ಇಂದು ಭಾರತ-ಪಾಕಿಸ್ತಾನ ಹಣಾಹಣಿ
ಅಹ್ಮದಾಬಾದ್: ಆತಿಥೇಯ ಭಾರತವು ಶನಿವಾರ ನಡೆಯಲಿರುವ ಬಹುನಿರೀಕ್ಷಿತ ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಟ್ರೀತ್ ಬುಮ್ರಾ ಅವರಂತಹ ಆಟಗಾರರನ್ನು ಒಳಗೊಂಡಿರುವ ಭಾರತ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.
ಎರಡೂ ದೇಶಗಳಲ್ಲಿನ ಜನರಲ್ಲಿ ಕ್ರಿಕೆಟ್ ಕ್ರೇಝ್ ಹೆಚ್ಚಿದೆ. 1992ರಿಂದ ಭಾರತ-ಪಾಕ್ ತಂಡಗಳು 7 ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, ಏಳು ಬಾರಿಯೂ ಜಯ ಸಾಧಿಸಿರುವ ಭಾರತವು ಅಜೇಯ ದಾಖಲೆಯನ್ನು ಉಳಿಸಿಕೊಂಡಿದೆ. ಆದರೆ ಈ ಎರಡು ದೇಶಗಳ ನಡುವಿನ ಸ್ಪರ್ಧೆಯು ಸಾಮಾಜಿಕ-ರಾಜಕೀಯ ಆಯಾಮವನ್ನು ಪಡೆದಿದ್ದು, ಇದು ಮೈದಾನದ ಹೊರಗೂ ಸದ್ದು ಮಾಡುತ್ತದೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ವೀಕ್ಷಕರಿದ್ದಾರೆ. ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಉಭಯ ತಂಡಗಳು ಅಹ್ಮದಾಬಾದ್‌ನಲ್ಲಿ ಗೆಲ್ಲುವ ವಿಶ್ವಾಸದಲ್ಲಿವೆ.
ಇತ್ತೀಚೆಗೆ ಏಶ್ಯಕಪ್‌ನಲ್ಲಿ ಗ್ರೂಪ್ ಹಂತದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಗ್ರೂಪ್ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಈ ಎರಡು ತಂಡಗಳು ಮುಖಾಮುಖಿಯಾದಾಗ ಭಾರತವು ಸುಲಭ ಜಯ ದಾಖಲಿಸಿತ್ತು.
2015ರ ವಿಶ್ವಕಪ್‌ನಲ್ಲಿ ಭಾರತವು ಕೊಹ್ಲಿ 107 ರನ್,ಶಿಖರ್ ಧವನ್ ಹಾಗೂ ಸುರೇಶ್ ರೈನಾ ಅವರ ಅರ್ಧಶತಕಗಳ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತ್ತು. ವೇಗದ ಬೌಲರ್ ಮುಹಮ್ಮದ್ ಶಮಿ 4 ವಿಕೆಟ್‌ಗಳನ್ನು ಕಬಳಿಸಿದ್ದು, ಪಾಕ್ 224 ರನ್‌ಗೆ ಆಲೌಟಾಗಿತ್ತು. ಭಾರತವು 76 ರನ್‌ನಿಂದ ಜಯ ಸಾಧಿಸಿತ್ತು.
2019ರಲ್ಲಿ ಪಾಕಿಸ್ತಾನವು ರೋಹಿತ್ ಶರ್ಮಾ ನೇತೃತ್ವದ ಭಾರತವನ್ನು ಎದುರಿಸಿದ್ದು, ರೋಹಿತ್ 140 ರನ್, ಕೊಹ್ಲಿ 77 ರನ್ ಹಾಗೂ ಕೆಎಲ್ ರಾಹುಲ್ 57 ರನ್ ಗಳಿಸಿದ್ದರು. ಭಾರತವು 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನವು 40 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದ್ದು ಭಾರತವು ಡಿಎಲ್ ನಿಯಮದ ಪ್ರಕಾರ 89 ರನ್‌ನಿಂದ ಜಯ ಸಾಧಿಸಿತ್ತು. ಪಾಕ್ ಪರ ಫಖರ್ ಝಮಾನ್ 62 ರನ್,ಬಾಬರ್ ಆಝಮ್ 48 ರನ್ ಹಾಗೂ ಇಮಾದ್ ವಸೀಂ ಔಟಾಗದೆ 46 ರನ್ ಗಳಿಸಿದ್ದರು. ವಿಜಯ ಶಂಕರ್(2-22), ಕುಲದೀಪ್ ಯಾದವ್(2-32) ಹಾಗೂ ಹಾರ್ದಿಕ್ ಪಾಂಡ್ಯ(2-44) ತಲಾ ಎರಡು ವಿಕೆಟ್ ಉರುಳಿಸಿದ್ದರು.
