ಕೆ.ಎಲ್.ರಾಹುಲ್ ವಿರುದ್ಧ ಲಕ್ನೋ ಮಾಲಕರ ರೇಗಾಟ ನಾಚಿಕೆಗೇಡು : ಮುಹಮ್ಮದ್ ಶಮಿ
ಹೊಸದಿಲ್ಲಿ : ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಅವರನ್ನು ಟಿವಿ ಕ್ಯಾಮೆರಾಗಳ ಮುಂದೆಯೇ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಲಕ್ನೊ ಸೂಪರ್ ಜಯಂಟ್ಸ್ ಮಾಲಿಕ ಸಂಜೀವ ಗೋಯೆಂಕಾ ಅವರ ವರ್ತನೆ ನಾಚಿಕೆಗೇಡಿತನದ್ದು. ಕ್ರೀಡೆಯಲ್ಲಿ ಇಂತಹದ್ದಕ್ಕೆ ಸ್ಥಾನವಿಲ್ಲ ಎಂದು ವೇಗದ ಬೌಲರ್ ಮುಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಲಕ್ನೊ ತಂಡ 10 ವಿಕೆಟ್ಗಳಿಂದ ಹೀನಾಯವಾಗಿ ಸೋತ ನಂತರ ಆರ್ಪಿಜಿ ಸಮೂಹದ ಮುಖ್ಯಸ್ಥ ಸಂಜೀವ್ ಗೋಯೆಂಕಾ ಅವರು ತಂಡದ ನಾಯಕ ರಾಹುಲ್ ವಿರುದ್ಧ ರೇಗಾಡಿದ ಹಾಗೂ ರಾಹುಲ್ ಸಂಯಮದಿಂದ ಇರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ದೃಶ್ಯವನ್ನು ಕೋಟಿಗಟ್ಟಲೆ ಜನ ನೋಡುತ್ತಾರೆ. ಕ್ಯಾಮೆರಾಗಳ ಮುಂದೆ ಹೀಗೆ ಮಾಡುವುದು, ಅದಕ್ಕೆ ಜನ ಪ್ರತಿಕ್ರಿಯಿಸುವುದು ಇವೆಲ್ಲಾ ನಾಚಿಕೆಗೇಡು. ಆಡುವ ಮಾತುಗಳಿಗೆ ಇತಿಮಿತಿ ಇರಬೇಕು. ಹೀಗೆ ಕೋಪದಿಂದ ಮಾತನಾಡುವುದು ತಪ್ಪು ಸಂದೇಶ ರವಾನಿಸುತ್ತದೆ ಎಂದು ಕ್ರಿಕ್ಬಝ್ ಲೈವ್ಗೆ ಶಮಿ ತಿಳಿಸಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್ ಆಡಿದ ನಂತರ ಶಮಿ ಹಿಮ್ಮಡಿ ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೇತರಿಕೆಯ ಹಾದಿಯಲ್ಲಿರುವ ಶಮಿ ಈ ವರ್ಷದ ಐಪಿಎಲ್ನಲ್ಲಿ ಆಡಿಲ್ಲ.