ಸೆಮಿಯಲ್ಲಿ ಪಾಕ್ ಭಾರತ ಮುಖಾಮುಖಿಯಾದರೆ ಪಂದ್ಯ ಏಕಪಕ್ಷೀಯ: ಕೈಫ್

Update: 2023-11-07 16:37 GMT

Photo: twitter/MohammadKaif

ಹೊಸದಿಲ್ಲಿ : ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ, ಬಾಂಗ್ಲಾದೇಶ ಮತ್ತು ನ್ಯೂಝಿಲ್ಯಾಂಡ್ ವಿರುದ್ಧ ಪಾಕಿಸ್ತಾನ ಬೆನ್ನು ಬೆನ್ನಿಗೆ ಸಂಪಾದಿಸಿದ ವಿಜಯಗಳು ಅದರ ಸೆಮಿಫೈನಲ್ ಅವಕಾಶಗಳನ್ನು ಹೆಚ್ಚಿಸಿದೆ. ಈಗ ನಾಲ್ಕನೇ ಸೆಮಿಫೈನಲ್ ತಂಡವಾಗಲು ನ್ಯೂಝಿಲ್ಯಾಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸ್ಪರ್ಧಿಸುತ್ತಿವೆ.

1992ರ ಚಾಂಪಿಯನ್ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದರೆ, ಅದು ಭಾರತವನ್ನು ಎದುರಿಸುತ್ತದೆ. ಯಾಕೆಂದರೆ, ಈಗ ಭಾರತ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.

ಮೊದಲ ಸ್ಥಾನದಲ್ಲಿರುವ ತಂಡವು ನಾಲ್ಕನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸುತ್ತದೆ ಹಾಗೂ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳು ಇನ್ನೊಂದು ಸೆಮಿಫೈನಲ್‌ನಲ್ಲಿ ಸೆಣಸುತ್ತವೆ.

ಪಾಕಿಸ್ತಾನವು ಸೆಮಿಫೈನಲ್ ತಲುಪುವ ಅವಕಾಶವನ್ನು ಹೊಂದಿದೆ ಎಂದು ಭಾರತ ತಂಡದ ಮಾಜಿ ಬ್ಯಾಟರ್ ಮುಹಮ್ಮದ್ ಕೈಫ್ ಹೇಳುತ್ತಾರೆ. ಆದರೆ, ಭಾರತ-ಪಾಕಿಸ್ತಾನ ಪಂದ್ಯವು ಏಕಪಕ್ಷೀಯವಾಗಿರುತ್ತದೆ ಎನ್ನುವುದನ್ನು ಇತಿಹಾಸ ಹೇಳುತ್ತಿದೆ ಎನ್ನುತ್ತಾರೆ.

‘‘ಅವರು ಸೆಮಿಫೈನಲ್ ತಲುಪಬಹುದು. ಆದರೆ, ಅದು ಏಕಪಕ್ಷೀಯ ಪಂದ್ಯವಾಗಿರುತ್ತದೆ. ಇತಿಹಾಸದಲ್ಲಿ ಏನಾಗಿದೆ ಎಂದು ನಾನು ಹೇಳುತ್ತೇನೆ. ಭಾರತವು ಆ ತಂಡವನ್ನು ಸುಲಭವಾಗಿ ಸೋಲಿಸಿದೆ. ಇಂಗ್ಲೆಂಡ್ ವಿರುದ್ಧ ಅವರು ಉತ್ತಮವಾಗಿ ಆಡಬೇಕು, ಜೊತೆಗೆ ದೊಡ್ಡ ಅಂತರದಿಂದ ಗೆಲ್ಲಬೇಕು. ಹಾಗಾದರೆ ಅವರು ಸೆಮಿಫೈನಲ್ ತಲುಪಬಹುದು’’ ಎಂದು ‘ಸ್ಟಾರ್ ಸ್ಪೋರ್ಟ್ಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಪಾಕಿಸ್ತಾನವು ತನ್ನ ಕೊನೆಯ ಲೀಗ್ ಪಂದ್ಯವನ್ನು ನ. 11ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ. ಅದಕ್ಕೂ ಮೊದಲು ನ.9ರಂದು ನ್ಯೂಝಿಲ್ಯಾಂಡ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ.

ನ್ಯೂಝಿಲ್ಯಾಂಡ್ ಶ್ರೀಲಂಕಾ ವಿರುದ್ಧ ಸೋತರೆ ಮತ್ತು ಪಾಕಿಸ್ತಾನವು ಇಂಗ್ಲೆಂಡ್ ವಿರುದ್ಧ ಗೆದ್ದರೆ ಪಾಕಿಸ್ತಾನಕ್ಕೆ 10 ಅಂಕಗಳು ಲಭಿಸುತ್ತವೆ. ಅದು 8 ಅಂಕಗಳನ್ನು ಹೊಂದಿರುವ ನ್ಯೂಝಿಲ್ಯಾಂಡನ್ನು ಹಿಂದಿಕ್ಕುತ್ತದೆ. ಆದರೆ, ಪಾಕಿಸ್ತಾನ ಸೆಮಿಫೈನಲ್ ತಲುಪಲು ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ಅಫ್ಘಾನಿಸ್ತಾನವನ್ನು ಸೋಲಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News