ಟಿ-20 ಕ್ರಿಕೆಟ್: ಮುಹಮ್ಮದ್ ರಿಝ್ವಾನ್ ವಿಶ್ವದಾಖಲೆ ಮುರಿದ ನಿಕೊಲಸ್ ಪೂರನ್

Update: 2024-09-28 14:50 GMT

ನಿಕೊಲಸ್ ಪೂರನ್ | PC : PTI 

ಜಮೈಕಾ : ಟಿ-20 ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ವೆಸ್ಟ್‌ಇಂಡೀಸ್ ಬ್ಯಾಟರ್ ನಿಕೊಲಸ್ ಪೂರನ್ ಅವರು ಶುಕ್ರವಾರ ಇತಿಹಾಸ ನಿರ್ಮಿಸಿದರು. ಈ ಮೂಲಕ ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್ ನಿರ್ಮಿಸಿರುವ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಎಡಗೈ ಬ್ಯಾಟರ್ ಪೂರನ್ ಈ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಸಿಪಿಎಲ್)ಟ್ರಿನ್‌ಬಾಗೊ ನೈಟ್‌ರೈಡರ್ಸ್ ಪರ ಬಾರ್ಬಡೋಸ್ ರಾಯಲ್ಸ್ ವಿರುದ್ಧ ಪಂದ್ಯದ ವೇಳೆ ಈ ಸಾಧನೆ ಮಾಡಿದ್ದಾರೆ.

ಪೂರನ್ ಸಿಪಿಎಲ್ ಲೀಗ್ ಹಾಗೂ ಟಿ-20 ಕ್ರಿಕೆಟ್‌ನಲ್ಲಿ ತನ್ನ ಉತ್ತಮ ಫಾರ್ಮ್ ಅನ್ನು ಮುಂದುವರಿಸಿದ್ದು 15 ಎಸೆತಗಳಲ್ಲಿ 27 ರನ್ ಗಳಿಸಿದ್ದು, ಇದರಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಇದ್ದವು.

ಪೂರನ್, ನಾಯಕ ಕಿರೊನ್ ಪೊಲಾರ್ಡ್(42 ರನ್, 27 ಎಸೆತ), ಕೀಸಿ ಕಾರ್ಟಿ(32 ರನ್, 34 ಎಸೆತ) ಹಾಗೂ ಆ್ಯಂಡ್ರೆ ರಸೆಲ್(31 ರನ್, 12 ಎಸೆತ)ನೆರವಿನಿಂದ ಟ್ರಿನ್‌ಬಾಗೊ ತಂಡ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು. ಬಾರ್ಬಡೋಸ್ ತಂಡವನ್ನು 9ಕ್ಕೆ 145 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.

ಪೂರನ್ ಈ ವರ್ಷ 66 ಪಂದ್ಯಗಳು ಹಾಗೂ 65 ಇನಿಂಗ್ಸ್‌ಗಳಲ್ಲಿ 2,059 ರನ್ ಗಳಿಸುವ ಮೂಲಕ ಟಿ-20 ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಕಲೆ ಹಾಕಿದ್ದಾರೆ. ಈ ವರ್ಷ 14 ಅರ್ಧಶತಕಗಳನ್ನು ಗಳಿಸಿದ್ದು, 139 ಬೌಂಡರಿ ಹಾಗೂ 152 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಸಿಪಿಎಲ್-2024ರಲ್ಲಿ 9 ಇನಿಂಗ್ಸ್‌ಗಳಲ್ಲಿ 2 ಅರ್ಧಶತಕ ಸಹಿತ ಒಟ್ಟು 312 ರನ್ ಗಳಿಸಿದ್ದಾರೆ.

ರಿಝ್ವಾನ್ 2021ರಲ್ಲಿ 48 ಟಿ-20 ಪಂದ್ಯಗಳಲ್ಲಿ ಒಂದು ಶತಕ ಹಾಗೂ 18 ಅರ್ಧಶತಕಗಳ ಸಹಿತ ಒಟ್ಟು 2,036 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.

ಪೂರನ್ ಈ ವರ್ಷ ಪ್ರಮುಖ ಟಿ-20 ಲೀಗ್‌ಗಳು ಹಾಗೂ ಸ್ಪರ್ಧಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 2024ರ ಐಪಿಎಲ್‌ನಲ್ಲಿ 3 ಅರ್ಧಶತಕ ಸಹಿತ ಒಟ್ಟು 499 ರನ್ ಗಳಿಸಿದ್ದು, 75 ಶ್ರೇಷ್ಠ ಸ್ಕೋರಾಗಿದೆ.

ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ 7 ಇನಿಂಗ್ಸ್‌ಗಳಲ್ಲಿ ಒಂದು ಅರ್ಧಶತಕ ಸಹಿತ ಒಟ್ಟು 228 ರನ್ ಗಳಿಸಿದ್ದ ಪೂರನ್ ಆರನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

ಈ ವರ್ಷ ಯುಎಇನಲ್ಲಿ ನಡೆದಿದ್ದ ಇಂಟರ್‌ನ್ಯಾಶನಲ್‌ಲೀಗ್ ಟಿ-20 ಟೂರ್ನಿಯಲ್ಲಿ ಪೂರನ್ 20 ಪಂದ್ಯಗಳಲ್ಲಿ 4 ಅರ್ಧಶತಕಗಳ ಸಹಿತ 709 ರನ್ ಗಳಿಸಿ ಎಂಐ ಎಮಿರೇಟ್ಸ್ ತಂಡವು ಪ್ರಶಸ್ತಿ ಗೆಲ್ಲಲು ನಾಯಕತ್ವವಹಿಸಿದ್ದರು.

ವೆಸ್ಟ್‌ಇಂಡೀಸ್ ಪರ ಆಡಿರುವ 13 ಟಿ-20 ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಿತ ಒಟ್ಟು 384 ರನ್ ಗಳಿಸಿದ್ದರು.

ಸಿಪಿಎಲ್-2024ರಲ್ಲಿ ಟಿ-20 ಕ್ರಿಕೆಟ್‌ನಲ್ಲಿ 135 ಸಿಕ್ಸರ್‌ಗಳನ್ನು ಸಿಡಿಸಿದ್ದ ಪೂರನ್ ಅವರು ಲೆಜೆಂಡರಿ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದರು. ಇತ್ತೀಚೆಗೆ 150 ಸಿಕ್ಸರ್ ಸಿಡಿಸಿದ್ದ ಪೂರನ್ ಈ ಸಾಧನೆ ಮಾಡಿದ್ದ ಮೊದಲಿಗನಾಗಿದ್ದಾರೆ.

ಈ ವರ್ಷ ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಇತರ ಬ್ಯಾಟರ್‌ಗಳೆಂದರೆ: ದ.ಆಫ್ರಿಕಾದ ರೀಝಾ ಹೆಂಡ್ರಿಕ್ಸ್(59 ಪಂದ್ಯಗಳು, 1,555 ರನ್), ಪಾಕಿಸ್ತಾನದ ಬಾಬರ್ ಆಝಮ್(36 ಪಂದ್ಯಗಳು, 1,480 ರನ್) ಹಾಗೂ ಟ್ರಾವಿಸ್ ಹೆಡ್(39 ಪಂದ್ಯಗಳು, 1,442 ರನ್)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News