ಮಯಾಂಕ್ ಅಗರ್ವಾಲ್ ಅಪಾಯದಿಂದ ಪಾರು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸ್ಥಳಾಂತರ
ಹೊಸದಿಲ್ಲಿ: ವಿಮಾನದೊಳಗೆ ಅಸ್ವಸ್ಥರಾಗಿ ಅಗರ್ತಲದ ಖಾಸಗಿ ಆಸ್ಪತ್ರೆಗೆ ಮಂಗಳವಾರ ದಾಖಲಾಗಿದ್ದ ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಮಯಾಂಕ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹೆಚ್ಚಿನ ಆರೈಕೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಾಗುವುದು ಎಂದು ಕರ್ನಾಟಕ ರಣಜಿ ತಂಡದ ಮ್ಯಾನೇಜರ್ ರಮೇಶ್ ಹೇಳಿದ್ದಾರೆ.
ಅಗರ್ತಲದಿಂದ ಹೊಸದಿಲ್ಲಿಗೆ ವಿಮಾನದಲ್ಲಿ ಹೊರಟಿದ್ದ ಮಯಾಂಕ್ ಕುಡಿಯುವ ನೀರೆಂದು ಭಾವಿಸಿ ದ್ರವ ಪದಾರ್ಥ ಸೇವಿಸಿದ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಘಟನೆ ನಡೆದಿತ್ತು. ಆ ನಂತರ ಅವರು ವಾಂತಿ ಮಾಡಿಕೊಳ್ಳಲಾರಂಭಿಸಿದ್ದು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿತ್ತು.
ಮಯಾಂಕ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ನಮಗೆ ವಿವರವಾಗಿ ತಿಳಿದಿಲ್ಲ. ನಾವು ಅವರನ್ನು ಬೆಂಗಳೂರಿಗೆ ಕರೆದೊಯ್ಯುತ್ತಿದ್ದೇವೆ ಎಂದು ರಮೇಶ್ ಹೇಳಿದ್ದಾರೆ.
ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಅಗರ್ತಲದ ನ್ಯೂ ಕ್ಯಾಪಿಟಲ್ ಕಾಂಪ್ಲೆಕ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ದೇಶಿಯ ಕ್ರಿಕೆಟ್ನ ಪ್ರಮುಖ ಆಟಗಾರನಾಗಿರುವ ಮಯಾಂಕ್ ಅಗರ್ವಾಲ್ ಪ್ರಸಕ್ತ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕವನ್ನು ಸಿಡಿಸಿ ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಮಯಾಂಕ್ ಅನುಪಸ್ಥಿತಿಯಲ್ಲಿ ಉಪ ನಾಯಕ ನಿಕಿನ್ ಜೋಸ್ ರೈಲ್ವೇಸ್ ವಿರುದ್ಧದ ಮುಂಬರುವ ರಣಜಿ ಪಂದ್ಯದಲ್ಲಿ ಕರ್ನಾಟಕದ ನಾಯಕತ್ವವಹಿಸಿಕೊಳ್ಳುವ ನಿರೀಕ್ಷೆ ಇದೆ.