ಭಾರತವು ಈ ತನಕ ವಿಶ್ವಕಪ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದರೂ ಪಾಕ್‌ನ ಎಡಗೈ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರ ಮೊದಲ ಸ್ಪೆಲ್ ಹೇಗಿರುತ್ತದೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿಸಿದೆ. ಈ ಪಂದ್ಯದಲ್ಲಿ ಭಾವನಾತ್ಮಕ ಅಂಶಗಳು ಪಾತ್ರವಹಿಸಲಿದೆ.
ಜಾವೇದ್ ಮಿಯಾಂದಾದ್ ಹಾಗೂ ಚೇತನ್ ಶರ್ಮಾ, ಸಲೀಮ್ ಮಲಿಕ್ ಹಾಗೂ ಮಣಿಂದರ್ ಸಿಂಗ್, ಅಜಯ್ ಜಡೇಜ ಹಾಗೂ ವಕಾರ್ ಯೂನಿಸ್, ಹೃಶಿಕೇಶ್ ಕಾನಿಟ್ಕರ್ ಹಾಗೂ ಸಕ್ಲೇನ್ ಮುಷ್ತಾಕ್, ಸಚಿನ್ ತೆಂಡುಲ್ಕರ್ ಹಾಗೂ ಶುಐಬ್ ಅಖ್ತರ್, ವಿರಾಟ್ ಕೊಹ್ಲಿ ಹಾಗೂ ವಹಾಬ್ ರಿಯಾಝ್, ಜೋಗಿಂದರ್ ಶರ್ಮಾ ಹಾಗೂ ಮಿಸ್ಬಾಉಲ್ ಹಕ್(ಟಿ-20 ವಿಶ್ವಕಪ್)ನಡುವಿನ ಸ್ಪರ್ಧೆಯನ್ನು ಯಾರೂ ಮರೆಯಲಾರರು.
ಡೆಂಗಿ ಜ್ವರದಿಂದ ಗುಣಮುಖರಾಗಿರುವ ಸ್ಟಾರ್ ಬ್ಯಾಟ್ಸ್ ಮನ್ ಶುಭಮನ್ ಗಿಲ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಕುರಿತು ಖಚಿತತೆ ಇಲ್ಲ. ಕೊಲಂಬೊದಲ್ಲಿ ನಡೆದಿದ್ದ ಏಶ್ಯಕಪ್‌ನಲ್ಲಿ ಶಾಹೀನ್ ವಿರುದ್ಧ ಪವರ್‌ಪ್ಲೇ ವೇಳೆ 6 ಬೌಂಡರಿಗಳನ್ನು ಗಳಿಸಿದ್ದ ಗಿಲ್ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದ್ದರು. ಗಿಲ್‌ರಂತಹ ಆಟಗಾರರು ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್‌ಗೆ ಮಧ್ಯಮ ಓವರ್‌ಗಳಲ್ಲಿ ಸರಾಗವಾಗಿ ರನ್ ಗಳಿಸಲು ನೆರವಾಗಬಲ್ಲರು.
ಪಾಕ್ ತಂಡ ಉತ್ತಮ ಸ್ಪಿನ್ನರ್‌ಗಳ ಕೊರತೆ ಎದುರಿಸುತ್ತಿದೆ. ಪಾಕಿಸ್ತಾನದ ಉಪ ನಾಯಕ ಶಾದಾಬ್ ಖಾನ್ 2 ಪಂದ್ಯಗಳಲ್ಲಿ 16 ಓವರ್‌ಗಳಲ್ಲಿ 100 ರನ್ ನೀಡಿದ್ದಾರೆ. ಶಾದಾಬ್ ಹಾಗೂ ಹೊಸ ಚೆಂಡಿನ ಬೌಲರ್ ಹಸನ್ ಅಲಿ ಭಾರತಕ್ಕೆ ಸುಲಭ ಗುರಿಯಾಗುವ ಸಾಧ್ಯತೆಯಿದೆ.
