ಐಪಿಎಲ್ | ಚಾಂಪಿಯನ್ ಕೆಕೆಆರ್ ಗೆ 20 ಕೋಟಿ ರೂ. ಬಹುಮಾನ
ಹೊಸದಿಲ್ಲಿ: ಕೋಲ್ಕತಾ ನೈಟ್ ರೈಡರ್ಸ್ ತಂಡ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ 2024ರ ಆವೃತ್ತಿಯ ಐಪಿಎಲ್ ರವಿವಾರ ರಾತ್ರಿ ಚೆನ್ನೈನಲ್ಲಿ ತೆರೆ ಕಂಡಿದೆ. ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ಕೆಕೆಆರ್ ನಗದು ಬಹುಮಾನ 20 ಕೋಟಿ ರೂ. ತನ್ನದಾಗಿಸಿಕೊಂಡಿದೆ. ರನ್ನರ್ಸ್ ಅಪ್ ಹೈದರಾಬಾದ್ ತಂಡ ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ಕಾರಣ 13 ಕೋಟಿ ರೂ. ಬಹುಮಾನ ಪಡೆದಿದೆ.
ಈ ವರ್ಷದ ಐಪಿಎಲ್ ನ ವಿಜೇತ ತಂಡ, ರನ್ನರ್ಸ್ ಅಪ್ ಹಾಗೂ ಉತ್ತಮ ಪ್ರದರ್ಶನ ನೀಡಿದ ತಂಡಗಳು ಹಾಗೂ ಆಟಗಾರರಿಗೆ ಒಟ್ಟು 46.5 ಕೋಟಿ ರೂ. ಬಹುಮಾನ ಮೊತ್ತವನ್ನು ವಿತರಿಸಲಾಗಿದೆ.
ಅಗ್ರ ಎರಡು ತಂಡಗಳಲ್ಲದೆ, ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ತಮ್ಮ ಸಾಧನೆಗಾಗಿ ಗಮನಾರ್ಹ ನಗದು ಬಹುಮಾನ ಗೆದ್ದುಕೊಂಡಿವೆ. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ತಂಡ 7 ಕೋಟಿ ರೂ. ಹಾಗೂ 4ನೇ ಸ್ಥಾನ ಪಡೆದ ಎಫ್ ಡು ಪ್ಲೆಸಿಸ್ ನಾಯಕತ್ವದ ಆರ್ ಸಿ ಬಿ 6.5 ಕೋಟಿ ರೂ. ಬಹುಮಾನ ಗೆದ್ದುಕೊಂಡಿದೆ.
ಈ ಋತುವಿನಲ್ಲಿ 15 ಪಂದ್ಯಗಳಲ್ಲಿ 741 ರನ್ ಗಳಿಸಿ ಅಗ್ರ ರನ್ ಸ್ಕೋರರ್ ಎನಿಸಿಕೊಂಡು ಆರೆಂಜ್ ಕ್ಯಾಪ್ ಧರಿಸಿದ್ದ ವಿರಾಟ್ ಕೊಹ್ಲಿ 15 ಲಕ್ಷ ರೂ. ಸ್ವೀಕರಿಸಿದರು. ಕೊಹ್ಲಿ 154ರ ಸ್ಟ್ರೈಕ್ರೇಟ್ನಲ್ಲಿ ಒಂದು ಶತಕ ಹಾಗೂ 5 ಅರ್ಧಶತಕಗಳನ್ನು ಗಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಹರ್ಷಲ್ ಪಟೇಲ್ ಈ ವರ್ಷದ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಉರುಳಿಸಿ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡರು. 14 ಪಂದ್ಯಗಳಲ್ಲಿ 24 ವಿಕೆಟ್ ಗಳನ್ನು ಪಡೆದಿರುವ ಪಟೇಲ್ 15 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.
