ಐಪಿಎಲ್ ಪ್ಲೇ ಆಫ್ | ಎರಡು ಸ್ಥಾನಗಳಿಗೆ ಐದು ತಂಡಗಳ ಸ್ಪರ್ಧೆ

Update: 2024-05-15 16:05 GMT

PC : @IPL

ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಂಗಳವಾರ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಸೋಲಿಸುವ ಮೂಲಕ ಪ್ಲೇ ಆಫ್ ಸುತ್ತಿಗೇರುವ ಅಲ್ಪ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದೆ. ಈ ಫಲಿತಾಂಶದ ನಂತರ ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಐಪಿಎಲ್ ನ ಪ್ಲೇ ಆಫ್ ನಲ್ಲಿ (ಅಗ್ರ-4ರಲ್ಲಿ) ಸ್ಥಾನ ಪಡೆದ ಎರಡನೇ ತಂಡ ಎನಿಸಿಕೊಂಡಿದೆ. ಕೋಲ್ಕತಾ ನೈಟ್ ರೈಡರ್ಸ್ ಈಗಾಗಲೇ ಪ್ಲೇ ಆಫ್ ಗೆ ತೇರ್ಗಡೆಯಾಗಿದೆ.

ಟೂರ್ನಮೆಂಟ್ ನಲ್ಲಿ ಈಗ ಕೇವಲ 5 ಪಂದ್ಯಗಳು ಆಡಲು ಬಾಕಿ ಇದೆ. ಪ್ಲೇ ಆಫ್ ನಲ್ಲಿ ಖಾಲಿ ಉಳಿದಿರುವ ಎರಡು ಸ್ಥಾನಗಳಿಗಾಗಿ ಐದು ತಂಡಗಳು ಪೈಪೋಟಿ ನಡೆಸುತ್ತಿವೆ.

► ಡೆಲ್ಲಿ ಕ್ಯಾಪಿಟಲ್ಸ್: 14 ಪಂದ್ಯ, 14 ಅಂಕ, ರನ್ ರೇಟ್: -0.377

ಡೆಲ್ಲಿ ತಂಡ 14 ಅಂಕ ಗಳಿಸಿ ತನ್ನ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ. ಆದರೆ ತಂಡದ ರನ್ ರೇಟ್-1.377 ಆಗಿದ್ದು ಅಗ್ರ-4ರಲ್ಲಿ ಸ್ಥಾನ ಪಡೆಯುವ ಅವಕಾಶ ಬಹುತೇಕ ಕ್ಷೀಣಿಸಿದೆ. ಡೆಲ್ಲಿ ಪ್ಲೇ ಆಫ್ ಗೆ ಪ್ರವೇಶಿಸಬೇಕಾದರೆ ಸಿಎಸ್ಕೆ ತಂಡ ಆರ್ ಸಿ ಬಿ ಯನ್ನು ಸೋಲಿಸಿ 16 ಅಂಕ ಗಳಿಸಬೇಕು. ಸನ್ರೈಸರ್ಸ್ ಹೈದರಾಬಾದ್ ಉಳಿದಿರುವ 2 ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಸೋಲಬೇಕು. ಆಗ ಸನ್ರೈಸರ್ಸ್ನ ರನ್ ರೇಟ್ ಡೆಲ್ಲಿಗಿಂತ ಕೆಳಗಿಳಿಯಲಿದೆ. ಇಂತಹ ಪವಾಡ ನಡೆದರೆ ಡೆಲ್ಲಿಗೆ ಅವಕಾಶ ಸಿಗಲಿದೆ.