ಪ್ರತಿಕೂಲ ಹವಾಮಾನದ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದನ್ನು ಯಾರೂ ಬಯಸುತ್ತಿಲ್ಲ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕ್ ಬ್ಯಾಟರ್ ಮುಹಮ್ಮದ್ ರಿಝ್ವಾನ್ ಛಲದಿಂದ ಬ್ಯಾಟಿಂಗ್ ಮಾಡಿದ್ದರು. ಅಬ್ದುಲ್ಲಾ ಶಫೀಕ್ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಸೌದ್ ಶಕೀಲ್ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದರು. ಆದರೆ, ಪಾಕಿಸ್ತಾನದ ನಾಯಕ ಬಾಬರ್ ಆಝಮ್ ತಂಡದ ಬ್ಯಾಟಿಂಗ್‌ನಲ್ಲಿ ನಿರ್ಣಾಯಕವಾಗಿದ್ದಾರೆ. ಬಾಬರ್ ಹಾಗೂ ಕುಲದೀಪ್ ಯಾದವ್ ನಡುವಿನ ಸಂಘರ್ಷ ಪಂದ್ಯಕ್ಕೆ ರೋಚಕತೆ ನೀಡಬಹುದು.
ಕಳೆದ 2 ಪಂದ್ಯಗಳಲ್ಲಿ ಇಮಾಮ್ ಉಲ್ ಹಕ್ ದೊಡ್ಡ ಇನಿಂಗ್ಸ್ ಆಡಲು ವಿಫಲರಾಗಿದ್ದರು. ಹಕ್ ಬದಲಿಗೆ ಫಖರ್ ಝಮಾನ್ ಅವರು ಶಫೀಕ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಭಾರತವು ಇದೀಗ 8ನೇ ಕ್ರಮಾಂಕದಲ್ಲಿ ಆರ್.ಅಶ್ವಿನ್ ಹಾಗೂ ಶಾರ್ದೂಲ್ ಠಾಕೂರ್ ಪೈಕಿ ಯಾರನ್ನು ಆಡಿಸಬೇಕೆಂಬ ಗೊಂದಲದಲ್ಲಿದೆ. ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೆ ಶಾರ್ದೂಲ್ ಉತ್ತಮ ಆಯ್ಕೆಯಾಗುತ್ತಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಈ ತನಕ ನಡೆದಿರುವ ಎಲ್ಲ 7 ವಿಶ್ವಕಪ್ ಪಂದ್ಯಗಳು ರೋಚಕತೆಯಿಲ್ಲದೆ ಸಾಗಿದ್ದು, ಭಾರತವೇ ಎಲ್ಲ ಪಂದ್ಯಗಳಲ್ಲಿ ಜಯಶಾಲಿಯಾಗಿತ್ತು.
ಭಾರತ ಹಾಗೂ ಪಾಕ್ ಪಂದ್ಯದಲ್ಲಿ ಆಟಗಾರರ ನಡುವಿನ ಜಿದ್ದಾಜಿದ್ದಿನ ಹೋರಾಟವು ನೆನಪಿನಲ್ಲಿ ಉಳಿದಿದೆ. 1992ರಲ್ಲಿ ಜಾವೇದ್ ಮಿಯಾಂದಾದ್ ಹಾಗೂ ಕಿರಣ್ ಮೋರೆ, 1996ರಲ್ಲಿ ಬೆಂಗಳೂರಿನಲ್ಲಿ ವೆಂಕಟೇಶ್ ಪ್ರಸಾದ್ ಹಾಗೂ ಅಮಿರ್ ಸೊಹೈಲ್, 2003ರಲ್ಲಿ ಸೆಂಚೂರಿಯನ್‌ನಲ್ಲಿ ಹರ್ಭಜನ್ ಸಿಂಗ್ ಹಾಗೂ ಮುಹಮ್ಮದ್ ಯೂಸುಫ್ ನಡುವಿನ ವಾಕ್ಸಮರ ಎಲ್ಲರ ಗಮನ ಸೆಳೆದಿದೆ.
1.32,000 ಪ್ರೇಕ್ಷಕರ ಸಾಮರ್ಥ್ಯವಿರುವ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಭಾರತ-ಪಾಕ್ ಪಂದ್ಯದ ಟಿಕೆಟ್‌ಗಳೆಲ್ಲವೂ ಮಾರಾಟವಾಗಿದ್ದು, ಹೈದರಾಬಾದ್ ನಗರದಲ್ಲಿ ಕ್ರಿಕೆಟ್ ಜ್ವರ ಆವರಿಸಿದೆ. ಹೊಟೇಲ್‌ಗಳು ಭರ್ತಿಯಾಗಿವೆ.
ನಗರಕ್ಕೆ ಬರುವ ವಿಮಾನದ ದರಗಳು 4 ಪಟ್ಟು ಏರಿಕೆಯಾಗಿವೆ. ರೈಲ್ವೆ ಇಲಾಖೆಯು ಮುಂಬೈನಿಂದ ಅಹ್ಮದಾಬಾದ್‌ಗೆ ಹೆಚ್ಚುವರಿ ರೈಲಿನ ವ್ಯವಸ್ಥೆ ಮಾಡಿದೆ.