ್ನು ಕಬಳಿಸುವ ಮೂಲಕ ಏಕೈಕ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡಕ್ಕೆ ಭಾರತವು ಶಾಕ್ ನೀಡಿದೆ. ಆಸ್ಟ್ರೇಲಿಯವು ಸದ್ಯ 46 ರನ್ ಅಲ್ಪ ಮುನ್ನಡೆಯಲ್ಲಿದೆ.
ತಾಹ್ಲಿಯಾ ಮೆಕ್ಗ್ರಾತ್ ಹಾಗೂ ನಾಯಕಿ ಅಲಿಸಾ ಹೀಲಿ ವಿಕೆಟ್ಗಳನ್ನು ಕಬಳಿಸಿದ ಕೌರ್(2-23)ಭಾರತದ ರಕ್ಷಣೆಗೆ ಧಾವಿಸಿದರು. ಪ್ರವಾಸಿ ಆಸೀಸ್ ತಂಡ ಶನಿವಾರ ದಿನದಾಟದಂತ್ಯಕ್ಕೆ 90 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 233 ರನ್ ಗಳಿಸಿದೆ.
ಟೆಸ್ಟ್ ಪಂದ್ಯದಲ್ಲಿ ಸತತ ಎರಡನೇ ಅರ್ಧಶತಕವನ್ನು ಸಿಡಿಸಿದ್ದ ಮೆಕ್ಗ್ರಾತ್(73 ರನ್, 177 ಎಸೆತ, 10 ಬೌಂಡರಿ)ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಕೌರ್ ಮುಂದಿನ ಓವರ್ನಲ್ಲಿ ಅಪಾಯಕಾರಿ ಆಟಗಾರ್ತಿ ಹೀಲಿ(32 ರನ್, 101 ಎಸೆತ, 1 ಬೌಂಡರಿ)ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟರು.
ದಿನದಾಟದಂತ್ಯಕ್ಕೆ ಅನಾಬೆಲ್ ಸದರ್ಲ್ಯಾಂಡ್(12 ರನ್)ಹಾಗೂ ಅಶ್ಲೆ ಗಾರ್ಡನರ್(7 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.
187 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಕ್ಕೆ ಬೆಥ್ ಮೂನಿ(33 ರನ್) ಹಾಗೂ ಲಿಚ್ಫೀಲ್ಡ್(18 ರನ್)ಮೊದಲ ವಿಕೆಟ್ಗೆ 49 ರನ್ ಜೊತೆಯಾಟ ನಡೆಸಿ ಸಾಧಾರಣ ಆರಂಭ ಒದಗಿಸಿದರು. ರಿಚಾ ಘೋಷ್ ಅವರು ಆಸೀಸ್ ಆಟಗಾರ್ತಿ ಮೂನಿ(33 ರನ್, 37 ಎಸೆತ, 7 ಬೌಂಡರಿ)ಅವರನ್ನು ರನೌಟ್ ಮಾಡಿ ಮೊದಲ ವಿಕೆಟ್ ಜೊತೆಯಾಟ ಮುರಿದರು.
ಲಿಚ್ಫೀಲ್ಡ್(18 ರನ್)ಅವರು ಸ್ನೇಹ್ ರಾಣಾ(2-54) ಬೌಲಿಂಗ್ನಲ್ಲಿ ರಿವರ್ಸ್ ಸ್ವೀಪ್ಗೆ ಯತ್ನಿಸಿ ಕ್ಲೀನ್ ಬೌಲ್ಡ್ ಆದರು. ಆಸ್ಟ್ರೇಲಿಯದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಎರಡನೇ ಅವಧಿಯಲ್ಲಿ 91 ಎಸೆತಗಳಲ್ಲಿ 5 ಬೌಂಡರಿ ಸಹಿತ 45 ರನ್ ಗಳಿಸಿದ್ದಲ್ಲದೆ ಮೆಕ್ಗ್ರಾತ್ರೊಂದಿಗೆ ಮೂರನೇ ವಿಕೆಟ್ಗೆ 84 ರನ್ ಜೊತೆಯಾಟದಲ್ಲಿ ಭಾಗಿಯಾ ತಂಡವನ್ನು ಆಧರಿಸಿದರು.
ಸ್ನೇಹ್ ರಾಣಾ ಬೌಲಿಂಗ್ನಲ್ಲಿ ಭಾರತದ ವಿಕೆಟ್ಕೀಪರ್ ಯಸ್ತಿಕಾ ಭಾಟಿಯಾ ಅವರು ಪೆರ್ರಿ ಅವರನ್ನು ಔಟ್ ಮಾಡಿದರು.
