ಭಾರತದ ಬೌಲಿಂಗ್ ದಂತಕತೆ ಅನಿಲ್ ಕುಂಬ್ಳೆ ದಾಖಲೆ ಮುರಿದ ಮುಹಮ್ಮದ್ ಶಮಿ

Update: 2023-10-22 15:34 GMT

Photo : twitter/BCCI 

ಧರ್ಮಶಾಲಾ: ಈಗ ನಡೆಯುತ್ತಿರುವ ವಿಶ್ವಕಪ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದ ಭಾರತದ ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ರವಿವಾರ ನ್ಯೂಝಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಗೂ ಆಡುವ ಅವಕಾಶ ಪಡೆದರು.

ಬಲಗೈ ವೇಗದ ಬೌಲರ್ ಶಮಿ ಅವರು ತನ್ನನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದು, ನ್ಯೂಝಿಲ್ಯಾಂಡ್ ಆರಂಭಿಕ ಬ್ಯಾಟರ್ ವಿಲ್ ಯಂಗ್ ಅವರ ವಿಕೆಟನ್ನು ಬೇಗನೆ ಉರುಳಿಸಿದರು. ಈ ವಿಕೆಟ್‌ನ ಮೂಲಕ ಶಮಿ ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್‌ಗಳನ್ನು ಪಡೆದಿರುವ ಬೌಲರ್‌ಗಳ ಪಟ್ಟಿಯಲ್ಲಿ ಲೆಜೆಂಡರಿ ಬೌಲರ್ ಅನಿಲ್ ಕುಂಬ್ಳೆ(31 ವಿಕೆಟ್)ಯವರನ್ನು ಹಿಂದಿಕ್ಕಿದರು. ಶಮಿ ಇದೀಗ 12 ವಿಶ್ವಕಪ್ ಪಂದ್ಯಗಳಲ್ಲಿ ಒಟ್ಟು 36 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮಾಜಿ ವೇಗದ ಬೌಲರ್ ಝಹೀರ್ ಖಾನ್ ಹಾಗೂ ಜಾವಗಲ್ ಶ್ರೀನಾಥ್ ಒಟ್ಟು 44 ವಿಕೆಟ್‌ಗಳನ್ನು ಕಬಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ ಹಾಗೂ ಇನ್ನೋರ್ವ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಬದಲಿಗೆ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹಾಗೂ ಶಮಿಗೆ ಅವಕಾಶ ನೀಡಲಾಗಿದೆ.

ನ್ಯೂಝಿಲ್ಯಾಂಡ್ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಇಲ್ಲದೆ ಆಡುತ್ತಿದ್ದು, ಅಫ್ಘಾನಿಸ್ತಾನ ವಿರುದ್ಧ ಆಡಿರುವ ತಂಡವನ್ನೇ ಕಣಕ್ಕಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News