ಏಶ್ಯನ್ ಗೇಮ್ಸ್: ಶೂಟಿಂಗ್‍ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ರೋಶಿಬಿನಾಗೆ ಬೆಳ್ಳಿ
ಹಾಂಗ್‍ಝೌ (ಚೀನಾ): ಚೀನಾದ ಹಾಂಗ್‍ಝೌನಲ್ಲಿ ನಡೆಯುತ್ತಿರುವ 19ನೇ ಏಶ್ಯನ್ ಗೇಮ್ಸ್ ನ ಐದನೇ ದಿನವಾದ ಗುರುವಾರ ಭಾರತ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆದ್ದಿದೆ.
ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಚಿನ್ನ ಗೆದ್ದರೆ, ಮಹಿಳೆಯರ 60 ಕೆಜಿ ವುಶು ಸ್ಪರ್ಧೆಯಲ್ಲಿ ನವೋರೆಮ್ ರೋಶಿಬಿನಾ ದೇವಿ ಬೆಳ್ಳಿ ಪಡೆದಿದ್ದಾರೆ. ಅದೇ ವೇಳೆ, ಕುದುರೆ ಸವಾರಿ ವೈಯಕ್ತಿಕ ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಅನೂಶ್ ಅಗರ್ವಾಲ ಕಂಚು ಪಡೆದಿದ್ದಾರೆ.
ಪುರುಷರ 10 ಮೀ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ:
ಹಾಂಗ್‍ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‍ನಲ್ಲಿ, ಪುರುಷರ 10 ಮೀಟರ್ ಏರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತ ಗುರುವಾರ ಚಿನ್ನ ಗೆದ್ದಿದೆ. ಅದೇ ವೇಳೆ, ಇಬ್ಬರು ಶೂಟರ್‍ಗಳು ವೈಯಕ್ತಿಕ ವಿಭಾಗದ ಫೈನಲ್ ತಲುಪಿದ್ದಾರೆ.
ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮ ಮತ್ತು ಶಿವ ನರ್ವಾಲ್‍ರನ್ನು ಒಳಗೊಂಡ ಭಾರತೀಯ ತಂಡವು ಚೀನಾ ತಂಡವನ್ನು ತೆಳು ಅಂತರದಿಂದ ಸೋಲಿಸಿತು. ಇದರೊಂದಿಗೆ, ಶೂಟಿಂಗ್ ಕಣದಲ್ಲಿ ಭಾರತವು ನಾಲ್ಕನೇ ಚಿನ್ನವನ್ನು ಜಯಿಸಿತು.
ಈವರೆಗೆ ಭಾರತೀಯ ಶೂಟರ್‍ಗಳು ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚುಗಳನ್ನು ಗೆದ್ದಿದ್ದಾರೆ.
ಭಾರತೀಯ ತಂಡದ ಮೂವರು ಶೂಟರ್‍ಗಳು ಒಟ್ಟು 1734 ಅಂಕಗಳನ್ನು ಗಳಿಸಿದರು. ಇದು ಚೀನಾ ಗಳಿಸಿದ ಅಂಕಕ್ಕಿಂತ ಕೇವಲ ಒಂದು ಹೆಚ್ಚಾಗಿತ್ತು. 1733 ಅಂಕಗಳೊಂದಿಗೆ ಚೀನಾವು ಬೆಳ್ಳಿ ಪಡೆಯಿತು ಮತ್ತು ವಿಯೆಟ್ನಾಮ್ 1730 ಅಂಕಗಳೊಂದಿಗೆ ಕಂಚು ಗೆದ್ದಿತು.
ಸರಬ್ಜೋತ್ ಮತ್ತು ಅರ್ಜುನ್ ವೈಯಕ್ತಿಕ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಈ ವಿಭಾಗದಲ್ಲೂ ಪದಕಗಳ ನಿರೀಕ್ಷೆಯಿದೆ.
ವೈಯಕ್ತಿಕ ವಿಭಾಗದಲ್ಲಿ ಪದಕವಂಚಿತ ಭಾರತ:
ಏಶ್ಯನ್ ಗೇಮ್ಸ್‍ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯ ಫೈನಲ್‍ನಲ್ಲಿ ಗುರುವಾರ ಭಾರತೀಯ ಶೂಟರ್‍ಗಳು ಪದಕ ಗೆಲ್ಲುವಲ್ಲಿ ವಿಫಲರಾದರು.
ಸರಬ್ಜೋತ್ ಸಿಂಗ್ 199.0 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, ಅರ್ಜುನ್ 113.3 ಅಂಕಗಳೊಂದಿಗೆ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು.
60 ಕೆಜಿ ವುಶು: ರೋಶಿಬಿನಾ ದೇವಿಗೆ ಬೆಳ್ಳಿ:
ಹಾಂಗ್‍ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‍ನಲ್ಲಿ ಗುರುವಾರ ಮಹಿಳೆಯರ 60 ಕೆಜಿ ವುಶು ಸಾಂಡ ಫೈನಲ್‍ನಲ್ಲಿ ಭಾರತದ ನವೋರೆಮ್ ರೋಶಿಬಿನಾ ದೇವಿ ಸೋಲನುಭವಿಸಿದ್ದಾರೆ. ಅವರನ್ನು ಚೀನಾದ ವು ಶಿಯಾವೊವೈ 2-0 ಸೆಟ್‍ಗಳಿಂದ ಸೋಲಿಸಿದರು. ಇದರೊಂದಿಗೆ ರೋಶಿಬಿನಾ ದೇವಿ ಬೆಳ್ಳಿ ಪದಕಕ್ಕೆ ತೃಪ್ತರಾದರು.
ಈ ವಿಭಾಗದಲ್ಲಿ ಚೀನಾದ ಸ್ಪರ್ಧಿ ಹಾಲಿ ಚಾಂಪಿಯನ್ ಆಗಿದ್ದಾರೆ. ರೋಶಿಬಿನಾ ಆರಂಭದಿಂದಲೇ ಚೀನಾ ಸ್ಪರ್ಧಿಯಿಂದ ಕಠಿಣ ಸವಾಲು ಎದುರಿಸಿದರು. ವು ಶಿಯಾವೊವೈ ಆರಂಭದಿಂದಲೇ ಮೇಲುಗೈ ಪಡೆದರು. ಎರಡು ಸುತ್ತಿನ ಹೋರಾಟದ ಬಳಿಕ, ನಿರ್ಣಾಯಕರು ಚೀನಾದ ಸ್ಪರ್ಧಿಯನ್ನು ವಿಜಯಿ ಎಂಬುದಾಗಿ ಘೋಷಿಸಿದರು.
2018ರಲ್ಲಿ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‍ನಲ್ಲಿ ಮಣಿಪುರದ ಕ್ರೀಡಾಪಟು ರೋಶಿಬಿನಾ ಕಂಚು ಗೆದ್ದಿದ್ದರು. ಈ ಬಾರಿ ಬೆಳ್ಳಿ ಗೆಲ್ಲುವ ಮೂಲಕ ತನ್ನ ದರ್ಜೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.