ಜೂನ್ 9ಕ್ಕೆ ಭಾರತ-ಪಾಕಿಸ್ತಾನ ಟಿ20 ಪಂದ್ಯ, ಜೂ.29ರಂದು ಫೈನಲ್

Update: 2024-01-05 15:23 GMT

Photo: X \@icc

ಹೊಸದಿಲ್ಲಿ : ಮುಂಬರುವ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್ ಜೂನ್ 1ರಿಂದ ಆರಂಭವಾಗಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಜೂನ್ 9ರಂದು ನ್ಯೂಯಾರ್ಕ್ ನಲ್ಲಿ ಮುಖಾಮುಖಿಯಾಗಲಿವೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ಪ್ರಕಟಿಸಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಲಾಂಗ್ ಐಸ್ಲ್ಯಾಂಡ್ ನ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯಲಿದೆ. ಉಭಯ ತಂಡಗಳು 2022ರ ಅಕ್ಟೋಬರ್ 23ರಂದು ಆಸ್ಟ್ರೇಲಿಯದ ಮೆಲ್ಬರ್ನ್ ನಲ್ಲಿ ಕೊನೆಯ ಬಾರಿ ಟಿ-20 ವಿಶ್ವಕಪ್ ನಲ್ಲಿ ಸೆಣಸಾಡಿದ್ದವು. ಆಗ ಭಾರತವು ಕೊನೆಯ ಎಸೆತದಲ್ಲಿ 4 ವಿಕೆಟ್ ಗಳಿಂದ ರೋಚಕ ಜಯ ದಾಖಲಿಸಿತ್ತು. ವಿರಾಟ್ ಕೊಹ್ಲಿ ಔಟಾಗದೆ 82 ರನ್ ಗಳಿಸಿದ್ದರು.

ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತವು ಪಾಕ್ ವಿರುದ್ಧ ಉತ್ತಮ ಗೆಲುವಿನ ದಾಖಲೆ ಹೊಂದಿದೆ. ಎರಡೂ ತಂಡಗಳು ಪರಸ್ಪರ 7 ಪಂದ್ಯಗಳನ್ನು ಆಡಿದ್ದು ಭಾರತವು ಆರು ಬಾರಿ(2007ರ ಆವೃತ್ತಿಯ ಬೌಲ್-ಔಟ್ ಸಹಿತ)ಜಯ ಸಾಧಿಸಿದ್ದು, ಒಂದು ಬಾರಿ ಸೋತಿದೆ.

ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 9ನೇ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು 9 ತಾಣಗಳಲ್ಲಿ ನಡೆಯಲಿದ್ದು ಒಟ್ಟು 55 ಪಂದ್ಯಗಳನ್ನು ಆಡಲಾಗುತ್ತದೆ.

ಕೆರಿಬಿಯನ್ ನಾಡಿನಲ್ಲಿ ಆರು ವಿವಿಧ ದ್ವೀಪಗಳಲ್ಲಿ 41 ಪಂದ್ಯಗಳು ನಡೆಯಲಿದ್ದು, ಸೆಮಿ ಫೈನಲ್ ಪಂದ್ಯಗಳು ಟ್ರಿನಿಡಾಡ್ ಹಾಗೂ ಟೊಬಾಗೊ ಹಾಗೂ ಗಯಾನದಲ್ಲಿ, ಪ್ರಶಸ್ತಿ ಸುತ್ತಿನ ಪಂದ್ಯವು ಜೂನ್ 29ರಂದು ಬಾರ್ಬಡೋಸ್ ನಲ್ಲಿ ನಿಗದಿಪಡಿಸಲಾಗಿದೆ.

ಸಹ ಆತಿಥ್ಯ ವಹಿಸಿರುವ ಅಮೆರಿಕ ತಂಡ ಜೂನ್ 1ರಂದು ನಡೆಯಲಿರುವ ಟೂರ್ನಮೆಂಟ್ ನ ಉದ್ಘಾಟನಾ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ.

ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ 20 ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.

ತಲಾ ಐದು ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಭಜಿಸಲಾಗಿದ್ದು ಭಾರತವು ಎ ಗುಂಪಿನಲ್ಲಿ ಪಾಕಿಸ್ತಾನ, ಅಮೆರಿಕ, ಕೆನಡಾ ಹಾಗೂ ಐರ್ಲ್ಯಾಂಡ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ಬಿ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ, ನಮೀಬಿಯ, ಸ್ಕಾಟ್ಲ್ಯಾಂಡ್ ಹಾಗೂ ಒಮಾನ್ ತಂಡಗಳಿವೆ. ಸಿ ಗುಂಪಿನಲ್ಲಿ ನ್ಯೂಝಿಲ್ಯಾಂಡ್, ವೆಸ್ಟ್ಇಂಡೀಸ್, ಅಫ್ಘಾನಿಸ್ತಾನ, ಉಗಾಂಡ ಹಾಗೂ ಪಪುವಾ ನ್ಯೂಗಿನಿ ತಂಡಗಳಿವೆ. ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಹಾಗೂ ನೇಪಾಳ ತಂಡಗಳಿವೆ.

ಗ್ರೂಪ್ ಹಂತದ ಪಂದ್ಯಗಳ ನಂತರ ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಟೂರ್ನಮೆಂಟ್ ನ ಸೂಪರ್ ಸಿಕ್ಸ್ ಹಂತಕ್ಕೆ ತೇರ್ಗಡೆಯಾಗಲಿವೆ. ಉಳಿದ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಈ ಗುಂಪಿನ ಅಗ್ರ ಎರಡು ತಂಡಗಳು ಸೆಮಿ ಫೈನಲ್ ತಲುಪುತ್ತವೆ.

ಇಂಗ್ಲೆಂಡ್ ಹಾಲಿ ಚಾಂಪಿಯನ್ ಆಗಿದ್ದು, 2022ರ ಟಿ-20 ವಿಶ್ವಕಪ್ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು.

ಅಮೆರಿಕದ ಮೂರು ನಗರಗಳಾದ ನ್ಯೂಯಾರ್ಕ್, ಡಲ್ಲಾಸ್ ಹಾಗೂ ಮಿಯಾಮಿ ಟ್ವೆಂಟಿ-20 ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಿದೆ. ಕುತೂಹಲಕಾರಿ ಅಂಶವೆಂದರೆ ಭಾರತ ಆಡುವ ಎಲ್ಲ ಪಂದ್ಯಗಳು ಅಮೆರಿಕದ ಮಣ್ಣಿನಲ್ಲಿ ನಡೆಯಲಿದೆ.

ಜೂನ್ 5ರಂದು ಐರ್ಲ್ಯಾಂಡ್ ತಂಡವನ್ನು ಎದುರಿಸುವ ಮೂಲಕ ಭಾರತವು ವಿಶ್ವಕಪ್ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಭಾರತದ ಎ ಗುಂಪಿನ ವೇಳಾಪಟ್ಟಿ:

ಭಾರತ-ಐರ್ಲ್ಯಾಂಡ್-ಜೂನ್ 5(ನ್ಯೂಯಾರ್ಕ್)

ಭಾರತ-ಪಾಕಿಸ್ತಾನ-ಜೂನ್ 9(ನ್ಯೂಯಾರ್ಕ್)

ಭಾರತ-ಅಮೆರಿಕ-ಜೂನ್ 12(ನ್ಯೂಯಾರ್ಕ್)

ಭಾರತ-ಕೆನಡಾ-ಜೂನ್ 15(ಲೌಡರ್ಹಿಲ್)

(ಪಂದ್ಯದ ಸಮಯ ಇನ್ನಷ್ಟೇ ಪ್ರಕಟವಾಗಬೇಕಾಗಿದೆ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News