ಏಕದಿನ ವಿಶ್ವಕಪ್ ನಲ್ಲಿ ಗಮನ ಸೆಳೆಯಲು ಸಜ್ಜಾಗಿರುವ ಹಿಟ್ ಮ್ಯಾನ್ ಗಳು!

Update: 2023-10-02 17:00 GMT

ಹೊಸದಿಲ್ಲಿ : ಭಾರತವು 12 ವರ್ಷಗಳ ನಂತರ ಏಕದಿನ ಕ್ರಿಕೆಟ್ ವಿಶ್ವಕಪ್ ನ್ನು ಆಯೋಜಿಸಲು ಸಜ್ಜಾಗಿದೆ. 2011ರಲ್ಲಿ ತವರಿನಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯ ವಿಶ್ವಕಪ್ ಎತ್ತಿಹಿಡಿದಿತ್ತು. 2019ರ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ಸ್ ಅಪ್ ನ್ಯೂಝಿಲ್ಯಾಂಡ್ ತಂಡಗಳು ಅ.5, ಗುರುವಾರದಂದು ಮುಖಾಮುಖಿಯಾಗುವುದರೊಂದಿಗೆ 13ನೇ ಆವೃತ್ತಿಯ ವಿಶ್ವಕಪ್ ಗೆ ಚಾಲನೆ ಸಿಗಲಿದೆ. ಕ್ರಿಕೆಟ್ ಇತಿಹಾಸದ ಅತಿ ದೊಡ್ಡ ಟೂರ್ನಮೆಂಟ್ ಆಗಿರುವ ವಿಶ್ವಕಪ್ ನಲ್ಲಿ ಎಲ್ಲ 10 ತಂಡಗಳು ಉತ್ತಮ ಪ್ರದರ್ಶನ ನೀಡಲು ತಯಾರಿ ನಡೆಸಿವೆ.

ವಿರಾಟ್ ಕೊಹ್ಲಿ(ಭಾರತ): ಭಾರತದ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ 4ನೇ ವಿಶ್ವಕಪ್ ಆಡಲು ಸಜ್ಜಾಗುತ್ತಿದ್ದಾರೆ. ತವರು ನೆಲದಲ್ಲಿ ಎರಡನೇ ಬಾರಿ ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲಿದ್ದಾರೆ. ಕೊಹ್ಲಿ ಅವರು ರನ್ ಗಳಿಸುವ ಸಾಮರ್ಥ್ಯದ ಮೂಲಕ ಪ್ರಸಿದ್ಧರಾಗಿದ್ದಾರೆ. ಈಗಿನ ಶ್ರೇಷ್ಠ ಫಾರ್ಮನ್ನು ವಿಶ್ವಕಪ್ ವೇದಿಕೆಯಲ್ಲಿ ಮುಂದುವರಿಸಲು ಅವರು ಎದುರು ನೋಡುತ್ತಿದ್ದಾರೆ. 2023ರಲ್ಲಿ ಈ ತನಕ ಕೊಹ್ಲಿ ಆಡಿರುವ 16 ಏಕದಿನ ಪಂದ್ಯಗಳಲ್ಲಿ ಒಟ್ಟು 612 ರನ್ ಗಳಿಸಿದ್ದಾರೆ. ಔಟಾಗದೆ 166 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಈ ವರ್ಷ ಸುಮಾರು 56ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಕೊಹ್ಲಿ 2019ರ ವಿಶ್ವಕಪ್ ನಲ್ಲಿ 9 ಪಂದ್ಯಗಳಲ್ಲಿ ಆಡಿದ್ದು 5 ಅರ್ಧಶತಕಗಳ ಸಹಿತ ಒಟ್ಟು 443 ರನ್ ಗಳಿಸಿದ್ದರು.