ಅತ್ಯುತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ಹೈದರಾಬಾದ್ ತಂಡದ ನಿತೀಶ್ ಕುಮಾರ್ ರೆಡ್ಡಿ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಕೆಕೆಆರ್ ಸ್ಪಿನ್ನರ್ ಸುನೀಲ್ ನರೇನ್ ವರ್ಷದ ಮೌಲ್ಯಯುತ ಆಟಗಾರ ಗೌರವಕ್ಕೆ ಪಾತ್ರರಾದರು. ಕೆಕೆಆರ್ 3ನೇ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಲು ನರೇನ್ ಮಹತ್ವದ ಕೊಡುಗೆ ನೀಡಿದ್ದಾರೆ.
ರಾಜಸ್ಥಾನದ ಸಂದೀಪ್ ಶರ್ಮಾ(5-18), ಮುಂಬೈ ಇಂಡಿಯನ್ಸ್ನ ಜಸ್ಪ್ರೀತ್ ಬುಮ್ರಾ(5-21), ಲಕ್ನೊದ ಯಶ್ ಠಾಕೂರ್(5-30),ಎಸ್ಆರ್ಎಚ್ನ ಟಿ.ನಟರಾಜನ್(4-19) ಹಾಗೂ ಸಿಎಸ್ಕೆಯ ತುಷಾರ್ ದೇಶಪಾಂಡೆ(4-27)ಈ ಟೂರ್ನಿಯ ಶ್ರೇಷ್ಠ ಬೌಲರ್ ಗಳೆಂಬ ಪ್ರಶಂಸೆ ಗಳಿಸಿದರು.
2024ರ ಐಪಿಎಲ್ ನಲ್ಲಿ ಬಹುಮಾನ ವಿಜೇತರ ಸಂಪೂರ್ಣ ಪಟ್ಟಿ
ವಿಜೇತ ತಂಡ: ಕೆಕೆಆರ್(20 ಕೋಟಿ ರೂ.)
ರನ್ನರ್ಸ್-ಅಪ್: ಎಸ್ ಆರ್ ಎಚ್(13 ಕೋಟಿ ರೂ.)
ಮೂರನೇ ಸ್ಥಾನ: ರಾಜಸ್ಥಾನ ರಾಯಲ್ಸ್(7 ಕೋಟಿ ರೂ.)
ನಾಲ್ಕನೇ ಸ್ಥಾನ: ಆರ್ ಸಿ ಬಿ(6.5 ಕೋಟಿ ರೂ.)
ಆರೆಂಜ್ ಕ್ಯಾಪ್: ವಿರಾಟ್ ಕೊಹ್ಲಿ-741 ರನ್(15 ಲಕ್ಷ ರೂ.)
ಪರ್ಪಲ್ ಕ್ಯಾಪ್: ಹರ್ಷಲ್ ಪಟೇಲ್-24 ವಿಕೆಟ್(15 ಲಕ್ಷ ರೂ.)
ವರ್ಷದ ಅತ್ಯಂತ ಮೌಲ್ಯಯುತ ಆಟಗಾರ: ಸುನೀಲ್ ನರೇನ್(12 ಲಕ್ಷ ರೂ.)
ವರ್ಷದ ಉದಯೋನ್ಮುಖ ಆಟಗಾರ: ನಿತೀಶ್ ಕುಮಾರ್ ರೆಡ್ಡಿ(20 ಲಕ್ಷ ರೂ.)
ಗರಿಷ್ಠ ಬೌಂಡರಿ ಗಳಿಸಿದ ಆಟಗಾರ: ಟ್ರಾವಿಸ್ ಹೆಡ್(64)
ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್: ಅಭಿಷೇಕ್ ಶರ್ಮಾ(42)
ವರ್ಷದ ಶ್ರೇಷ್ಠ ಸ್ಟ್ರೈಕರ್: ಜೇಕ್ ಫ್ರೆಸರ್-ಮೆಕ್ಗರ್ಕ್(234.04)
ವರ್ಷದ ಶ್ರೇಷ್ಠ ಕ್ಯಾಚ್: ರಮಣ್ದೀಪ್ ಸಿಂಗ್
ಫೇರ್ ಪ್ಲೇ ಅವಾರ್ಡ್: ಎಸ್ ಆರ್ ಎಚ್
ಪಿಚ್ ಹಾಗೂ ಗ್ರೌಂಡ್ ಅವಾರ್ಡ್: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್