128 ವರ್ಷಗಳ ನಂತರ 2028ರ ಲಾಸ್ ಏಂಜಲೀಸ್ ಒಲಿಪಿಂಕ್ಸ್ ಗೆ ಮರಳಲು ಸಜ್ಜಾದ ಕ್ರಿಕೆಟ್

Update: 2023-10-10 11:49 GMT

ಸಾಂದರ್ಭಿಕ ಚಿತ್ರ (PTI)

ಮುಂಬೈ: 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 128 ವರ್ಷಗಳ ನಂತರ ಮರಳಲು ಕ್ರಿಕೆಟ್ ಸಜ್ಜಾಗಿದ್ದು, ಅಕ್ಟೋಬರ್ 15-16ರಂದು ಮುಂಬೈನಲ್ಲಿ ಆಯೋಜನೆಗೊಂಡಿರುವ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನದಲ್ಲಿ ಈ ಪ್ರಸ್ತಾವಕ್ಕೆ ಅಧಿಕೃತ ಮುದ್ರೆ ಮಾತ್ರ ಬೀಳಬೇಕಿದೆ ಎಂದು hindustantimes.com ವರದಿ ಮಾಡಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಈ ಕುರಿತು ಲಾಸ್ ಏಂಜಲೀಸ್ ಸಂಘಟನಾ ಸಮಿತಿಯು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಇತರ ನಾಲ್ಕು ಮಾದರಿಯ ಕ್ರೀಡೆಗಳೊಂದಿಗೆ ಟಿ-20 ಕ್ರಿಕೆಟ್ ಅನ್ನು 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸೇರ್ಪಡೆ ಮಾಡಬೇಕು ಎಂದು ಶಿಫಾರಸು ಮಾಡಿದೆ ಎಂದು ಸೋಮವಾರ ಪ್ರಕಟಿಸಲಾಗಿದೆ. ಈ ಸುದ್ದಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಕೂಡಾ ದೃಢಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಐಸಿಸಿ ಮುಖ್ಯಸ್ಥ ಗ್ರೆಗ್ ಬಾರ್ಕ್ಲೆ, “ಲಾಸ್ ಏಂಜಲೀಸ್ 28 ಸಮಿತಿಯು ಕ್ರಿಕೆಟ್ ಅನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೇರ್ಪಡೆ ಮಾಡುವಂತೆ ಶಿಫಾರಸು ಮಾಡಿರುವುದರಿಂದ ನಾವು ರೋಮಾಂಚಿತರಾಗಿದ್ದೇವೆ. ಈ ಹೊತ್ತಿಗೆ ಇದು ಅಂತಿಮ ನಿರ್ಣಯವಲ್ಲದಿದ್ದರೂ, ಒಂದು ಶತಮಾನಕ್ಕೂ ಹೆಚ್ಚು ಅವಧಿಯ ನಂತರ ಕ್ರಿಕೆಟ್ ಅನ್ನು ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಾಣುವುದು ಮೈಲಿಗಲ್ಲಾಗಲಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್ ನೊಂದಿಗೆ ಬೇಸ್ ಬಾಲ್/ಸಾಫ್ಟ್ ಬಾಲ್, ಸ್ಕ್ವಾಶ್ ಹಾಗೂ ಲ್ಯಾಕ್ರೋಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಶಿಫಾರಸುಗೊಂಡಿರುವ ಇನ್ನಿತರ ಕ್ರೀಡೆಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News