ರೋಹಿತ್ ಶರ್ಮಾ(ಭಾರತ): ಭಾರತದ ನಾಯಕ ರೋಹಿತ್ ಶರ್ಮಾ ದಶಕದಿಂದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬಾಗಿದ್ದು ಕಳಪೆ ಫಾರ್ಮ್ ಕಾರಣ 2011ರ ವಿಶ್ವಕಪ್ ನಲ್ಲಿ ಆಡಿರಲಿಲ್ಲ. 2015ರ ವಿಶ್ವಕಪ್ ಗೆ ಆಯ್ಕೆಯಾಗಿದ್ದರು. 2019ರ ಆವೃತ್ತಿಯ ವಿಶ್ವಕಪ್ ನಲ್ಲಿ ಉಪ ನಾಯಕರಾಗಿದ್ದ ರೋಹಿತ್ ಒಟ್ಟು 9 ಪಂದ್ಯಗಳಲ್ಲಿ ದಾಖಲೆಯ 5 ಶತಕಗಳ ಸಹಿತ ಒಟ್ಟು 648 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿ ಹೊರ ಹೊಮ್ಮಿದ್ದರು. ರೋಹಿತ್ ಸ್ವದೇಶದಲ್ಲಿ ವಿಶ್ವಕಪ್ ನ್ನು ಎತ್ತಿ ಹಿಡಿಯುವ ಮೂಲಕ ಎಂ.ಎಸ್. ಧೋನಿಯವರ ದಾಖಲೆಯನ್ನು ಸರಿಗಟ್ಟಲು ಸಿದ್ದತೆ ನಡೆಸುತ್ತಿದ್ದಾರೆ. ಈ ಟೂರ್ನಿಯು ರೋಹಿತ್ ಅವರ ಕೊನೆಯ ಏಕದಿನ ವಿಶ್ವಕಪ್ ಆಗುವ ಸಾಧ್ಯತೆಯೂ ಇದೆ.ರೋಹಿತ್ 2023ರಲ್ಲಿ ಈ ತನಕ 16 ಏಕದಿನ ಪಂದ್ಯಗಳಲ್ಲಿ ಒಟ್ಟು 658 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 101.

ಸ್ಟೀವನ್ ಸ್ಮಿತ್(ಆಸ್ಟ್ರೇಲಿಯ): ಆಸ್ಟ್ರೇಲಿಯದ ಪ್ರಮುಖ ಬ್ಯಾಟರ್ ಸ್ಟೀವನ್ ಸ್ಮಿತ್ ಭಾರತ ನೆಲದಲ್ಲಿ ವಿಶೇಷವಾಗಿ ಸ್ಪಿನ್ನರ್ ಗಳ ವಿರುದ್ಧ ಉತ್ತಮವಾಗಿ ಆಡಬಲ್ಲ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ತನ್ನೆಲ್ಲಾ ಅನುಭವದ ಮೂಲಕ ಆಸ್ಟ್ರೇಲಿಯ ತಂಡ ದಾಖಲೆಯ 6ನೇ ಬಾರಿ ವಿಶ್ವಕಪ್ ಜಯಿಸಲು ನೆರವಾಗಲು ಪ್ರಯತ್ನಿಸಲಿದ್ದಾರೆ. 2019ರ ವಿಶ್ವಕಪ್ ನಲ್ಲಿ 10 ಪಂದ್ಯಗಳಲ್ಲಿ 4 ಅರ್ಧಶತಕಗಳ ಸಹಿತ ಒಟ್ಟು 379 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಜೋ ರೂಟ್(ಇಂಗ್ಲೆಂಡ್): 2019ರ ವಿಶ್ವಕಪ್ ವಿಜೇತ ಆಟಗಾರ ಜೋ ರೂಟ್ ಇಂಗ್ಲೆಂಡ್ ನ ರನ್ ಯಂತ್ರವಾಗಿದ್ದಾರೆ. ತವರಿನಲ್ಲಿ ನಡೆದಿದ್ದ 2019ರ ವಿಶ್ವಕಪ್ ನಲ್ಲಿ 10 ಪಂದ್ಯಗಳಲ್ಲಿ 2 ಶತಕ ಹಾಗೂ 3 ಅರ್ಧಶತಕಗಳ ಸಹಿತ 68.62ರ ಸರಾಸರಿಯಲ್ಲಿ ಒಟ್ಟು 549 ರನ್ ಗಳಿಸಿದ್ದಾರೆ. ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಗುರಿ ಇಟ್ಟುಕೊಂಡಿರುವ ಇಂಗ್ಲೆಂಡ್ ಗೆ ರೂಟ್ ಅವರ ಅನುಭವ ಮುಖ್ಯವಾಗಿದೆ.

