ಮಳೆಯಿಂದ ಅಫ್ಘಾನ್ ಜತೆಗಿನ ಪಂದ್ಯ ರದ್ದು; ಸೆಮೀಸ್ ಗೆ ಆಸೀಸ್ ಲಗ್ಗೆ

PC: x.com/CricketNDTV
ಲಾಹೋರ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯ ಶುಕ್ರವಾರ ಮಳೆಗೆ ಆಹುತಿಯಾದ ಹಿನ್ನೆಲೆಯಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡ ಟೂರ್ನಿಯ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಅಪ್ಘಾನಿಸ್ತಾನ ನೀಡಿದ 274 ರನ್ ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 12.5 ಓವರ್ ಗಳಲ್ಲಿ 109 ರನ್ ಗಳಿಸಿದಾಗ ಜೋರಾಗಿ ಸುರಿದ ಮಳೆಯಿಂದ ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿತ್ತು.
ಆಸ್ಟ್ರೇಲಿಯಾ ಇನಿಂಗ್ಸ್ ಆರಂಭದಲ್ಲೇ ಮಳೆಯಿಂದ ಅಡಚಣೆಯಾಯಿತು. ಒಂದು ಹಂತದಲ್ಲಿ ಪಿಚ್ ಸಂಪೂರ್ಣ ತೊಯ್ದ ಬಳಿಕ ಅಂಪೈರ್ಗಳು ಪಂದ್ಯದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಾಗದೇ ಪಂದ್ಯದ ರದ್ದತಿಯನ್ನು ಪ್ರಕಟಿಸಿದರು. ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿದ್ದು, 4 ಅಂಕ ಸಂಪಾದಿಸಿದ ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಿತು.
ಇನ್ನೊಂದೆಡೆ ಉತ್ಸಾಹಭರಿತ ಹೋರಾಟ ನೀಡುತ್ತಿರುವ ಅಪ್ಘಾನಿಸ್ತಾನದ ಸೆಮಿಫೈನಲ್ ಕನಸು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಫಲಿತಾಂಶವನ್ನು ಆಧರಿಸಿದೆ. ಅಫ್ಘಾನಿಸ್ತಾನ ಸೆಮೀಸ್ ತಲುಪಬೇಕಾದರೆ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾವನ್ನು ದೊಡ್ಡ ಅಂತರದಿಂದ ಸೋಲಿಸಬೇಕಾಗಿದೆ.
ಮಳೆಗೆ ಮುನ್ನ ಶುಕ್ರವಾರದ ಪಂದ್ಯದಲ್ಲಿ ಟ್ರಾವಿಸ್ ಹೆಡ್ 40 ಎಸೆತಗಳಲ್ಲಿ 59 ರನ್ ಸಿಡಿಸಿ ಆಸೀಸ್ ಗೆ ಅಬ್ಬರದ ಆರಂಭ ಒದಗಿಸಿದರು. 12.5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ 109 ರನ್ ಗಳಿಸಿದ್ದಾಗ ರಭಸದ ಮಳೆ ಪಂದ್ಯಕ್ಕೆ ಅಡ್ಡಿಯಾಯಿತು. ಇದಕ್ಕೂ ಮುನ್ನ ಸಿದ್ದೀಕುಲ್ಲಾ (85) ಮತ್ತು ಅಜ್ಮತ್ತುಲ್ಲಾ (67) ಅವರ ಹೋರಾಟದಿಂದ ಅಫ್ಘಾನಿಸ್ತಾನ ಸವಾಲಿನ ಮೊತ್ತ ಕಲೆಹಾಕಿತು.