ಅರ್ಧಶತಕದ ಹಾದಿಯಲ್ಲಿ ಎರಡು ಬಾರಿ ಜೀವದಾನ ಪಡೆದಿದ್ದ ಮೆಕ್ಗ್ರಾತ್ಗೆ ನಾಯಕ ಕೌರ್ ಕೊನೆಗೂ ಪೆವಿಲಿಯನ್ ಹಾದಿ ತೋರಿಸಿದರು.
ಭಾರತ 406 ರನ್ಗೆ ಆಲೌಟ್:
ಇದಕ್ಕೂ ಮೊದಲು 7 ವಿಕೆಟ್ಗಳ ನಷ್ಟಕ್ಕೆ 376 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತವು ನಿನ್ನೆಯ ಸ್ಕೋರ್ಗೆ 30 ರನ್ ಸೇರಿಸುವಷ್ಟರಲ್ಲಿ ಕೊನೆಯ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಮೊದಲ ಇನಿಂಗ್ಸ್ನಲ್ಲಿ 406 ರನ್ ಗಳಿಸಿ ಆಲೌಟಾದ ಭಾರತವು ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಸಾಧನೆ ಮಾಡಿತು.
33 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಪೂಜಾ ವಸ್ತ್ರಾಕರ್(47 ರನ್) ಹಾಗೂ ರೇಣುಕಾ ಸಿಂಗ್(8) ಅವರು ಸದರ್ಲ್ಯಾಂಡ್ಗೆ(2-41)ವಿಕೆಟ್ ಒಪ್ಪಿಸಿದರು. ಕಿಮ್ ಗಾರ್ತ್ ಅವರು ದೀಪ್ತಿ ಶರ್ಮಾ(78 ರನ್)ವಿಕೆಟನ್ನು ಪಡೆದರು.
ದೀಪ್ತಿ ಹಾಗೂ ಪೂಜಾ 8ನೇ ವಿಕೆಟ್ನಲ್ಲಿ 122 ರನ್ ಜೊತೆಯಾಟ ನಡೆಸಿದರು. ಈ ಮೂಲಕ ಭಾರತವು ಟೆಸ್ಟ್ನಲ್ಲಿ ಗರಿಷ್ಠ ಜೊತೆಯಾಟ ನಡೆಸಿತು. ಈ ಸಾಧನೆ ಮಾಡಿದ ವಿಶ್ವದ 2ನೇ ತಂಡ ಎನಿಸಿಕೊಂಡಿತು.
ದೀಪ್ತಿ 171 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 78 ರನ್ ಗಳಿಸಿ ಭಾರತದ ಅಗ್ರ ಸ್ಕೋರರ್ ಎನಿಸಿಕೊಂಡರು. ಪೂಜಾ ವಸ್ತ್ರಾಕರ್ ಮೂರು ರನ್ನಿಂದ ಚೊಚ್ಚಲ ಅರ್ಧಶತಕದಿಂದ ವಂಚಿತರಾದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 219 ರನ್
ಭಾರತ ಮೊದಲ ಇನಿಂಗ್ಸ್: 406 ರನ್ಗೆ ಆಲೌಟ್
(ದೀಪ್ತಿ ಶರ್ಮಾ 78, ಸ್ಮತಿ ಮಂಧಾನ 74, ಜೆಮಿಮಾ ರೋಡ್ರಿಗಸ್ 73, ರಿಚಾ ಘೋಷ್ 52, ಪೂಜಾ ವಸ್ತ್ರಾಕರ್ 47, ಶೆಫಾಲಿ ವರ್ಮಾ 40, ಅಶ್ಲೆ ಗಾರ್ಡನರ್ 4-100, ಸದರ್ಲ್ಯಾಂಡ್ 2-41, ಕಿಮ್ ಗಾರ್ತ್ 2-58)
ಆಸ್ಟ್ರೇಲಿಯ ಎರಡನೇ ಇನಿಂಗ್ಸ್: 233/5
(ತಾಹ್ಲಿಯಾ ಮೆಕ್ಗ್ರಾತ್ 73, ಎಲ್ಲಿಸ್ ಪೆರ್ರಿ 45, ಬೆಥ್ ಮೂನಿ 33, ಅಲಿಸಾ ಹೀಲಿ 32, ಹರ್ಮನ್ಪ್ರೀತ್ ಕೌರ್ 2-23, ಸ್ನೇಹ್ ರಾಣಾ 2-54)