ಬಾಬರ್ ಆಝಂ(ಪಾಕಿಸ್ತಾನ): ವಿಶ್ವದ ನಂ.1 ಏಕದಿನ ಕ್ರಿಕೆಟ್ ಬ್ಯಾಟರ್ ಬಾಬರ್ ಆಝಂ ಏಕದಿನ ವಿಶ್ವಕಪ್ ನಲ್ಲಿ ಇದೇ ಮೊದಲ ಬಾರಿ ಪಾಕಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. 2ನೇ ಬಾರಿ ವಿಶ್ವಕಪ್ ನಲ್ಲಿ ಆಡುತ್ತಿದ್ದಾರೆ. 2019ರ ವಿಶ್ವಕಪ್ ನಲ್ಲಿ 8 ಪಂದ್ಯಗಳಲ್ಲಿ 67.71ರ ಸರಾಸರಿಯಲ್ಲಿ 1 ಶತಕ ಹಾಗೂ 3 ಅರ್ಧಶತಕಗಳ ಸಹಿತ ಒಟ್ಟು 474 ರನ್ ಗಳಿಸಿದ್ದರು.ಈ ಬಾರಿಯ ವಿಶ್ವಕಪ್ ನಲ್ಲಿ ಭಾರತದ ಬ್ಯಾಟಿಂಗ್ ಸ್ನೇಹಿ ಪಿಚ್ ನಲ್ಲಿ ಗರಿಷ್ಠ ರನ್ ಗಳಿಸುವ ವಿಶ್ವಾಸದಲ್ಲಿದ್ದಾರೆ. 2023ರಲ್ಲಿ ಈ ತನಕ 16 ಪಂದ್ಯಗಳಲ್ಲಿ ಒಟ್ಟು 745 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 151.

ಶುಭಮನ್ ಗಿಲ್(ಭಾರತ): ಕಡಿಮೆ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ಪ್ರತಿಭಾವಂತ ಬಲಗೈ ಅಗ್ರ ಸರದಿಯ ಬ್ಯಾಟರ್ ಶುಭಮನ್ ಗಿಲ್ ಎಲ್ಲ ಮಾದರಿಗಳ ಕ್ರಿಕೆಟ್ ನ ಉದಯೋನ್ಮುಖ ಬ್ಯಾಟಿಂಗ್ ಸ್ಟಾರ್ ಆಗಿದ್ದಾರೆ.

ಮುಂಬರುವ ವಿಶ್ವಕಪ್ ನಲ್ಲಿ ಹಿರಿಯ ಸಹ ಆಟಗಾರ ಹಾಗೂ ನಾಯಕ ರೋಹಿತ್ ಶರ್ಮಾ ಜೊತೆ ಭಾರತದ ಇನಿಂಗ್ಸ್ ಆರಂಭಿಸಲಿದ್ದಾರೆ. 2023ರಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಕಲೆ ಹಾಕಿದ್ದಾರೆ. 2023ರಲ್ಲಿ ಆಡಿರುವ 20 ಏಕದಿನ ಪಂದ್ಯಗಳಲ್ಲಿ70ಕ್ಕೂ ಅಧಿಕ ಸರಾಸರಿಯಲ್ಲಿ ಒಟ್ಟು 1,230 ರನ್ ಗಳಿಸಿದ್ದಾರೆ. 208 ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

ಗಿಲ್ ಮೊತ್ತ ಮೊದಲ ಬಾರಿ ಏಕದಿನ ವಿಶ್ವಕಪ್ ಟೂರ್ನಿಯನ್ನು ತನ್ನ ತಾಯ್ನಾಡಿನಲ್ಲೇ ಆಡುತ್ತಿದ್ದಾರೆ.ಆಸ್ಟ್ರೇಲಿಯ ವಿರುದ್ಧ ಶತಕ ಹಾಗೂ ಅರ್ಧಶತಕ ಗಳಿಸಿ ಸದ್ಯ ಭರ್ಜರಿ ಫಾರ್ಮ್ ನಲ್ಲಿರುವ ಗಿಲ್ ಭಾರತದ ಬ್ಯಾಟಿಂಗ್ ಬತ್ತಳಿಕೆಯಲ್ಲಿರುವ ಒಂದು ಪ್ರಮುಖ ಅಸ್ತ್ರವಾಗಿದ್ದಾರೆ. ಬಲಗೈ ಬ್ಯಾಟರ್ ಗಿಲ್ 35 ಏಕದಿನ ಇನಿಂಗ್ಸ್ ಗಳಲ್ಲಿ ಈಗಾಗಲೇ 6 ಶತಕ ಹಾಗೂ 9 ಅರ್ಧಶತಕಗಳನ್ನು ಸಿಡಿಸಿದ್ದು ಒಟ್ಟು 1,901 ರನ್ ಗಳಿಸಿದ್ದಾರೆ.