► ಲಕ್ನೊ ಸೂಪರ್ ಜಯಂಟ್ಸ್: 13 ಪಂದ್ಯ, 12 ಅಂಕ, -0.787 ರನ್ ರೇಟ್

ಲಕ್ನೊ ತಂಡ ಇನ್ನೊಂದು ಪಂದ್ಯ ಗೆದ್ದು 14 ಅಂಕ ಗಳಿಸಬಹುದು. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಕೊನೆಯ ಪಂದ್ಯದಲ್ಲಿ ಲಕ್ನೊ ತಂಡ 200 ರನ್ ಗಳಿಸಿ, 100 ರನ್ ಅಂತರದಿಂದ ಮಣಿಸಿದರೆ ಅದರ ರನ್ ರೇಟ್ -0.351ಕ್ಕೆ ಏರಲಿದೆ. ಡೆಲ್ಲಿ ತಂಡದಂತೆಯೇ ಲಕ್ನೊ ಕೂಡ ಪ್ಲೇ ಆಫ್ ರೇಸ್ನಿಂದ ದೂರವಿದೆ. ಅಚ್ಚರಿಯ ಫಲಿತಾಂಶಗಳು ತಂಡದ ಅದೃಷ್ಟ ಬದಲಿಸಬಹುದು. ಸದ್ಯ ಲಕ್ನೊ 7ನೇ ಸ್ಥಾನದಲ್ಲಿದೆ. ಮಂಗಳವಾರದ ಪಂದ್ಯವನ್ನು ಸೋತಿದ್ದರೂ ಅಗ್ರ-4ರಲ್ಲಿ ಸ್ಥಾನ ಪಡೆಯುವ ಅವಕಾಶ ಶೇ.31ರಷ್ಟಿದೆ.

► ರಾಯಲ್ ಚಾಲೆಂಜರ್ಸ್ ಬೆಂಗಳೂರು: 13 ಪಂದ್ಯ, 12 ಅಂಕ, 0.387 ರನ್ ರೇಟ್

ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಆರ್ ಸಿ ಬಿ ಗೆ ಅಗ್ರ-4ರಲ್ಲಿ ಸ್ಥಾನ ಪಡೆಯಲು ಶೇ.50ರಷ್ಟು ಅವಕಾಶವಿದೆ. ಸಿಎಸ್ಕೆ ವಿರುದ್ಧ ಮೇ 18ರಂದು ಆಡಲಿರುವ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಲೇಬೇಕು. ಆದರೆ ಈ ಪಂದ್ಯವನ್ನು ಗೆಲ್ಲುವುದು ಮಾತ್ರವಲ್ಲ ಇತರ ತಂಡಗಳ ಫಲಿತಾಂಶವು ಆರ್ ಸಿ ಬಿ ಗೆ ಪೂರಕವಾಗಿರಬೇಕಾಗುತ್ತದೆ.

ಒಂದು ವೇಳೆ ಸನ್ರೈಸರ್ಸ್ ಹೈದರಾಬಾದ್ ತಂಡ ಮಳೆಬಾಧಿತ ಪಂದ್ಯದಿಂದ ಇಲ್ಲವೇ ಗೆಲುವಿನ ಮೂಲಕ ಕನಿಷ್ಠ ಒಂದು ಅಂಕ ಗಳಿಸಿದರೆ ಅಂಕಪಟ್ಟಿಯಲ್ಲಿ ಆರ್ ಸಿ ಬಿ ತಂಡ ಸಿಎಸ್ಕೆ ತಂಡವನ್ನು ಹಿಂದಿಕ್ಕಬಹುದು. ಇದರರ್ಥ ಆರ್ ಸಿ ಬಿ 200 ರನ್ ಗಳಿಸಿದರೆ ಕನಿಷ್ಠ 18 ರನ್ನಿಂದ ಸೋಲಿಸಬೇಕು. ಒಂದು ವೇಳೆ 200 ರನ್ ಚೇಸ್ ಮಾಡಿದರೆ 18.1 ಓವರ್ಗಳಲ್ಲಿ ಜಯ ಸಾಧಿಸುವ ಅಗತ್ಯವಿದೆ. ಒಂದು ವೇಳೆ ಆರ್ ಸಿ ಬಿ ಯ ಗೆಲುವಿನ ಅಂತರ ಕಡಿಮೆ ಇದ್ದರೆ ಸನ್ರೈಸರ್ಸ್ ಉಳಿದೆರಡು ಪಂದ್ಯಗಳಲ್ಲಿ ಸೋತರೆ ಮಾತ್ರ ಆರ್ ಸಿ ಬಿ ಅರ್ಹತೆ ಪಡೆಯಬಹುದು. ಸಿಎಸ್ಕೆ ವಿರುದ್ಧ ಪಂದ್ಯ ಮಳೆಗಾಹುತಿಯಾದರೆ ಅಥವಾ ಆ ಪಂದ್ಯದಲ್ಲಿ ಸೋತರೆ ಆರ್ ಸಿ ಬಿ ಟೂರ್ನಿಯಿಂದ ನಿರ್ಗಮಿಸಲಿದೆ.

