ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 78 ರನ್ ಜಯ
ಪಾರ್ಲ್: ಇಲ್ಲಿನ ಬೋಲ್ಯಾಂಡ್ ಪಾರ್ಕ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಅಂತಿಮ ಏಕದಿನ ಸರಣಿಯ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 78 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. 2-1 ಅಂತರದಿಂದ ಸರಣಿ ಗೆದ್ದಿದೆ.
ಸಂಜು ಸಾಮ್ಸನ್ ಆಕರ್ಷಕ ಶತಕ ಹಾಗೂ ಅರ್ಶದೀಪ್ ಸಿಂಗ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ 45.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿದ ಪರಿಣಾಮ 2018 ರ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಜಯಿಸಿದೆ.
ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ 7 ಏಕದಿನ ಸರಣಿಯನ್ನು ಆಡಿದ್ದು, 2018ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಸರಣಿ ಗೆದ್ದಿದ್ದು ಈ ವರೆಗಿನ ಸಾಧನೆಯಾಗಿತ್ತು. ಈ ಬಾರಿ ಕೆ ಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ತಂಡವು ಎರಡನೇ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆದ್ದು ಕೊಂಡಿತು.
ಭಾರತ ನೀಡಿದ್ದ 297 ರನ್ ಗಳ ಕಠಿಣ ಮೊತ್ತ ಬೆನ್ನಟ್ಟಲು ಬ್ಯಾಟಿಂಗ್ ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಟೋನಿ ಡಿ ಝೋರ್ಝಿ 6 ಬೌಂಡರಿ 3 ಸಿಕ್ಸರ್ ಸಹಿತ 81 ರನ್ ಇನ್ನಿಂಗ್ಸ್ ನ ಅತ್ಯಧಿಕ ಸ್ಕೋರ್ ಆಗಿತ್ತು. ಅದರೆ ಅವರು ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟರ್ ಕೂಡ ಭಾರತೀಯ ಸಂಘಟಿತ ಬೌಲಿಂಗ್ ಮುಂದೆ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಭಾರತದ ಪರ ಅರ್ಶದೀಪ್ ಸಿಂಗ್ 4 ವಿಕೆಟ್ ಪಡೆದರೆ, ಸುಂದರ್ 2 ಹಾಗೂ ಮುಖೇಶ್, ಅಕ್ಸರ್ ತಲಾ ಒಂದು ವಿಕೆಟ್ ಪಡೆದರು