ಐಪಿಎಲ್ | ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳ ಮುಂದೂಡಿಕೆ
ಮುಂಬೈ : ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳ ಘೋಷಣೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಮುಂದೂಡಬಹುದಾಗಿದೆ ಎಂಬ ಇಂಗಿತವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಗಳ ಮಾಲೀಕರು ಮತ್ತು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ವಿಳಂಬವು ಸೆಪ್ಟಂಬರ್ ಕೊನೆಯವರೆಗೆ ವಿಸ್ತರಿಸಬಹುದಾಗಿದೆ.
ಬಿಸಿಸಿಐಯ ವಾರ್ಷಿಕ ಮಹಾಸಭೆಯ ದಿನಾಂಕದ ಸುತ್ತಮುತ್ತಲಿನ ದಿನಗಳಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ನೀತಿಯನ್ನು ಅದು ಘೊಷಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ‘ಕ್ರಿಕ್‌ಬಝ್’ ವರದಿ ಮಾಡಿದೆ. ಮಹಾಸಭೆಯು ಸೆಪ್ಟಂಬರ್ 29ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಆಟಗಾರರನ್ನು ಉಳಿಸಿಕೊಳ್ಳುವ ನೀತಿಯ ಘೋಷಣೆ ಮುಂದೂಡಲ್ಪಡುವ ಸಾಧ್ಯತೆ ಇದೆ ಎಂಬ ಇಂಗಿತವನ್ನು ಈ ಬಗ್ಗೆ ಪ್ರಶ್ನಿಸಿದ ತಂಡಗಳ ಪ್ರತಿನಿಧಿಗಳಿಗೆ ಬಿಸಿಸಿಐ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಈ ವಿಷಯದಲ್ಲಿ ಸ್ಪಷ್ಟತೆಯನ್ನು ತಂಡಗಳು ಬಯಸುತ್ತಿವೆ. ಆದರೆ, ನೀತಿಯ ಘೋಷಣೆಗೆ ನಿರ್ದಿಷ್ಟ ಸಮಯವನ್ನು ಬಿಸಿಸಿಐ ನೀಡಿಲ್ಲ.
ಆಟಗಾರರನ್ನು ಉಳಿಸಿಕೊಳ್ಳುವ ನಿಯಮಾವಳಿಗಳ ಘೋಷಣೆಯನ್ನು ಬಿಸಿಸಿಐಯು ಮೂಲತಃ ಆಗಸ್ಟ್ ಕೊನೆಯಲ್ಲಿ ಮಾಡಬೇಕಾಗಿತ್ತು. ಮುಂಬೈಯಲ್ಲಿ ಕಳೆದ ತಿಂಗಳು ನಡೆದ ತಂಡಗಳ ಮಾಲೀಕರ ಸಭೆಯಲ್ಲಿ ಈ ವಿಷಯವನ್ನು ಬಿಸಿಸಿಐ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದರು ಎನ್ನಲಾಗಿದೆ.
ಆದರೆ, ಈಗ ಆಗಸ್ಟ್ ಕೊನೆಗೆ ಬದಲಾಗಿ ಸೆಪ್ಟಂಬರ್ ಕೊನೆಯಲ್ಲಿ ನೀತಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಇಂಗಿತವನ್ನು ಬಿಸಿಸಿಐ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.