ವಿಮಾನ ಪ್ರಯಾಣ ಸಂದರ್ಭ ಆರೋಗ್ಯದಲ್ಲಿ ಏರುಪೇರು: ಪೊಲೀಸ್ ದೂರು ದಾಖಲಿಸಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್
ಹೊಸದಿಲ್ಲಿ: ಹೊಸದಿಲ್ಲಿಗೆ ತೆರಳಬೇಕಿದ್ದ ವಿಮಾನವು ಟೇಕಾಫ್ ಆಗುವುದಕ್ಕೂ ಕೆಲವೇ ಹೊತ್ತಿಗೆ ಮುಂಚೆ ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಹಾಗೂ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುವಾಗ, ತಮ್ಮ ಆಸನದ ಪಕ್ಕ ಇರಿಸಿದ್ದ ದ್ರವದ ಚೀಲವೊಂದನ್ನು ಕುಡಿಯುವ ನೀರು ಎಂದು ಭಾವಿಸಿ, ಅದನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ಮಯಾಂಕ್ ಅಗರ್ವಾಲ್ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಈ ಕುರಿತು ಮಯಾಂಕ್ ಅಗರ್ವಾಲ್ ತಮ್ಮ ವ್ಯವಸ್ಥಾಪಕರ ಮೂಲಕ ಘಟನೆಯ ಸಂಬಂಧ ದೂರು ದಾಖಲಿಸಿದ್ದು, ಈ ವಿಷಯದ ಕುರಿತು ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಅಂತಾರಾಷ್ಟ್ರೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರೀಗ ಸ್ಥಿರವಾಗಿದ್ದಾರೆ ಹಾಗೂ ಅವರ ಆರೋಗ್ಯ ಸ್ಥಿತಿ ಸಹಜವಾಗಿದೆ. ಆದರೆ, ಅವರ ವ್ಯವಸ್ಥಾಪಕರು ನ್ಯೂ ಕ್ಯಾಪಿಟಲ್ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ನಿರ್ದಿಷ್ಟ ದೂರು ದಾಖಲಿಸಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ” ಎಂದು ಪಶ್ಚಿಮ ತ್ರಿಪುರಾದ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.