► ಚೆನ್ನೈಸೂಪರ್ ಕಿಂಗ್ಸ್: 13 ಪಂದ್ಯ, 14 ಅಂಕ, ರನ್ ರೇಟ್ 0.528

ಚೆನ್ನೈ ತಂಡವು ಆರ್ ಸಿ ಬಿ ವಿರುದ್ಧ ಶನಿವಾರದ ಪಂದ್ಯವನ್ನು ಜಯಿಸಿದರೆ ಪ್ಲೇ ಆಫ್ ಗೆ ಅರ್ಹತೆ ಪಡೆಯುವುದು ಖಚಿತವಾಗಲಿದೆ. 200 ರನ್ ಚೇಸ್ ವೇಳೆ ಸಿಎಸ್ಕೆ ಸೋಲಿನ ಅಂತರ 18 ರನ್ನಿಂದ ಕಡಿಮೆ ಇದ್ದರೆ ಅದರ ನೆಟ್ ರನ್ ರೇಟ್ ಆರ್ ಸಿ ಬಿ ಗಿಂತ ಜಾಸ್ತಿ ಇರುತ್ತದೆ. ಒಂದು ವೇಳೆ ದೊಡ್ಡ ಅಂತರದಿಂದ ಸೋತರೆ, ಸನ್ರೈಸರ್ಸ್ ಉಳಿದೆರಡು ಪಂದ್ಯಗಳಲ್ಲಿ ಸೋಲನುಭವಿಸಿ ಚೆನ್ನೈಗಿಂತ ಕೆಳಗಿಳಿಯಲಿ ಎಂದು ನಿರೀಕ್ಷಿಸಬೇಕಾಗುತ್ತದೆ. ಆಗ ಸಿಎಸ್ಕೆ ಹಾಗೂ ಆರ್ ಸಿ ಬಿ ಮುಂದಿನ ಸುತ್ತಿಗೇರಲಿವೆ.

► ಸನ್ರೈಸರ್ಸ್ ಹೈದರಾಬಾದ್12 ಪಂದ್ಯ, 14 ಅಂಕ, ರನ್ ರೇಟ್: 0.406

ಸನ್ರೈಸರ್ಸ್ ತಂಡಕ್ಕೆ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಕೇವಲ ಒಂದು ಅಂಕದ ಅಗತ್ಯವಿದೆ. ಒಂದು ವೇಳೆ ಎರಡೂ ಪಂದ್ಯಗಳನ್ನು ಸೋತರೆ ಸಿಎಸ್ಕೆ ತಂಡ ಆರ್ ಸಿ ಬಿ ಯನ್ನು ಮಣಿಸುವುದನ್ನು ನಿರೀಕ್ಷಿಸಬೇಕಾಗುತ್ತದೆ. ಒಂದು ವೇಳೆ ಸನ್ರೈಸರ್ಸ್ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದರೆ, ಆರ್ ಸಿ ಬಿ ತಂಡ ಸಿಎಸ್ಕೆ ತಂಡವನ್ನು ಸೋಲಿಸಿದರೆ, ಸಿಎಸ್ಕೆಯ ರನ್ ರೇಟ್ ಕುಸಿದರೆ ಮಾತ್ರ ಸನ್ರೈಸರ್ಸ್ ಪ್ಲೇ-ಆಫ್ ಗೆ ಅರ್ಹತೆ ಪಡೆಯಲಿದೆ.

ಸನ್ರೈಸರ್ಸ್ ತಂಡ ತನ್ನ ಉಳಿದಿರುವ ಒಂದು ಇಲ್ಲವೇ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಅಗ್ರ-2ರಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯಲ್ಲಿರಲಿದೆ.

► ರಾಜಸ್ಥಾನ ರಾಯಲ್ಸ್: 12 ಪಂದ್ಯ, 16 ಅಂಕ, ರನ್ ರೇಟ್ : 0.349

ರಾಜಸ್ಥಾನ ತಂಡ ಇದೀಗ ಪ್ಲೇ ಆಫ್ ಗೆ ತೇರ್ಗಡೆಯಾಗಿದ್ದು, ಅಗ್ರ-2ರಲ್ಲಿ ಸ್ಥಾನ ಭದ್ರಪಡಿಸಲು ಉಳಿದಿರುವ ಪಂದ್ಯಗಳಲ್ಲಿ ಒಂದು ಇಲ್ಲವೇ ಎರಡರಲ್ಲೂ ಜಯ ಸಾಧಿಸಬೇಕಾಗುತ್ತದೆ. ಒಂದು ವೇಳೆ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿ 16 ಅಂಕದಲ್ಲೇ ಉಳಿದರೆ ಸನ್ರೈಸರ್ಸ್ ಹಾಗೂ ಸಿಎಸ್ಕೆ ತಂಡಗಳು ರಾಜಸ್ಥಾನ ತಂಡವನ್ನು ಹಿಂದಿಕ್ಕಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News