ಐಸಿಸಿ ಏಕದಿನ ರ‍್ಯಾಂಕಿಂಗ್‌: ಕುಸಿದ ಗಿಲ್, ಅಗ್ರಸ್ಥಾನಕ್ಕೆ ಮರಳಿದ ಬಾಬರ್ ಆಝಮ್

Update: 2023-12-20 17:07 GMT

ಬಾಬರ್ ಆಝಮ್ | Photo: PTI

ಹೊಸದಿಲ್ಲಿ: ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಮ್ ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ.

ಏಕದಿನ ವಿಶ್ವಕಪ್ ವೇಳೆ ಅಗ್ರಸ್ಥಾನ ಅಲಂಕರಿಸಿದ್ದ ಭಾರತದ ಯುವ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿಶ್ವಕಪ್ ಟೂರ್ನಮೆಂಟ್ ಮುಗಿದ ನಂತರ ಗಿಲ್ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ.

824 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಬಾಬರ್ ಅಗ್ರ ಸ್ಥಾನಕ್ಕೆ ಮರಳಿದ್ದಾರೆ. ಗಿಲ್ ಇದೀಗ 810 ಪಾಯಿಂಟ್ಸ್ ಪಡೆದಿದ್ದಾರೆ. ಆ ನಂತರ ಗಿಲ್ ಸಹ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿದ್ದಾರೆ.

ಶ್ರೇಯಸ್ ಅಯ್ಯರ್ 12ನೇ ಸ್ಥಾನ ಜಾರಿದರೆ, ಕೆ.ಎಲ್.ರಾಹುಲ್ 16ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಬೌಲರ್ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ ಮಹಾರಾಜ್ ಅಗ್ರಸ್ಥಾನದಲ್ಲೇ ಉಳಿದಿದ್ದು, ಆಸ್ಟ್ರೇಲಿಯದ ವೇಗಿ ಜೋಶ್ ಹೇಝಲ್ವುಡ್ ಆನಂತರದ ಸ್ಥಾನದಲ್ಲಿದ್ದಾರೆ.

ವೇಗದ ಬೌಲರ್ ಮುಹಮ್ಮದ್ ಸಿರಾಜ್(3ನೇ), ಜಸ್ಪ್ರೀತ್ ಬುಮ್ರಾ(5ನೇ) ಹಾಗೂ ಕುಲದೀಪ್ ಯಾದವ್(8ನೇ)ಅಗ್ರ-10ರಲ್ಲಿರುವ ಭಾರತದ ಇತರ ಆಟಗಾರರಾಗಿದ್ದಾರೆ.

ಮುಹಮ್ಮದ್ ಶಮಿ 11ನೇ ಸ್ಥಾನದಲ್ಲಿದ್ದಾರೆ, ಸ್ಪಿನ್ನರ್ ರವೀಂದ್ರ ಜಡೇಜ 22ನೇ ರ್ಯಾಂಕಿನಲ್ಲಿದ್ದಾರೆ.

ಆಲ್ರೌಂಡರ್ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ.

ಜಡೇಜ(12ನೇ) ಹಾಗೂ ಹಾರ್ದಿಕ್ ಪಾಂಡ್ಯ(17ನೇ)ಅಗ್ರ-20ರಲ್ಲಿರುವ ಭಾರತದ ಆಟಗಾರರಾಗಿದ್ದಾರೆ.

*ಟ್ವೆಂಟಿ-20 ರ್ಯಾಂಕಿಂಗ್: ನಂ.1 ಸ್ಥಾನ ಕಾಯ್ದುಕೊಂಡ ಸೂರ್ಯಕುಮಾರ್

ಇದೇ ವೇಳೆ ಟ್ವೆಂಟಿ-20 ರ್ಯಾಂಕಿಂಗ್ ನ ಬ್ಯಾಟಿಂಗ್ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಬೌಲರ್ ಆದಿಲ್ ರಶೀದ್ ಟಿ-20 ಬೌಲರ್ಗಳ ಪೈಕಿ ನಂ.1 ಸ್ಥಾನದಲ್ಲಿದ್ದಾರೆ. ಗ್ರೇಮ್ ಸ್ವಾನ್ ನಂತರ ಅಗ್ರ ಸ್ಥಾನಕ್ಕೇರಿದ ಇಂಗ್ಲೆಂಡ್ನ ಎರಡನೇ ಸ್ಪಿನ್ನರ್ ಆಗಿದ್ದಾರೆ.

