ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾಕ್ಕೆ ಲಕ್ ʼನೋʼ
ಲಕ್ನೋ : ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯ ದಕ್ಷಿಣ ಆಫ್ರಿಕಾ ವಿರುದ್ಧ 177 ರನ್ ಗಳಿಗೆ ಆಲೌಟ್ ಆಯಿತು.
73 ರನ್ ಗಳಿಸಿರುವಾಗಲೇ ಪ್ರಮುಖ 6 ವಿಕೆಟ್ ಕಳೆದುಕೊಂಡು ತೀವ್ರ ಆಘಾತ ಅನುಭವಿಸಿದ ಆಸ್ಟ್ರೇಲಿಯಾ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. 74 ಎಸೆತ ಎದುರಿಸಿ 3 ಬೌಂಡರಿಗಳೊಂದಿಗೆ 46 ರನ್ ಗಳಿಸಿದ ಮಾರ್ನೂಸ್ ಲಾಬುಶೇನ್ ಸ್ವಲ್ಪ ಮಟ್ಟಿಗೆ ತಂಡದ ಮೊತ್ತ ಕಟ್ಟುವ ಸಾಹಸಕ್ಕೆ ತಾಳ್ಮೆಯ ಆಟವಾಡಿದ್ದು ಬಿಟ್ಟರೆ, ಉಳಿದ ಬ್ಯಾಟರ್ ಗಳು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ದಕ್ಷಿಣ ಆಫ್ರಿಕಾದ ಸಂಘಟಿತ ಬೌಲಿಂಗ್, ಫೀಲ್ಡಿಂಗ್ ನ ಮುಂದೆ ಆಸ್ಟ್ರೇಲಿಯಾದ ಯಾವೊಬ್ಬ ಬ್ಯಾಟರ್ ಸಿಕ್ಸರ್ ಬಾರಿಸಲಿಲ್ಲ. ನಾಯಕ ಪ್ಯಾಟ್ ಕಮಿನಸ್ ಕೊನೆಯ ಕ್ಷಣದಲ್ಲಿ ಭಾರೀ ಸೋಲು ತಪ್ಪಿಸಲು ಹೋರಾಟ ನಡೆಸಿದರು. ಆದರೂ ತಂಡವನ್ನು ಆಲೌಟ್ ನಿಂದ ರಕ್ಷಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.
ಮಿಷೆಲ್ ಮಾರ್ಷ್, ಡೇವಿಡ್ ವಾರ್ನರ್ ಕ್ರಮವಾಗಿ 7, 13 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿರುವುದು ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಹಿನ್ನಡೆ ನೀಡಿತು. ಮೂರನೇ ಕ್ರಮಾಂಕದ ಆಟಗಾರ ಸ್ಟೀವ್ ಸ್ಮಿತ್ 19 ರನ್ ಗಳಿಸಿದ್ದಾಗ ಕಾಗಿಸೋ ರಬಡ ಅವರ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು. ಜೋಶ್ ಇಂಗ್ಲಿಸ್ ಕಾಗಿಸೋ ಕೂಡ ರಬಡ ಅವರಿಗೆ ಬೌಲ್ಡ್ ಆದರು. ಗ್ಲೆನ್ ಮ್ಯಾಕ್ಸ್ ವೆಲ್ ಕೇಶವ್ ಮಹರಾಜ್ ಗೆ ಕಾಟ್ ಆಂಡ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಪರೇಡ್ ಗೆ ಸಾಥ್ ನೀಡಿದರು. ಮಾರ್ಕೂಸ್ ಸ್ಟೊಯಿನಸ್ ಅವರೂ ರಬಡಾ ಗೆ ವಿಕೆಟ್ ಒಪ್ಪಿಸಿದರು.