ಹೆನ್ರಿಕ್ ಕ್ಲಾಸನ್(ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ಸ್ಫೋಟಕ ಶೈಲಿಯ ಬ್ಯಾಟ್ಸ್ ಮನ್ ಹೆನ್ರಿಕ್ ಕ್ಲಾಸನ್ ಚೊಚ್ಚಲ ಏಕದಿನ ವಿಶ್ವಕಪ್ ಆಡಲು ಸಿದ್ಧತೆ ನಡೆಸುತ್ತಿದ್ದಾರೆ. ಭಾರತದ ಉತ್ತಮ ಬ್ಯಾಟಿಂಗ್ ಪಿಚ್ ಲಾಭ ಎತ್ತುವತ್ತ ಚಿತ್ತಹರಿಸಿದ್ದಾರೆ. 2023ರಲ್ಲಿ ಈ ತನಕ 11 ಏಕದಿನ ಪಂದ್ಯಗಳಲ್ಲಿ 60ರ ಸರಾಸರಿಯಲ್ಲಿ ಗರಿಷ್ಠ 174 ರನ್ ಸಹಿತ ಒಟ್ಟು 527 ರನ್ ಗಳಿಸಿದ್ದಾರೆ.

ಡೇವಿಡ್ ವಾರ್ನರ್(ಆಸ್ಟ್ರೇಲಿಯ): ಆಸ್ಟ್ರೇಲಿಯದ ಎಡಗೈ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಭಾರತದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ವಿದೇಶಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಕಳಪೆ ಫಾರ್ಮ್ ನಲ್ಲಿದ್ದರೂ ಕೂಡ ಸ್ಫೋಟಕ ಶೈಲಿಯ ಬ್ಯಾಟಿಂಗ್ ಹಾಗೂ ದೊಡ್ಡ ಮೊತ್ತ ಗಳಿಸುವ ಸಾಮರ್ಥ್ಯದ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ ಬೌಲರ್ ಗಳಿಗೆ ಭಯಹುಟ್ಟಿಸ ಬಲ್ಲ ಬ್ಯಾಟರ್ ಪೈಕಿ ಒಬ್ಬರಾಗಿದ್ದಾರೆ. ಐಪಿಎಲ್ ನಲ್ಲಿ ಆಡಿರುವ ಅಪಾರ ಅನುಭವವನ್ನು ಆಧರಿಸಿರುವ ವಾರ್ನರ್ ತಂಡಕ್ಕೆ ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆದ್ದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ. 2023ರಲ್ಲಿ ಈತನಕ 9 ಏಕದಿನ ಪಂದ್ಯಗಳಲ್ಲಿ ಗರಿಷ್ಠ 106 ರನ್ ಸಹಿತ ಒಟ್ಟು 390 ರನ್ ಗಳಿಸಿದ್ದಾರೆ. ಈ ವರ್ಷ ಈವರೆಗೆ 45 ಬೌಂಡರಿ ಹಾಗೂ 14 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.

2019ರ ಆವೃತ್ತಿಯ ವಿಶ್ವಕಪ್ ನಲ್ಲಿ 10 ಪಂದ್ಯಗಳಲ್ಲಿ ಆಡಿದ್ದ ಡೇವಿಡ್ ವಾರ್ನರ್ 71.89ರ ಸರಾಸರಿಯಲ್ಲಿ 3 ಶತಕ ಹಾಗೂ 3 ಅರ್ಧಶತಕಗಳ ಸಹಿತ ಒಟ್ಟು 647 ರನ್ ಗಳಿಸಿದ್ದರು. ರೋಹಿತ್ ನಂತರ ಟೂರ್ನಿಯಲ್ಲಿ 2ನೇ ಗರಿಷ್ಠ ರನ್ ಗಳಿಸಿದ್ದರು.

