ಭಾರತ-ಬಾಂಗ್ಲಾದೇಶ ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನ ಮಳೆಯದ್ದೇ ಆಟ

Update: 2024-09-28 14:43 GMT

PC : PTI 

ಕಾನ್ಪುರ : ನಿರಂತರ ಮಳೆಯಿಂದಾಗಿ ಶನಿವಾರ ಭಾರತ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟವು ಒಂದೂ ಎಸೆತ ಕಾಣದೆ ರದ್ದಾಗಿದೆ.

ಗ್ರೀನ್ ಪಾರ್ಕ್ ಸ್ಟೇಡಿಯಮ್‌ನಲ್ಲಿ ಬೆಳಗ್ಗೆ ಭಾರೀ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ.

ಮಳೆ ನಿಂತ ಮೇಲೆ ಮೈದಾನದ ಸಿಬ್ಬಂದಿ ಬೆಳಗ್ಗೆ 11:15ರ ಸುಮಾರಿಗೆ ಮೂರು ಸೂಪರ್ ಸೋಪರ್ಸ್ ಯಂತ್ರಗಳನ್ನು ಬಳಸಿ ನೀರನ್ನು ಹೊರ ತೆಗೆದರು. ಗೋಚರತೆಯು ತುಂಬಾ ಕಳಪೆಯಾಗಿತ್ತು.

ಪರಿಸ್ಥಿತಿ ಸುಧಾರಣೆಯಾಗದ ಕಾರಣ ಎರಡನೇ ದಿನದ ಆಟವನ್ನು ಮಧ್ಯಾಹ್ನ 2:15ರ ಸುಮಾರಿಗೆ ರದ್ದುಪಡಿಸಲಾಯಿತು.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ರವಿವಾರವೂ ನಗರದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಆದರೆ ಸೋಮವಾರ ಹಾಗೂ ಮಂಗಳವಾರ ಮಳೆ ಬಿಡುವು ನೀಡುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಪಂದ್ಯವು ಡ್ರಾನತ್ತ ಸಾಗಬಹುದು.

ಶುಕ್ರವಾರ ಮಳೆಬಾಧಿತ ಮೊದಲ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ ಕ್ರಿಕೆಟ್ ತಂಡವು 3 ವಿಕೆಟ್‌ಗಳ ನಷ್ಟಕ್ಕೆ 107 ರನ್ ಗಳಿಸಿದ್ದು, ಕೇವಲ 35 ಓವರ್‌ಗಳ ಪಂದ್ಯವನ್ನು ಆಡಲು ಸಾಧ್ಯವಾಗಿತ್ತು.

ಭಾರತದ ವೇಗದ ಬೌಲರ್ ಆಕಾಶ್ ದೀಪ್ ಬಾಂಗ್ಲಾದೇಶದ ಆರಂಭಿಕ ಆಟಗಾರರಾದ-ಝಾಕಿರ್ ಹಸನ್ ಹಾಗೂ ಶಾದ್‌ಮಾನ್ ಇಸ್ಲಾಮ್ ವಿಕೆಟ್‌ಗಳನ್ನು ಕಬಳಿಸಿದರು. ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರು ಎದುರಾಳಿ ತಂಡದ ನಾಯಕ ನಜ್ಮುಲ್ ಹುಸೈನ್ ಶಾಂಟೊರನ್ನು ಪೆವಿಲಿಯನ್‌ಗೆ ವಾಪಸ್ ಕಳುಹಿಸಿದ್ದರು.

ಚೆನ್ನೈನಲ್ಲಿ ಇತ್ತೀಚೆಗೆ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು 280 ರನ್‌ನಿಂದ ಗೆದ್ದುಕೊಂಡಿರುವ ಭಾರತವು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News