ದಕ್ಷಿಣ ಆಫ್ರಿಕಾದ ಬೌಲಿಂಗ್ ಬಲ ಆಸ್ಟ್ರೇಲಿಯಾವನ್ನು ಕಟ್ಟಿಹಾಕಿತು. ಕಾಗಿಸೋ ರಬಡಾ 3 ವಿಕೆಟ್ ಪಡೆದರು. ಕೇಶವ್ ಮಹರಾಜ್, ತಬ್ರೈಝ್ ಶಮ್ಸಿ, ಮಾರ್ಕೋ ಜಾನ್ಸನ್ ತಲಾ 2 ವಿಕೆಟ್ ಪಡೆದರು. ಲುಂಗಿ ಗಿಡಿ 1 ವಿಕೆಟ್ ಪಡೆದರು.
ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಗೆ ಇಳಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ ಅವರ 8 ಬೌಂಡರಿ ಹಾಗೂ 5 ಸಿಕ್ಸರ್ ಗಳ ನೆರವಿನಿಂದ 106 ಎಸೆತಗಳಲ್ಲಿ 109 ರನ್ ಗಳಿಸಿ, ತಂಡದ ಮೊತ್ತವನ್ನು ಹೆಚ್ಚಿಸಿದರು. ಐಡೆನ್ ಮ್ಯಾಕ್ರಂ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ 56 ರನ್ ಗಳಿಸಿದರು. ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾಗೆ ರನ್ ಗಳಿಕೆಗೆ ಅವಕಾಶ ಹೆಚ್ಚಿಸಿತು.
ಆಸ್ಟ್ರೇಲಿಯಾ ಪರ ಮಿಷೆಲ್ ಸ್ಟಾರ್ಕ್,ಗ್ಲೆನ್ ಮ್ಯಾಕ್ಸ್ ವೆಲ್ 2 ವಿಕೆಟ್ ಕಬಳಿಸಿದರು. ಜೋಶ್ ಹೇಝಲ್ ವುಡ್,ಪ್ಯಾಟ್ ಕಮಿನ್ಸ್, ಆಡಂ ಝಂಬಾ ತಲಾ ಒಂದೊಂದು ವಿಕೆಟ್ ಪಡೆದರು.
ಮುಂದುವರಿದ ವೈಫಲ್ಯ : ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವೆಂದ ಕೂಡಲೇ ಕ್ರಿಕೆಟ್ ಅಭಿಮಾನಿಗಳಿಗೆ ಸಹಜವಾಗಿಯೇ ಬಲಿಷ್ಠ ತಂಡಗಳ ನಡುವಿನ ಹೋರಾಟ ಎಂದು ಕುತೂಹಲ ಹೆಚ್ಚಿತ್ತು. ಇದುವರೆಗಿನ ವಿಶ್ವಕಪ್ ಪಂದ್ಯಗಳಲ್ಲಿ ಒಂದು ಹಂತದವರೆಗೆ ಬಲಿಷ್ಠ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ ಈ ವಿಶ್ವಕಪ್ ನಲ್ಲಿ ಸ್ಥಿರ ಪ್ರದರ್ಶನ ನೀಡಲು ಹೆಣಗಾಡುತ್ತಿದೆ. ವಿಶ್ವಕಪ್ ಗೆ ಕೆಲವೇ ದಿನಗಳ ಮುಂಚೆ ಭಾರತ ಪ್ರವಾಸ ಕೈಗೊಂಡಿದ್ದ ತಂಡ ಸರಣಿಯಲ್ಲಿ 2-1 ರಿಂದ ಸೋಲೊಪ್ಪಿಕೊಂಡಿತ್ತು. ಬಳಿಕ ಸತತ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಿದ್ದರೂ ಆಸ್ಟ್ರೇಲಿಯಾ ಇಲ್ಲಿನ ಪಿಚ್ ಗೆ ಇನ್ನೂ ಹೊಂದಿಕೊಂಡಿಲ್ಲ. ಸ್ಪಿನ್ ದಾಳಿಗೆ ಆಸ್ಟ್ರೇಲಿಯಾ ಬ್ಯಾಟರ್ ಗಳು ರನ್ ಗಳಿಸಲು ಪ್ರಯಾಸಪಡುತ್ತಿದ್ದಾರೆ.