ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ
ಜೋಹಾನ್ಸ್ ಬರ್ಗ್ : ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ದುಕೊಂಡಿತು. ಭಾರತದ ಅರ್ಷದೀಪ್ ಸಿಂಗ್, ಆವೇಶ್ ಖಾನ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ 27.3 ಓವರ್ ಗಳಲ್ಲಿ 116 ರನ್ ಗೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾದ ಅಲ್ಪ ಗುರಿ ಬೆನ್ನಟ್ಟಿದ ಭಾರತ 2 ವಿಕೆಟ್ ಕಳೆದುಕೊಂಡು 16.4 ಓವರ್ ಗಳಲ್ಲಿ ಗುರಿ ಮುಟ್ಟಿತು. ಭಾರತದ ಪರ ಸಾಯಿ ಸುದರ್ಶನ್ 43 ಎಸೆತಗಳಲ್ಲಿ 9 ಬೌಂಡರಿ ಸಹಿತ 55 ರನ್ ಗಳಿಸಿದರು. ಪಾದಾರ್ಪಣೆ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಅರ್ಧ ಶತಕ ಗಳಿಸಿ ಅಜೇಯರಾಗಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಶ್ರೇಯಸ್ ಅಯ್ಯರ್ 45 ಎಸೆತಗಳಲ್ಲಿ 52 ರನ್ ಗಳಿಸಿದರು. 6 ಬೌಂಡರಿ ಒಂದು ಸಿಕ್ಸರ್ ಬಾರಿಸಿ ಆಂಡಿಲೆ ಫೆಹ್ಲುಕ್ವಾಯೋ ಅವರ ಎಸೆತದಲ್ಲಿ ಡೇವಿಡ್ ಮಿಲ್ಲರ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ತಿಲಕ್ ವರ್ಮಾ 1 ರನ್ ಗಳಿಸಿ ಅಜೇಯರಾದರು. ಆರಂಭಿಕ ಆಟಗಾರ ಋತ್‌ರಾಜ್ ಗಾಯಕ್ವಾಡ್ 10 ಎಸೆತಗಳಲ್ಲಿ 5 ರನ್ ಗಳಿಸಿ ವ್ಯಾನ್ ಮುಲ್ಡೆರ್ ಅವರ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು.
ದಕ್ಷಿಣ ಆಫ್ರಿಕಾ ಪರ ವ್ಯಾನ್ ಮುಲ್ಡೆರ್, ಆಂಡಿಲೆ ಫೆಹ್ಲುಕ್ವಾಯೊ ತಲಾ ಒಂದು ವಿಕೆಟ್ ಪಡೆದರು. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.