ಈಜು ಲೋಕದ ಮಿಂಚಿನ ವೇಗದ ಮೀನು ಲಿಯೋನ್

Update: 2024-08-03 10:25 GMT

ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಈ ಬಾರಿ ಅತೀ ಹೆಚ್ಚು ಚಿನ್ನದ ಪದಕ ಗೆದ್ದ ಕ್ರೀಡಾಳುಗಳ ಪಟ್ಟಿ ನೋಡಿದರೆ ಮೊದಲು ಕಾಣುವ ಹೆಸರೇ ಫ್ರಾನ್ಸ್ ದೇಶದ ಈಜುಪಟು ಲಿಯೋನ್ ಮರ್ಶೊಂಡ್ !

ಜಗತ್ತಿನ ದಂತಕಥೆ ಮೈಕಲ್ ಫೆಲ್ಪ್ಸ್‌ನ ಉತ್ತರಾಧಿಕಾರಿ ಅಂತಲೇ ಬಿಂಬಿತರಾಗಿರುವ ಲಿಯೋನ್ ಮರ್ಶೊಂಡ್ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಂದೇ ರಾತ್ರಿಯಲ್ಲಿ, ಎರಡೇ ಗಂಟೆಗಳ ಅವಧಿಯಲ್ಲಿ ಎರಡೆರಡು ಚಿನ್ನದ ಪದಕ ಗೆದ್ದು, ಎರಡು ಒಲಿಂಪಿಕ್ ದಾಖಲೆಗಳೊಂದಿಗೆ ಒಟ್ಟಾರೆಯಾಗಿ ಈ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕಕ್ಕೆ ಕೊರಳೊಡ್ಡಿ ಸದ್ದು ಮಾಡಿದ್ದಾರೆ.

ಬರೀ 21 ವರ್ಷದ ಲಿಯೋನ್ ಮರ್ಶೊಂಡ್ ಈಗಾಗಲೇ ಫ್ರಾನ್ಸ್‌ನಲ್ಲಿ ಅತ್ಯಂತ ಜನಪ್ರಿಯ ಕ್ರೀಡಾಪಟು. ಮೊನ್ನೆ ಲಿಯೋನ್ ಮರ್ಶೊಂಡ್ ಭಾಗವಹಿಸಿದ್ದ ಸ್ಪರ್ಧೆಗಳನ್ನು ನೋಡಲು, ಆತನಿಗೆ ಬೆಂಬಲಿಸಲು, ಪ್ರೋತ್ಸಾಹಿಸಲು ಫ್ರಾನ್ಸ್ ನ ಗಣ್ಯರ ದಂಡೇ ನೆರೆದಿತ್ತು ; ಜೊತೆಗೆ ಪ್ಯಾರಿಸ್‌ನ ಬೀದಿ ಬೀದಿಯಲ್ಲಿ ಸ್ವಿಮ್ಮಿಂಗ್ ಸ್ಪರ್ಧೆಗಳ ಲೈವ್ ಆಯೋಜಿಸಲಾಗಿತ್ತು.

2001 ರಿಂದ 2009 ರವರಗೆ ಅಂತರ್‌ರಾಷ್ಟ್ರೀಯ ಈಜು ಕ್ರೀಡಾಕೂಟಗಳಲ್ಲಿ 39 ಚಿನ್ನದ ಪದಕಗಳನ್ನು ಗೆದ್ದು ತನ್ನ ದಾಖಲೆಗಳನ್ನು ತಾನೇ ಮುರಿಯುತ್ತಾ ಇತಿಹಾಸ ಸೃಷ್ಟಿಸಿರುವ ಮೈಕಲ್ ಫೆಲ್ಪ್ಸ್ ನನ್ನು ಮೀರುವುದು ಯಾವ ಈಜುಗಾರನಿಗೂ ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿತ್ತು.

ಆದರೆ,

2023ರಲ್ಲಿ ಫುಕು ವೋಕಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ, 400-ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ಫೆಲ್ಪ್ಸ್‌ನ ದಾಖಲೆಗಳಲ್ಲಿಯೇ ಹಳೆಯ ದಾಖಲೆಯಾಗಿದ್ದ 15 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದವರು 21 ವರ್ಷದ ಲಿಯೋನ್ ಮರ್ಶೊಂಡ್ . ಬರೀ ಎರಡೇ ಎರಡು ವರ್ಷಗಳಲ್ಲಿ ಐದು ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗೆದ್ದು ಅತ್ಯುತ್ತಮ ಫಾರ್ಮ್ ನಲ್ಲಿರುವ ಲಿಯೋನ್ ಮರ್ಶೊಂಡ್ ಈ ಒಲಿಂಪಿಕ್ಸ್ ನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲಬಹುದು ಎಂದು ಕ್ರೀಡಾ ವಿಶ್ಲೇಷಕರ ನಂಬಿಕೆಯಾಗಿದೆ.

