ಕ್ರೀಡಾ ಬದುಕಿನ 900ನೇ ಗೋಲು ಬಾರಿಸಿದ ರೊನಾಲ್ಡೊ

Update: 2024-09-06 16:49 GMT

Photo : x/EURO2024DE

ಲಿಸ್ಬನ್ (ಪೋರ್ಚುಗಲ್ : ನೇಶನ್ಸ್ ಲೀಗ್ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಗುರುವಾರ ಪೋರ್ಚುಗಲ್ ತಂಡವು ಕ್ರೊಯೇಶಿಯವನ್ನು 2-1 ಗೋಲುಗಳಿಂದ ಸೋಲಿಸಿದೆ. ಪೋರ್ಚುಗಲ್‌ನ ಡಿಯೋಗೊ ಡಾಲೊಟ್ ಆತಿಥೇಯ ಪೋರ್ಚುಗಲ್ ತಂಡದ ಮೊದಲ ಗೋಲನ್ನು ಬಾರಿಸಿದರು ಮತ್ತು ಒಂದು ಸ್ವಗೋಲು ಬಾರಿಸಿ ಎದುರಾಳಿಗೆ ಒಂದು ಗೋಲಿನ ಉಡುಗೊರೆ ನೀಡಿದರು.

ಈ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ಕ್ರೀಡಾ ಜೀವನದ 900ನೆ ಗೋಲು ಬಾರಿಸಿದರು.

ಏಳನೇ ನಿಮಿಷದಲ್ಲಿ ಗೋಲು ಬಾರಿಸಿದ ಡಾಲೊಟ್ ಪೋರ್ಚುಗಲ್‌ಗೆ ಮುನ್ನಡೆ ಒದಗಿಸಿದರು.

ಯುರೋ 2024 ಪಂದ್ಯಾವಳಿಯಲ್ಲಿ ಪೋರ್ಚುಗಲ್‌ನ ಐದು ಪಂದ್ಯಗಳಲ್ಲಿ ಗೋಲು ಗಳಿಸಲು ವಿಫಲರಾಗಿದ್ದ ರೊನಾಲ್ಡೊ 34ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದು ಅವ ಕ್ರೀಡಾ ಜೀವನದ 900ನೇ ಗೋಲಾಯಿತು. ಇದರೊಂದಿಗೆ ಪೋರ್ಚುಗಲ್ 2-0 ಗೋಲುಗಳ ಮುನ್ನಡೆ ಪಡೆಯಿತು.

ದ್ವಿತೀಯಾರ್ಧದ ನಾಲ್ಕನೇ ನಿಮಿಷದಲ್ಲಿ ಡಾಲೊಟ್ ತನ್ನದೇ ಗೋಲು ಪೆಟ್ಟಿಗೆಗೆ ಚೆಂಡನ್ನು ತಳ್ಳಿ ಎದುರಾಳಿ ಕ್ರೊಯೇಶಿಯಕ್ಕೆ ಒಂದು ಗೋಲಿನ ಉಡುಗೊರೆ ನೀಡಿದರು.

►ಪೋಲ್ಯಾಂಡ್‌ಗೆ 3-2ರ ಗೆಲುವು

ಗುರುವಾರ ನಡೆದ ನೇಶನ್ಸ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ ಮಿಡ್‌ಫೀಲ್ಡರ್ ನಿಕೋಲ ಝೆಲೆವ್‌ಸ್ಕಿ ಸ್ಟಾಪೇಜ್ ಸಮಯದಲ್ಲಿ ಬಾರಿಸಿದ ಪೆನಾಲ್ಟಿ ಕಾರ್ನರ್ ಮೂಲಕ ಪೋಲ್ಯಾಂಡ್ ತಂಡವು ಸ್ಕಾಟ್‌ಲ್ಯಾಂಡ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿದೆ.

ಎಂಟನೇ ನಿಮಿಷದಲ್ಲಿ ಸೆಬಾಸ್ಟಿಯನ್ ಝಿಮನ್‌ಸ್ಕಿ ಬಾರಿಸಿದ ಗೋಲಿನೊಂದಿಗೆ ಪೋಲ್ಯಾಂಡ್ ತನ್ನ ಖಾತೆಯನ್ನು ಆರಂಭಿಸಿತು. ಬಳಿಕ, ಮಧ್ಯಂತರ ವಿರಾಮಕ್ಕೆ ಸ್ವಲ್ಪ ಮೊದಲು ಲೆವನ್‌ಡೊವ್‌ಸ್ಕಿ ಗೋಲು ಬಾರಿಸಿ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು.

ಎರಡನೇ ಅವಧಿಯ ಆಟ ಆರಂಭಗೊಂಡ ಸೆಕೆಂಡ್‌ಗಳಲ್ಲೇ ಸ್ಕಾಟ್‌ಲ್ಯಾಂಡ್‌ನ ಬಿಲ್ಲಿ ಗಿಲ್ಮರ್ ಬಾರಿಸಿದ ಗೋಲಿನೊಂದಿಗೆ ಸ್ಕಾಟ್‌ಲ್ಯಾಂಡ್ ಸೋಲಿನ ಅಂತರವನ್ನು 2-1ಕ್ಕೆ ತಗ್ಗಿಸಿತು. 76ನೇ ನಿಮಿಷದಲ್ಲಿ ಸ್ಕಾಟ್ ಮೆಕ್‌ಟೋಮಿನೇ ಗೋಲು ಬಾರಿಸಿ ಅಂಕಪಟ್ಟಿಯನ್ನು 2-2ರಲ್ಲಿ ಸಮಬಲಗೊಳಿಸಿದರು.

ಅಂತಿಮವಾಗಿ ಸ್ಟಾಪೇಜ್ ಸಮಯದಲ್ಲಿ ಲಭಿಸಿದ ಪೆನಾಲ್ಟಿಯನ್ನು ಝೆಲೆವ್‌ಸ್ಕಿ ಗೋಲಾಗಿ ಪರಿವರ್ತಿಸಿ ಪೋಲ್ಯಾಂಡ್‌ಗೆ 3-2ರ ಗೆಲುವನ್ನು ಖಚಿತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News