ಒಳ್ಳೆಯ ಹಣ ಸಿಕ್ಕರೆ ನನ್ನದೇ ಬಯೋಪಿಕ್‌ನಲ್ಲಿ ನಟಿಸುತ್ತೇನೆ : ಹಾಸ್ಯಚಟಾಕಿ ಹಾರಿಸಿದ ರಾಹುಲ್ ದ್ರಾವಿಡ್

Update: 2024-08-22 16:01 GMT

ರಾಹುಲ್ ದ್ರಾವಿಡ್ | PC : X  

ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ತಾನು ಬಾಲಿವುಡ್‌ನಲ್ಲಿ ನಟಿಸುವ ಸಾಧ್ಯತೆಯ ಬಗ್ಗೆ ಹಾಸ್ಯಚಟಾಕಿಯೊಂದನ್ನು ಹಾರಿಸಿದ್ದಾರೆ. ಒಳ್ಳೆಯ ಹಣ ಸಿಗುವುದಾದರೆ ನನ್ನ ಬದುಕನ್ನು ಆಧರಿಸಿದ ಚಿತ್ರ (ಬಯೋಪಿಕ್)ದಲ್ಲಿ ನಾನೇ ನಟಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಶ್ನೋತ್ತರ ಕಾರ್ಯಕ್ರಮವೊಂದರಲ್ಲಿ ಅವರು ಈ ಹಾಸ್ಯಚಟಾಕಿಯನ್ನು ಹಾರಿಸಿದ್ದಾರೆ. ಕೋಚ್ ಆಗಿ ಅವರ ಮಾರ್ಗದರ್ಶನದ ಭಾರತೀಯ ಕ್ರಿಕೆಟ್ ತಂಡವು ಇತ್ತೀಚೆಗೆ ಐಸಿಸಿ ಟಿ20 ವಿಶ್ವಕಪ್ ಜಯಿಸಿದೆ. ಅದು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿದೆ. ಈ ಮೂಲಕ 11 ವರ್ಷಗಳ ಐಸಿಸಿ ಪ್ರಶಸ್ತಿಯೊಂದರ ಬರವನ್ನು ನೀಗಿಸಿದೆ.

ನಿಮ್ಮ ಜೀವನಚಿತ್ರ (ಬಯೋಪಿಕ್)ದಲ್ಲಿ ರಾಹುಲ್ ದ್ರಾವಿಡ್‌ರ ಪಾತ್ರವನ್ನು ಯಾರು ವಹಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, ‘‘ಒಳ್ಳೆಯ ಹಣ ಸಿಗುವುದಾದರೆ, ನಾನೇ ಆ ಪಾತ್ರವನ್ನು ನಿರ್ವಹಿಸುತ್ತೇನೆ’’ ಎಂದು ದೊಡ್ಡದಾಗಿ ಮುಗುಳುನಗುತ್ತಾ ಹೇಳಿದರು.

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿಗೆ ನಿರಂತರ ಸಿದ್ಧತೆ ಮತ್ತು ತಂತ್ರಗಾರಿಕೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.

‘‘ಪ್ರಾಮಾಣಿಕವಾಗಿ ಹೇಳುವುದಾದರೆ, ಭಿನ್ನವಾದದ್ದೇನನ್ನೂ ಮಾಡಲು ನಾನು ಬಯಸಲಿಲ್ಲ. ಏಕದಿನ ವಿಶ್ವಕಪ್‌ನಲ್ಲಿಯೂ ನಮ್ಮ ನಿರ್ವಹಣೆ ಅತ್ಯುತ್ತಮವಾಗಿತ್ತು. ನಮ್ಮಲ್ಲಿ ಮೊದಲಿದ್ದ ಶಕ್ತಿ, ಉತ್ಸಾಹ ಮತ್ತು ತಂಡ ಸ್ಫೂರ್ತಿಯನ್ನೇ ಮತ್ತೊಮ್ಮೆ ನಾವು ಸೃಷ್ಟಿಸಬೇಕು ಮತ್ತು ಕೊಂಚ ಅದೃಷ್ಟ ಇರಬೇಕು ಎನ್ನುವುದು ತಂಡದಲ್ಲಿದ್ದ ಒಮ್ಮತಾಭಿಪ್ರಾಯವಾಗಿತ್ತು’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News