ಲಿಯೋನ್ ಮರ್ಶೊಂಡ್‌ಗೆ ಇರುವ ಬಹುದೊಡ್ಡ ಶಕ್ತಿಯೆಂದರೆ ಆತನ ಹಿನ್ನೆಲೆ. ಮರ್ಶೊಂಡ್‌ನ ತಂದೆ ಕ್ಷೇವಿಯರ್ ಮರ್ಶೊಂಡ್ ಮತ್ತು ತಾಯಿ ಶಿಲೀಂ ಬಾನೆಟ್ ಇಬ್ಬರೂ ಫ್ರಾನ್ಸ್ ನ ಜನಪ್ರಿಯ ಈಜು ಪಟುಗಳು ಮತ್ತು ಇಬ್ಬರೂ ಕೂಡಾ ಒಲಿಂಪಿಕ್ಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದವರು. ತಮ್ಮ ಮಗ ಕೂಡಾ ತಮ್ಮ ಕನಸಾದ ಒಲಿಂಪಿಕ್ ಪದಕವನ್ನು ಗೆಲ್ಲಲಿ ಎಂದು ಬಯಸಿ, ಸಣ್ಣ ಪ್ರಾಯದಿಂದಲೇ ಅತ್ಯುತ್ತಮ ಗುಣಮಟ್ಟದ ತರಬೇತಿ ಮತ್ತು ಪ್ರೋತ್ಸಾಹ ನೀಡಿದವರು. ಲಿಯೋನ್ ಮರ್ಶೊಂಡ್ ನ ಕೋಚ್ ಕೂಡಾ ಮೈಕಲ್ ಫೆಲ್ಪ್ಸ್ ನ ಗುರು ಮತ್ತು ಕೋಚ್ ಆಗಿದ್ದ ಬಾಬ್ ಬೌಮನ್.

ವಿಶ್ವದ ಅತ್ಯುತ್ತಮ ಗುಣಮಟ್ಟದ ತರಬೇತಿ ಸಿಕ್ಕಿದೆ ಎಂದ ಮಾತ್ರಕ್ಕೆ ಲಿಯೋನ್ ಮರ್ಶೊಂಡ್ ಹಾದಿ ಬಹಳ ಸುಲಭವಾಗಿದೆ ಎಂದೇನಿಲ್ಲ ! ಹಂಗೇರಿಯ ಕ್ರಿಸ್ಟ್ ಮೀಲಕ್, ಕೆನಡಾದ ಇಲ್ಯಾ ಖಾರೂನ್, ಅಮೆರಿಕದ ಕಾರ್ಸನ್ ಫೋಸ್ಟರ್ ಹೀಗೆ ಹಲವು ಯುವ ಪ್ರತಿಭಾವಂತರ ದಂಡೇ ಪೈಪೋಟಿಯಲ್ಲಿದೆ. ಇಷ್ಟರ ನಡುವೆ ಲಿಯೋನ್ ಮರ್ಶೊಂಡ್ ಪ್ರಸಿದ್ಧಿಯಲ್ಲಿರುವುದಕ್ಕೆ ಕಾರಣ ಆತನ ಸ್ಥಿರತೆ! ಮೊನ್ನೆ 200 ಮೀ. ಫ್ಲೈ ಸ್ಪರ್ಧೆಯಲ್ಲಿ ಫೈನಲ್ ಪಂದ್ಯದ ಮೊದಲ ಅರ್ಧದಲ್ಲಿ ಹಿಂದೆ ಉಳಿದಿದ್ದರೂ ಧೃತಿಗೆಡದೆ, ಮಿಂಚಿನ ವೇಗದಲ್ಲಿ, ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದೇ ಸಾಕ್ಷಿ !

ಇನ್ನೂ ಇಪ್ಪತ್ತೆರಡು ವರ್ಷಗಳ ವಯಸ್ಸಿನ ಹುಡುಗನ ಈ ಸಾಧನೆ, ಛಲ, ಸಮರ್ಪಣಾ ಮನೋಭಾವ ನಮ್ಮ ದೇಶದ ಕ್ರೀಡಾಳುಗಳಿಗೂ ಮಾದರಿಯಾಗಲಿ !

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದರ್ಶನ್ ಜೈನ್

contributor

Similar News