ವೆಸ್ಟ್ಇಂಡೀಸ್ ವಿರುದ್ಧ ನಾಲ್ಕು ಟಿ-20 ಪಂದ್ಯಗಳಲ್ಲಿ ಏಳು ವಿಕೆಟ್ ಗೊಂಚಲು ಪಡೆದಿರುವ ರಶೀದ್ ಅಫ್ಘಾನಿಸ್ತಾನದ ರಶೀದ್ ಖಾನ್ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ರವಿ ಬಿಷ್ಣೋಯ್(3ನೇ ಸ್ಥಾನ)ಅಗ್ರ ರ್ಯಾಂಕಿಂಗ್ ನಲ್ಲಿರುವ ಭಾರತದ ಬೌಲರ್ ಆಗಿದ್ದಾರೆ.

ಟಿ-20 ಆಲ್ರೌಂಡರ್ಗಳ ಪಟ್ಟಿಯಲ್ಲಿ ಶಕೀಬ್ ಅಗ್ರ ಸ್ಥಾನದಲ್ಲಿದ್ದು, ಹಾರ್ದಿಕ್ ಪಾಂಡ್ಯ(4ನೇ ಸ್ಥಾನ)ಅಗ್ರ ಸ್ಥಾನದಲ್ಲಿರುವ ಭಾರತದ ಆಟಗಾರನಾಗಿದ್ದಾರೆ.

*ವಿಲಿಯಮ್ಸ್ ನಂ.1 ಟೆಸ್ಟ್ ಬ್ಯಾಟರ್

ನ್ಯೂಝಿಲ್ಯಾಂಡ್ನ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ಬ್ಯಾಟರ್ಗಳಲ್ಲಿ ನಂ.1 ಸ್ಥಾನಕ್ಕೇರುವ ಮೂಲಕ ಪ್ರಾಬಲ್ಯ ಸಾಧಿಸಿದರು.

ಇಂಗ್ಲೆಂಡ್ನ ಜೋ ರೂಟ್(2ನೇ ಸ್ಥಾನ)ಹಾಗೂ ಸ್ಟೀವನ್ ಸ್ಮಿತ್(3ನೇ ಸ್ಥಾನ) ಆ ನಂತರದ ಸ್ಥಾನದಲ್ಲಿದ್ದಾರೆ.

ಪರ್ತ್ನಲ್ಲಿ ಪಾಕಿಸ್ತಾನದ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಆಸ್ಟ್ರೇಲಿಯದ ಉಸ್ಮಾನ್ ಖ್ವಾಜಾ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ರೋಹಿತ್(10ನೇ ರ್ಯಾಂಕ್)ಗರಿಷ್ಠ ರ್ಯಾಂಕಿನಲ್ಲಿರುವ ಭಾರತೀಯ ಆಟಗಾರನಾಗಿದ್ದಾರೆ.

ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ ನಲ್ಲಿ ಭಾರತದ ಹಿರಿಯ ಆಫ್ ಸ್ಪಿನ್ನರ್ ಆರ್.ಅಶ್ವಿನ್ ನಂ.1 ಸ್ಥಾನದಲ್ಲಿದ್ದಾರೆ. ಕಾಗಿಸೊ ರಬಾಡ, ಶಕೀಬ್ ಹಾಗೂ ಜಡೇಜ ಆ ನಂತರದ ಸ್ಥಾನದಲ್ಲಿದ್ದಾರೆ.

ಆಸೀಸ್ನ ಕೆಲವು ಆಟಗಾರರು ರ್ಯಾಂಕಿಂಗ್ ನಲ್ಲಿ ಭಡ್ತಿ ಪಡೆದಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್ 3ನೇ ಸ್ಥಾನಕ್ಕೇರಿದ್ದಾರೆ. ನಾಥನ್ ಲಿಯೊನ್(5ನೇ), ಮಿಚೆಲ್ ಸ್ಟಾರ್ಕ್(8ನೇ ಸ್ಥಾನ) ಹಾಗೂ ಜೋಶ್ ಹೇಝಲ್ವುಡ್(10ನೇ ಸ್ಥಾನ)ಪಾಕಿಸ್ತಾನದ ವಿರುದ್ಧ ಟೆಸ್ಟ್ ನಲ್ಲಿ ಪಾರಮ್ಯ ಮೆರೆದ ಕಾರಣ ರ್ಯಾಂಕಿಂಗ್ ನಲ್ಲಿ ಪ್ರಗತಿ ಸಾಧಿಸಿದ್ದಾರೆ.

ಆಲ್ರೌಂಡರ್ಗಳ ಪಟ್ಟಿಯಲ್ಲಿ ಜಡೇಜ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಅಶ್ವಿನ್ 2ನೇ ಸ್ಥಾನ ಹಾಗೂ ಅಕ್ಷರ್ ಪಟೇಲ್ 5ನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News