► 2019ರ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ಗಳಿಸಿದ ಟಾಪ್-5 ಬ್ಯಾಟರ್ ಗಳು

ಬಾಬರ್ ಆಝಂ (ಪಾಕಿಸ್ತಾನ): ಪಾಕಿಸ್ತಾನದ ನಾಯಕ ಬಾಬರ್ ಆಝಂ 2019ರ ವಿಶ್ವಕಪ್ ನಂತರ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ತನ್ನ ತಂಡಕ್ಕಾಗಿ ಉತ್ತಮ ಇನಿಂಗ್ಸ್ ಆಡಿದ್ದಾರೆ. ಬಾಬರ್ 2019ರ ವಿಶ್ವಕಪ್ ನಂತರ 36 ಏಕದಿನ ಪಂದ್ಯಗಳಲ್ಲಿ 66.54ರ ಸರಾಸರಿಯಲ್ಲಿ ಒಟ್ಟಿಗೆ 9 ಶತಕಗಳನ್ನು ಗಳಿಸಿದ್ದಾರೆ.

ಶಾಯ್ ಹೋಪ್ (ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ 2019ರ ವಿಶ್ವಕಪ್ ನಂತರ ತನ್ನ ತಂಡದ ಪರ ಗರಿಷ್ಠ ಶತಕ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಹೋಪ್ ಕೂಡ 9 ಶತಕಗಳನ್ನು ಗಳಿಸಿ ಬಾಬರ್ ಆಝಂ ದಾಖಲೆ ಸರಿಗಟ್ಟಿದ್ದಾರೆ. ಆದರೆ ಈ ಬಾರಿ ವಿಶ್ವಕಪ್ ನಲ್ಲಿ ವಿಂಡೀಸ್ ಆಡುತ್ತಿಲ್ಲ.

ಫಖರ್ ಝಮಾನ್ (ಪಾಕಿಸ್ತಾನ): ಪಾಕಿಸ್ತಾನದ ಆಕ್ರಮಣಕಾರಿ ಓಪನರ್ ಝಮಾನ್ ಅಗ್ರ ಸರದಿಯಲ್ಲಿ ಪಾಕಿಸ್ತಾನದ ಪ್ರಮುಖ ಬ್ಯಾಟರ್ ಆಗಿದ್ದಾರೆ. ಸೀಮಿತ ಓವರ್ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದಾರೆ. ಝಮಾನ್ 2019ರ ವಿಶ್ವಕಪ್ ನಂತರ 34 ಏಕದಿನ ಪಂದ್ಯಗಳಲ್ಲಿ 45.12ರ ಸರಾಸರಿಯಲ್ಲಿ 6 ಶತಕಗಳನ್ನು ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ (ಭಾರತ): 2019ರ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ತನ್ನ ಶಕ್ತಿಗೆ ತಕ್ಕಂತೆ ಆಡದೆ ಕಳಪೆ ಫಾರ್ಮ್ ನಲ್ಲಿದ್ದರು.2023ರ ಆರಂಭದಲ್ಲಿ ಕೊಹ್ಲಿ ತನ್ನ ಮೊದಲಿನ ಲಯ ಕಂಡುಕೊಂಡು ಏಕದಿನ ಕ್ರಿಕೆಟ್ ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ. 2019ರ ಏಕದಿನ ವಿಶ್ವಕಪ್ ನ ನಂತರ ಕೊಹ್ಲಿ 45 ಏಕದಿನ ಪಂದ್ಯಗಳಲ್ಲಿ 47.28ರ ಸರಾಸರಿಯಲ್ಲಿ 6 ಶತಕಗಳನ್ನು ಸಿಡಿಸಿದ್ದಾರೆ.

ಶುಭಮನ್ ಗಿಲ್ (ಭಾರತ): ಭಾರತೀಯ ಕ್ರಿಕೆಟ್ ನ ಉದಯೋನ್ಮುಖ ತಾರೆ ಶುಭಮನ್ ಗಿಲ್ ಏಕದಿನ ಕ್ರಿಕೆಟಿಗೆ ಕಾಲಿಟ್ಟ ನಂತರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದ ಗಿಲ್ 50 ಓವರ್ ಗಳಲ್ಲಿ ಈ ಸಾಧನೆ ಮಾಡಿದ ಕಿರಿಯ ವಯಸ್ಸಿನ ಬ್ಯಾಟರ್ ಎನಿಸಿಕೊಂಡಿದ್ದಾರೆ. 33 ಏಕದಿನ ಪಂದ್ಯಗಳಲ್ಲಿ 70.40 ಸರಾಸರಿಯಲ್ಲಿ 6 ಶತಕಗಳನ್ನು ಗಳಿಸಿದ್ದಾರೆ. ಗಿಲ್ ತನ್ನ ಚೊಚ್ಚಲ ವಿಶ್ವಕಪ್ ನಲ್ಲಿ ಅಗ್ರ ಸರದಿಯಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News