11 ಎಸೆತದಲ್ಲಿ ಸೊನ್ನೆ ರನ್, ಆರು ವಿಕೆಟ್ ನಷ್ಟ: ಭಾರತದ ನಾಟಕೀಯ ಕುಸಿತ ಇತಿಹಾಸದಲ್ಲೇ ಪ್ರಥಮ!
ಕೇಪ್‍ಟೌನ್: ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಬುಧವಾರ ಹಲವು ನಾಟಕೀಯ ತಿರುವುಗಳಿಗೆ ಕಾರಣವಾಯಿತು. ಮುಹಮ್ಮದ್ ಸಿರಾಜ್ ಅವರ ಮಾರಕ ದಾಳಿಗೆ ನಲುಗಿದ ಹರಿಣ ಪಡೆ ಕೇವಲ 55 ರನ್‍ಗಳಿಗೆ ಆಲೌಟ್ ಆಯಿತು. ಭಾರತದ ಇನಿಂಗ್ಸ್ ಆರಂಭವಾದಾಗ ಬೃಹತ್ ಮೊತ್ತ ದಾಖಲಿಸುವ ಸೂಚನೆ ಕಂಡುಬಂದಿತ್ತು. ಆದರೆ ಕೊನೆಯ 11 ಎಸೆತಗಳಲ್ಲಿ ಭಾರತ ಯಾವುದೇ ರನ್ ಗಳಿಸದೇ 6 ವಿಕೆಟ್ ಕಳೆದುಕೊಂಡ ಘಟನೆ, ಕ್ರಿಕೆಟ್‍ನಲ್ಲಿ ಏನೂ ಸಂಭವಿಬಸಹುದು ಎಂಬುದಕ್ಕೆ ಸಾಕ್ಷಿಯಾಯಿತು. 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಇಂಥ ಪತನ ಇದೇ ಮೊದಲು.
ರೋಹಿತ್ ಪಡೆ 34ನೇ ಓವರ್ ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದ್ದಾಗ ಲುಂಗಿ ಗಿಡಿ ಎಸೆತದಲ್ಲಿ ಕೆ.ಎಲ್.ರಾಹುಲ್ ಔಟ್ ಆದರು. ಅದೇ ಓವರ್ ನಲ್ಲಿ ರವೀಂದ್ರ ಜಡೇಜಾ ಹಾಗೂ ಜಸ್‍ಪ್ರೀತ್ ಬುಮ್ರಾ ಅವರ ವಿಕೆಟ್ ಪತನವಾಯಿತು. ಮುಂದಿನ ಓವರ್ ನಲ್ಲಿ ಕಗಿಸೊ ರಬಡಾ, ವಿರಾಟ್ ಕೊಹ್ಲಿ ಹಾಗೂ ಪ್ರಸಿದ್ಧ್ ಕೃಷ್ಣ ಅವರ ವಿಕೆಟ್ ಕಬಳಿಸಿದರು. ಮುಹಮ್ಮದ್ ಸಿರಾಜ್ ರನೌಟ್ ಆದರು. ಹೀಗೆ ಕೊನೆಯ 11 ಎಸೆತಗಳಲ್ಲಿ ಯಾವುದೇ ರನ್ ಸೇರಿಸದೇ ಭಾರತ ಆರು ವಿಕೆಟ್ ಕಳೆದುಕೊಂಡಿತು.
ಇದು ಒಂದು ಇನಿಂಗ್ಸ್‍ನ ನಿರ್ದಿಷ್ಟ ರನ್‍ನಲ್ಲಿ ಅತಿಹೆಚ್ಚು ಸಂಖ್ಯೆಯ ವಿಕೆಟ್ ಪತನವಾದ ದಾಖಲೆಯಾಗಿದೆ. 1877ರಲ್ಲಿ ಟೆಸ್ಟ್ ಕ್ರಿಕೆಟ್ ಆರಂಭವಾದ ದಿನದಿಂದ ಯಾವುದೇ ತಂಡ ನಿರ್ದಿಷ್ಟ ರನ್‍ನಲ್ಲಿ ಐದಕ್ಕಿಂತ ಹೆಚ್ಚು ವಿಕೆಟ್‍ಗಳನ್ನು ಕಳೆದುಕೊಂಡಿರಲಿಲ್ಲ. ಇದಕ್ಕೂ ಮುನ್ನ ಒಂದೇ ಸ್ಕೋರ್‍ನಲ್ಲಿ 5 ವಿಕೆಟ್ ನಷ್ಟವಾದ ನಾಲ್ಕು ನಿರ್ದಶನಗಳಿದ್ದವು.